ಮೈಸೂರು,ಅಕ್ಟೋಬರ್,21,2020(www.justkannada.in): ಮೈಸೂರು ದಸರಾ ಹಿನ್ನೆಲೆ ಅರಮನೆ ಅಂಗಳದಲ್ಲಿ ಪ್ರತಿದಿನ ಸಂಜೆ 2 ಗಂಟೆಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳ ಜರುಗುತ್ತಿದ್ದು, ಈ ನಡುವೆ ಇತ್ತೀಚೆಗೆ ನಿಧನರಾದ ಖ್ಯಾತ ಗಾಯಕ ಎಸ್.ಪಿ ಬಾಲ ಸುಬ್ರಹ್ಮಣ್ಯ ಅವರಿಗೆ ಇಂದು ಸಂಜೆ ನುಡಿನಮನ ಕಾರ್ಯಕ್ರಮ ನಡೆಯಲಿದೆ.
ಕೋವಿಡ್ ಹಿನ್ನೆಲೆ ಈ ಬಾರಿ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಸರಳ ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತಿದ್ದು, ಯುವದಸರಾ, ದಸರಾ ವಸ್ತು ಪ್ರದರ್ಶನ, ಆಹಾರಮೇಳ ಮುಂತಾದ ಕಾರ್ಯಕ್ರಮಗಳಿಗೆ ಬ್ರೇಕ್ ಹಾಕಲಾಗಿದೆ. ಆದರೆ ಪ್ರತಿದಿನ ಅರಮನೆಯಲ್ಲಿ ಸಂಜೆ 7ರಿಂದ 9 ಗಂಟೆಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಹೀಗಾಗಿ ಇಂದು ಅರಮನೆ ಅಂಗಳದಲ್ಲಿ ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಹಾಡಿನ ಮೂಲಕ ಎಸ್ಪಿಬಿಗೆ ನುಡಿನಮನ ಸಲ್ಲಿಸಲಿದ್ದಾರೆ. ಇಂದು ಸಂಜೆ 7ರಿಂದ 9 ಗಂಟೆವರೆಗೆ ಎರಡು ಗಂಟೆಗಳ ಕಾಲ ಎಸ್ ಪಿ ಬಾಲಸುಬ್ರಹ್ಮಣ್ಯ ಅವರ ಹಾಡುಗಳನ್ನು ಹಾಡುವ ಮೂಲಕ ರಾಜೇಶ್ ಕೃಷ್ಣನ್ ಪ್ರೇಕ್ಷಕರನ್ನ ರಂಜಿಸಲಿದ್ದಾರೆ.
ಅರಮನೆ ಮುಂಭಾಗದ ವೇದಿಕೆಯಲ್ಲಿ ರಾಜೇಶ್ ಕೃಷ್ಣನ್ ಮತ್ತು ತಂಡ ಎಸ್ ಪಿಬಿ ಹಾಡುಗಳನ್ನು ಪ್ರಸ್ತುತಪಡಿಸಲಿದ್ದು, ಕೋವಿಡ್ ಕಾರಣದಿಂದ ಸಾರ್ವಜನಿಕರಿಗೆ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ನಿರ್ಬಂಧ ವಿಧಿಸಲಾಗಿದೆ. ಹೀಗಾಗಿ ಕೇವಲ ಪಾಸ್ ಇದ್ದರಷ್ಟೇ ಕಾರ್ಯಕ್ರಮಗಳ ವೀಕ್ಷಣೆಗೆ ಅನುಮತಿ ನೀಡಲಾಗಿದೆ.
ವೀಕ್ಷಕರಿಗೆ ಅನುಕೂಲವಾಗುವಂತೆ ಡಿಜಿಟಲ್ ಲಿಂಕ್ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಕಾರ್ಯಕ್ರಮ ನೇರಪ್ರಸಾರ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ.
Key words: Mysore Dasara-Today – palace – SB Balasubramanyam-songs- Rajesh krishnan