ಮೈಸೂರು, ಅ.22, 2020 : (www.justkannada.in news ) ಈ ಬಾರಿಯ ಮೈಸೂರು ದಸರ ಮಹೋತ್ಸವ ವರ್ಚುವಲ್ ವೇದಿಕೆ ಮೂಲಕ ದೇಶ-ವಿದೇಶಗಳ ಲಕ್ಷಾಂತರ ಮಂದಿ ನೋಡುಗರನ್ನು ತಲುಪುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ.
ಚೆನ್ನೈ, ಜೈಪುರ, ಕೊಲ್ಕೊತ್ತಾ ಸೇರಿದಂತೆ ಅನೇಕ ಪ್ರಮುಖ ನಗರಗಳು, ದಕ್ಷಿಣ ಆಫ್ರಿಕಾ, ಅಮೇರಿಕಾ, ಸೌದಿ, ಕೆನಡಾ ಸೇರಿದಂತೆ ಹಲವಾರು ದೇಶಗಳಲ್ಲಿನ ಕನ್ನಡಿಗರು ಮೈಸೂರು ದಸರ ಕಾರ್ಯಕ್ರಮವನ್ನು ಆನ್ ಲೈನ್ ಮೂಲಕ ವೀಕ್ಷಿಸಿದ್ದಾರೆ.
ಈ ಬಾರಿಯ ದಸರಾ ಕಾರ್ಯಕ್ರಮಗಳನ್ನು ಅರಮನೆ ವೇದಿಕೆಗೆ ಮಾತ್ರ ಸೀಮಿತಗೊಳಿಸಿ, ಜನ ಭಾಗವಹಿಸುವಿಕೆಗೆ ಮಿತಿ ವಿಧಿಸಿದ್ದರಿಂದ ವರ್ಚುವಲ್ ವೇದಿಕೆ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮವನ್ನು ವೀಕ್ಷಣೆ ಮಾಡುವಂತೆ ಜಿಲ್ಲಾಡಳಿತ ಮನವಿ ಮಾಡಿತ್ತು.
ಈ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾ ವಾರ್ತಾ ಇಲಾಖೆ, ತನ್ನ ಅಫಿಶಿಯಲ್ ಫೇಸ್‌ಬುಕ್ ಮತ್ತು ಯೂಟ್ಯೂಬ್ ಪೇಜ್‌ನಲ್ಲಿ ನೇರಪ್ರಸಾರ ಮಾಡುವ ಜೊತೆಗೆ ಇತರೆ ಚಾನೆಲ್‌ಗಳಿಗೂ RTMP video link ನೀಡಿ, ನೇರ ಪ್ರಸಾರಕ್ಕೆ ಅವಕಾಶ ಮಾಡಿಕೊಟ್ಟಿತ್ತು.
ವರ್ಚುವಲ್ ವೇದಿಕೆಗೆ ಉತ್ತಮ ಸ್ಪಂದನೆ
ಅ.21 ರಂದು ಖ್ಯಾತ ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್ ನಡೆಸಿಕೊಟ್ಟ “ಎಸ್.ಪಿ.ಬಿ. ನುಡಿನಮನ” ಕಾರ್ಯಕ್ರಮವನ್ನು ಒಂದೇ ದಿನ ವಾರ್ತ ಇಲಾಖೆಯ FB ಪೇಜ್ ನಲ್ಲೇ 1.93 ಲಕ್ಷ ಜನ ವೀಕ್ಷಣೆ ಮಾಡಿದ್ದಾರೆ. ವಿಶೇಷ ಅಂದ್ರೆ ಇದೇ ಕಾರ್ಯಕ್ರಮವನ್ನು ಜಸ್ಟ್ ಕನ್ನಡದ ಫೇಸ್ ಬುಕ್ ಪುಟದಲ್ಲೂ ಸರಿಸುಮಾರು ಅಷ್ಟೆ ಮಂದಿ ಅಂದ್ರೆ 1.93 ಲಕ್ಷ ಮಂದಿ ನೋಡಿ ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ್ದಾರೆ.
ಇದಲ್ಲದೆ ಕೆಲವು ಮಾಧ್ಯಮಗಳು live stream ಅನ್ನು ಅವರ ಚಾನೆಲ್ ಗಳಲ್ಲೂ ಸಹ ಪ್ರಸಾರ ಮಾಡಿದ್ದಾರೆ. ಆ ಎಲ್ಲಾ ನೇರ ಪ್ರಸಾರಗಳ ವೀಕ್ಷಣೆಯನ್ನು ಪರಿಗಣಿಸಿದರೆ ಅಕ್ಟೋಬರ್ 21ರ ಒಂದೇ ಕಾರ್ಯಕ್ರಮವನ್ನು 6 ಲಕ್ಷಕ್ಕೂ ಹೆಚ್ಚು ಜನ ನೋಡಿದ್ದಾರೆ.
ಪ್ರತಿ ದಿನ ಸರಾಸರಿ 20 ಸಾವಿರ ಜನ ವಾರ್ತ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ FB page ನಲ್ಲಿ ವೀಕ್ಷಣೆ ಮಾಡುತ್ತಿದ್ದಾರೆ ಎಂದು ಮೈಸೂರು ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಹಾಗೂ ದಸರಾ ವರ್ಚುವಲ್ ಪ್ರಸಾರದ ನೋಡಲ್ ಅಧಿಕಾರಿ ರಾಜು ತಿಳಿಸಿದ್ದಾರೆ.
ooooo
key words : mysore-dasara-virtual-lakhs-views-information-department