ಮೈಸೂರು,ಅಕ್ಟೋಬರ್,14,2024 (www.justkannada.in): ವಿಶ್ವ ವಿಖ್ಯಾತ 415ನೇ ದಸರಾ ಜಂಬೂಸವಾರಿ ಮೆರವಣಿಗೆಯನ್ನ ಅದ್ದೂರಿಯಾಗಿ ಯಶಸ್ವಿಗೊಳಿಸಿದ ಗಜಪಡೆ ಇದೀಗ ತಮ್ಮೂರಿನತ್ತ ಮುಖ ಮಾಡಿವೆ. ಅರಮನೆ ಹೆಣ್ಣಾನೆಗಳ ಸಖ್ಯಕ್ಕೆ ಬಿದ್ದ ಏಕಲವ್ಯ ಲಾರಿ ಹತ್ತಲು ಹಠ ಮಾಡಿದ್ರೆ, ಅರಣ್ಯ ಇಲಾಖೆ ಆನೆಗಳಿಗೆ ಅರಮನೆ ಅಂಗಳದಲ್ಲಿ ಬೀಳ್ಕೊಡುಗೆ ನೀಡಲಾಯಿತು.
ಕ್ಯಾಪ್ಟನ್ ಅಭಿಮನ್ಯು ಜೊತೆ ಸೆಲ್ಫಿಗೆ, ಪೋಟೋ ತೆಗೆದುಕೊಳ್ಳಲು ಜನ ಮುಗಿಬಿದ್ದರು. ಎಲ್ಲರಿಗೂ ನಮಸ್ಕರಿಸಿ ಗಜಪಡೆ ತಮ್ಮೂರಿನತ್ತ ಹೊರಟವು. ಎರಡೂ ತಿಂಗಳಿನಿಂದ ದಸರಾ ತಾಲೀಮು, ದಸರಾ ಮೆರವಣಿಗೆಯಲ್ಲಿ ಬ್ಯೂಸಿಯಾಗಿದ್ದ ಆನೆಗಳು ತವರಿಗೆ ತೆರಳಿದವು. ದಸರಾದಲ್ಲಿ ತಮ್ಮ ಜವಾಬ್ದಾರಿಯನ್ನ ಯಶಸ್ವಿಯಾಗಿ ನಿಭಾಯಿಸಿದ ದಸರಾ ಗಜಪಡೆಗೆ ಜಿಲ್ಲಾಡಳಿತ ಪೂಜೆ ಸಲ್ಲಿಸಿ ಬೀಳ್ಗೊಡುಗೆ ನೀಡಿತು.
ನಾಡಿನ ಸದ್ದಗದ್ದಲದಲ್ಲಿದ್ದ ಕ್ಯಾಪ್ಟನ್ ಅಭಿಮನ್ಯು ಅಂಡ್ ಟೀಂ ಇಂದು ನಾಡಿನಿಂದ ಕಾಡಿನತ್ತ ಒಂದೊಂದಾಗಿ ಲಾರಿ ಏರಿ, ಎಲ್ಲರಿಗೂ ನಮಸ್ಕರಿಸಿದವು
ಮೈಸೂರು ದಸರಾ ಮುಗಿಸಿ ಇಂದು ದಸರಾ ಗಜಪಡೆ ನಾಡಿನಿಂದ ಕಾಡಿಗೆ ತೆರಳಿದವು. ಎಲ್ಲಾ ಆನೆಗಳು ಯಾವುದೇ ತಕರಾರು ಮಾಡದೆ ಲಾರಿ ಹತ್ತಿದರೆ ಇದೇ ಮೊದಲ ಬಾರಿಗೆ ದಸರಾಗೆ ಬಂದಿದ್ದ ಏಕಲವ್ಯ ಮಾತ್ರ ನಾನು ಊರಿಗೆ ಬರೋಲ್ಲ ಅಂತಾ ಹಠ ಹಿಡಿದು ನಿಂತಿದ್ದ. ಅರಮನೆ ಹೆಣ್ಣಾನೆಗಳ ಜೊತೆ ಲಾರಿ ಹತ್ತೋ ಮುನ್ನ ಕೆಲ ಸಮಯ ಏಕಾಂತ ಕಳೆದಿದ್ದ. ಹೆಣ್ಣನೆಗಳ ಜೊತೆ ಕಾಲ ಕಳೆದಿದ್ದ ಏಕಲವ್ಯ ಬಳಿಕ ಲಾರಿ ಹತ್ತಲು ಸತಾಯಿಸಿದ್ದ. ಇದೇ ವೇಳೆ 10 ಕ್ಕೂ ಹೆಚ್ಚು ಮಾವುತರು ಹಾಗೂ ಕಾವಾಡಿಗಳು ಪ್ರಯಾಸ ಪಟ್ಟರೂ ಹತ್ತಲಿಲ್ಲ. ನಂತರ ಲಾರಿಯನ್ನ ಮತ್ತಷ್ಟು ಸಮೀಪಕ್ಕೆ ತಂದು ಏಕಲವ್ಯನನ್ನ ಬಲವಂತವಾಗಿ ಹತ್ತಿಸಿದರು.
ಇದಕ್ಕೂ ಮೊದಲು ಕ್ಯಾಪ್ಟನ್ ಅಭಿಮನ್ಯು ಅಂಡ್ ಟೀಂಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಹೃದಯಸ್ಪರ್ಶಿ ಬೀಳ್ಕೋಡುಗೆ ನೀಡಲಾಯಿತು. ಜಿಲ್ಲಾಧಿಕಾರಿ ಲಕ್ಷ್ಮೀಕಾಂತರೆಡ್ಡಿ ಸೇರಿದಂತೆ ಇತರೆ ಅಧಿಕಾರಿಗಳು ಆನೆಗಳಿಗೆ ಪೂಜೆ ನೆರವೇರಿಸಿದರು.
Key words: Mysore Dasara, success, Farewell, Gajapade