ಮೈಸೂರು,ಮೇ,19,2021(www.justkannada.in): ಮೈಸೂರು ಜಿಲ್ಲಾಧಿಕಾರಿಗೆ 10 ಪೈಸೆ ಖರ್ಚು ಮಾಡುವ ಪವರ್ ಇಲ್ಲ. ಜಿಲ್ಲಾ ಮಂತ್ರಿಗೂ ಕೂಡ ಆ ಪವರ್ ಇಲ್ಲ. ಯಾವುದೇ ಬಿಲ್ ಪಾಸಾಗಬೇಕಾದರೆ ಬೆಂಗಳೂರಿಗೆ ಹೋಗಬೇಕು. ಎಲ್ಲ ಪವರ್ ವಿಜಯೇಂದ್ರ ಬಳಿ ಇದೆ ಎಂದು ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಹಾಗೂ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ ಹೆಚ್. ವಿಶ್ವನಾಥ್, ಹೆಣದ ಮೇಲೆ ಹಣ ಮಾಡಬೇಡಿ. ನಿಮಗೆ ಒಳ್ಳೆಯದಾಗಲ್ಲ. ಎಲ್ಲ ಪವರ್ ವಿಜಯೇಂದ್ರ ಬಳಿ ಇದೆ. ಸರ್ಕಾರದ ಆಡಳಿತ ಕೇಂದ್ರೀಕರಣ ಆಗಿದೆ. ಇದೆಲ್ಲವು ಪರ್ಸೆಂಟೆಂಜ್ ಗಾಗಿ ಮಾಡಿಕೊಂಡಿರೋದು ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಹೆಚ್.ವಿಶ್ವನಾಥ್, ಜಿಲ್ಲೆಗಳಿಗೆ ಅನುಭವಿ ಡಿಸಿಗಳ ಅವಶ್ಯಕತೆಯಿದೆ. ಐಎಎಸ್ ಕಾರ್ಯದರ್ಶಿಗಳನ್ನು ಜಿಲ್ಲೆಗಳಿಗೆ ನೇಮಿಸಿ. ಪ್ರತಿಯೊಬ್ಬರಿಗೂ 100 ಕೋಟಿ ಅವರಿಗೆ ನೀಡಿ. ಮೂರು ತಿಂಗಳು ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ನೇಮಿಸಿ. ಎಲ್ಲಾ ಅಧಿಕಾರವನ್ನು ಅವರಿಗೆ ನೀಡಿ. ಎಲ್ಲಾ ಜವಾಬ್ದಾರಿಯನ್ನು ಅವರಿಗೆ ನೀಡಿ. ಸಾವುಗಳಿಗೆ ಅವರನ್ನು ಹೊಣೆಗಾರರನ್ನಾಗಿ ಮಾಡಿ ಎಂದು ಎಂ.ಎಲ್.ಸಿ ಎಚ್ ವಿಶ್ವನಾಥ್ ಸರ್ಕಾರಕ್ಕೆ ಒತ್ತಾಯ ಮಾಡಿದರು.
ಸದ್ಯ ಜಿಲ್ಲಾಧಿಕಾರಿಗೆ ಹಣ ಖರ್ಚು ಮಾಡಲು ಪವರ್ ಇಲ್ಲ. ಸರ್ಕಾರ ಹಣಕಾಸಿನ ವಿಚಾರ ಕೇಂದ್ರಿಕೃತ ಮಾಡಿದೆ. ಹೀಗಾಗಿ ಜಿಲ್ಲಾಧಿಕಾರಿಗಳು ನಮಗೆ ಅಧಿಕಾರ ಇಲ್ಲ ಅನ್ನೋದನ್ನು ಪ್ರಧಾನಿಗೆ ಹೇಳಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಡಿಸಿಗೆ ಮನವಿ ಮಾಡಬಾರದು. ಕಮಾಂಡ್ ಮಾಡಬೇಕು ಎಂದು ಸಲಹೆ ನೀಡಿದ ಹೆಚ್.ವಿಶ್ವನಾಥ್, ಡಿಸಿ ಒಂದು ದಿನ ಹಳ್ಳಿ ಕಡೆ ಹೋಗಲಿಲ್ಲ. ಟಾಸ್ಕ್ ಪೋರ್ಸ್ ಸಹ ಹೋಗಲಿಲ್ಲ. ಹಳ್ಳಿಗಳ ಗೋಳು ಯಾರು ಕೇಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಎಲ್ಲವನ್ನೂ ಕೊಟ್ಟು ಮತ್ತೆ 15 ದಿನ ಲಾಕ್ಡೌನ್ ಮಾಡಿ….
