ಮೈಸೂರು,ಅಕ್ಟೋಬರ್,15,2020(www.justkannada.in): ಚಾಮುಂಡಿಬೆಟ್ಟಕ್ಕೆ ನಿಷೇಧ ಹಾಗೂ ಮೈಸೂರು ದಸರಾ ನೋಡಲು ಗ್ರಾಮೀಣ ಪ್ರದೇಶದ ಜನ ಮೈಸೂರಿಗೆ ಬರಬೇಡಿ ಎಂಬ ಅಧಿಕಾರಿಗಳ ಆದೇಶಕ್ಕೆ ಇತಿಹಾಸ ತಜ್ಞ ಪ್ರೊ.ನಂಜರಾಜ ಅರಸ್ ಕಿಡಿಕಾರಿದ್ದಾರೆ.
ಮೈಸೂರಿನಲ್ಲಿ ಇಂದು ಮಾತನಾಡಿ ಅಧಿಕಾರಿಗಳ ವಿರುದ್ಧ ಹರಿಹಾಯ್ದಿರುವ ಪ್ರೊ.ನಂಜರಾಜ ಅರಸ್, ಯಾವ ಸೀಮೆ ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ ಇವ್ರು. ಇದು ಹುಚ್ಚು ದರ್ಬಾರಿನ ಹುಚ್ಚು ನಿರ್ಧಾರ. ಜನರ ಸುಖಕ್ಕೊಸ್ಕರ ದಸರಾ ಕಾರ್ಯಕ್ರಮ ಮಾಡೋದು. ಹಣ ತಿನ್ನಕ್ಕಲ್ಲ, 15 ಕೋಟಿಯಲ್ಲಿ 13 ಕೋಟಿ ತಿನ್ನುವುದಕ್ಕಲ್ಲ. ಇಬ್ಬರು ಹೆಣ್ಣುಮಕ್ಕಳು(ರೋಹಿಣಿ ಸಿಂಧೂರಿ ಹಾಗೂ ಡಿ.ಭಾರತಿ) ಹೊರಡಿಸಿರುವ ಆದೇಶ ಮೂರ್ಖತನದಿಂದ ಕೂಡಿದೆ. ಹೆಣ್ಣು ಹೃದಯಗಳಿಗೆ ಇಂತಹ ಯೋಚನೆ ಯಾಕೆ ಬಂತು ಗೊತ್ತಿಲ್ಲ. ನಿಮಗೆ ತಾಯಿ ಹೃದಯ ಇದ್ಯಾ..? ಮೂರ್ಖತನದ ಆದೇಶವನ್ನ ಕೂಡಲೇ ಹಿಂದಕ್ಕೆ ಪಡೆಯಿರಿ ಎಂದು ಆಗ್ರಹಿಸಿದರು.
ಕೇವಲ ಸಿಎಂ, ಮಂತ್ರಿಗಳು, ಅಧಿಕಾರಿಗಳ ದರ್ಶನಕ್ಕೆ ಸೀಮಿತ ಎಂದು ಷರತ್ತು ವಿಧಿಸುವುದು ಸರಿ ಅಲ್ಲ…
ಚಾಮುಂಡಿ ಸಾರ್ವಜನಿಕರ ಆರಾಧ್ಯ ದೈವ. ಶುಭ ಗಳಿಗೆಯಲ್ಲಿ ದರುಶನ ಪಡೆಯಲು ಭಕ್ತರಿಗೂ ಆಸೆ ಇರುತ್ತೆ. ಶುಭಗಳಿಗೆ ಕೇವಲ ಯಡಿಯೂರಪ್ಪ,ಮಂತ್ರಿಗಳು, ಅಧಿಕಾರಿಗಳ ದರುಶನಕ್ಕೆ ಸೀಮಿತ ಎಂದು ಷರತ್ತು ವಿಧಿಸುವುದು ಸರಿ ಅಲ್ಲ. ಸರಳ ದಸರಾ ಆಚರಿಸುವಾಗ ನಾಲ್ಕು ದಿನ ಮುಂಚಿತವಾಗಿ ನಿರ್ಭಂಧಿಸುವ ಔಚಿತ್ಯವೇನು ಎಂದು ಪ್ರಶ್ನಿಸಿರುವ ನಂಜರಾಜೇ ಅರಸ್, ದಸರಾ ಉದ್ಘಾಟನೆ ಕಾರ್ಯಕ್ರಮಕ್ಕೆ ಎರಡು ಗಂಟೆಗಳ ಮುನ್ನ ನಿರ್ಭಂಧಿಸಲಿ. ನಾಲ್ಕು ದಿನ ಪ್ರವೇಶ ನಿರ್ಭಂಧಿಸುವುದು ಅವೈಜ್ಞಾನಿಕ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಮೀಣ ಪ್ರದೇಶದ ಜನ ಬರಬಾರದು ಅಂತಿದ್ರೆ ಕೂಡಲೇ ವಿದ್ಯುತ್ ದೀಪಾಲಂಕಾರ ಸ್ಥಗಿತಗೊಳಿಸಿ..
ಹಾಗೆಯೇ ಮೈಸೂರು ದಸರಾ ಆಚರಣೆ ನೋಡಲು ಗ್ರಾಮೀಣ ಭಾಗದವರು ಬರಬೇಡಿ ಎಂಬ ಆದೇಶಕ್ಕೆ ಆಕ್ರೋಶ ವ್ಯಕ್ತಪಡಿಸಿದ ನಂಜರಾಜ ಅರಸ್, ನಗರವನ್ನೆಲ್ಲಾ ಬಣ್ಣದ ದೀಪಗಳಿಂದ ಸಿಂಗರಿಸಿ ಮೈಸೂರಿಗೆ ಬರಬೇಡ ಎನ್ನುವುದು ಹಾಸ್ಯಾಸ್ಪದ. ವಿದ್ಯುತ್ ದೀಪಾಲಂಕಾರದಿಂದ ನಗರವನ್ನ ಅಲಂಕರಿಸಿದ್ರೆ ಗ್ರಾಮೀಣ ಪ್ರದೇಶದ ಜನ ಬರುವುದು ಸಹಜ. ಗ್ರಾಮೀಣ ಪ್ರದೇಶದ ಎಷ್ಟೋ ಮನೆಗಳಲ್ಲಿ ಇವತ್ತಿಗೂ ವಿದ್ಯುತ್ ದೀಪಗಳ ಭಾಗ್ಯ ಇಲ್ಲ. ಅಂತಹವರು ದೀಪಾಲಂಕಾರ ನೋಡಲು ಬಂದೇ ಬರ್ತಾರೆ. ಗ್ರಾಮೀಣ ಪ್ರದೇಶದ ಜನ ಬರಬಾರದು ಅಂತಿದ್ರೆ ಕೂಡಲೇ ವಿದ್ಯುತ್ ದೀಪಾಲಂಕಾರವನ್ನ ಸ್ಥಗಿತಗೊಳಿಸಿ ಎಂದು ಕಿಡಿಕಾರಿದರು.
Key words: mysore dasara-stupid -order – withdrawn- immediately-prof Najaraje urs-DC Rohini Sindhuri