6 ರಿಂದ 8 ವ್ಯಾಪಾರಕ್ಕೆ ಅವಕಾಶ ನೀಡಲಾಗಿದೆ ಎಂದು ಡಿಸಿ ಅಂತಾರೆ. ಏಕೆ ಅಂಗಡಿ ತೆಗಿಯಬೇಕು. ಮಾಂಸದ ಅಂಗಡಿ ಬಳಿ ಜನ ಜಂಗುಳಿ ಇದೆ. ಒಂದು ತಿಂಗಳು ಮಾಂಸ ತಿನ್ನಲಿಲ್ಲ ಅಂದರೆ ಸತ್ತು ಹೋಗುತ್ತಾರಾ ? ಮೇಡಂ ಹೇಳಿದ್ದಾರೆ ಬೆಳಗ್ಗೆ 6 ಗಂಟೆ ಅಂತಾ ಬೆಳಗ್ಗೆ 6 ಗಂಟೆಗೆ ಯಾರು ಏಳುತ್ತಾರೆ. ಕಾಮನ್ ಸೆನ್ಸ್ ಇಲ್ಲದೆ ಏನೇನೋ ತೀರ್ಮಾನ ಮಾಡಬಾರದು. ವಾರಕ್ಕೆ ಒಂದು ದಿನ ಮಾತ್ರ ಅವಕಾಶ ಕೊಟ್ಟು ಲಾಕ್ಡೌನ್ ಮಾಡಿ. ಹಿಂದೆ ಸಂತೆಗೆ ಹೋಗಿ ಬಂದು ಒಂದು ವಾರ ಕಳಿಯುತ್ತಾ ಇರಲಿಲ್ಲವೆ. ಅದ್ದರಿಂದ ಎಲ್ಲವನ್ನೂ ಕೊಟ್ಟು ಮತ್ತೆ 15 ದಿನ ಲಾಕ್ ಡೌನ್ ಮಾಡಿ ಎಂದು ಹೆಚ್.ವಿಶ್ವನಾಥ್ ಸರ್ಕಾರಕ್ಕೆ ಆಗ್ರಹಿಸಿದರು.
ಆಸ್ಪತ್ರೆಯಲ್ಲಿ ಸೂಪರಿಂಟೆಂಡೆಂಟ್ ಸುಮ್ಮನ್ನೆ ಕುಳಿತಿದ್ದಾರೆ. ಅವರಿಗೆ ಹಣವಿಲ್ಲ, ಸರಿಯಾದ ವ್ಯವಸ್ಥೆ ಇಲ್ಲ. ಮೊದಲು ಅಲ್ಲಿ ಸರಿಯಾದ ವ್ಯವಸ್ಥೆ ಮಾಡಬೇಕಾಗಿದೆ ಎಂದು ಸರ್ಕಾರಕ್ಕೆ ಸಲಹೆ ನೀಡಿದರು.
ಇದೇ ವೇಳೆ ಸಿದ್ಧರಾಮಯ್ಯಗೆ ಚಾಟಿ ಬೀಸಿದ ಹೆಚ್.ವಿಶ್ವನಾಥ್, ಏ ಸಿದ್ದರಾಮಯ್ಯ ಹಳ್ಳಿಗಳಲ್ಲಿ ಸಾಯುತ್ತಿರೋದು ಅಹಿಂದದವರು. ಅಂದರೆ ಬಡ ವರ್ಗದವರು’ ಸುಮ್ಮನ್ನೆ ಮಾತಾಡೋದಲ್ಲ. ಈಗ ಬಂದು ಅವರ ಕಷ್ಟ ನೋಡಬೇಕು. ಹಳ್ಳಿಗಳಲ್ಲಿ ಬೆಡ್, ಆಕ್ಸಿಜನ್ ಸಿಗದೆ ಜನ ನರಳುತ್ತ ಸಾಯುತ್ತಿದ್ದಾರೆ. ಈಗಾಗಲೇ ಹಳ್ಳಿಯಲ್ಲಿ ಕರೋನಾ ಹೆಚ್ಚಾಗುತ್ತಿದೆ. ಮೊದಲು ಇಲ್ಲಿನ ಜನರಿಗೆ ಕೊರೊನಾದಿಂದ ಮುಕ್ತಗೊಳಿಸಿ ಎಂದು ಸರ್ಕಾರ ಸೇರಿ ಸಿದ್ದರಾಮಯ್ಯರನ್ನು ಜರಿದರು.
Key words: Mysore- DC -does not – power – spend -10 paise- All Power – Vijayendra-MLC- H. Vishwanath