ಮೈಸೂರು,ಮಾರ್ಚ್,13,2023(www.justkannada.in): ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಪ್ರತಿಯೊಬ್ಬರು ಸಹ ತಮ್ಮ ಮತದಾರರ ಪಟ್ಟಿಯಲ್ಲಿ ಹೆಸರಿದೆಯೇ ಎಂದು ಪರೀಕ್ಷಿಸಿಕೊಳ್ಳಿ. ತಮ್ಮ ಮತಗಟ್ಟೆ ಅಧಿಕಾರಿಯ ಹೆಸರನ್ನ ತಿಳಿದುಕೊಳ್ಳಿ. ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಿದ್ದರೆ ಸೇರಿಸಿಕೊಳ್ಳಲು ಮುಂದಾಗಿ ಎಂದು ಮೈಸೂರು ಜಿಲ್ಲಾಧಿಕಾರಿ ಕೆ ವಿ ರಾಜೇಂದ್ರ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಪತ್ರಕರ್ತರ ಜೊತೆ ಮೈಸೂರು ಡಿಸಿ ಕೆ ವಿ ರಾಜೇಂದ್ರ ಸಂವಾದ ಕಾರ್ಯಕ್ರಮ ನಡೆಸಿ ಮಾತನಾಡಿದರು. ಸಂವಾದ ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ರವಿಕುಮಾರ್, ಉಪಾಧ್ಯಕ್ಷ ಬಸವಣ್ಣ, ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ, ಕಾರ್ಯದರ್ಶಿ ರಂಗಸ್ವಾಮಿ ಭಾಗಿಯಾಗಿದ್ದರು.
ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಸಿ ರಾಜೇಂದ್ರ, ನಾವು ತೆಗೆದುಕೊಳ್ಳುವ ನಿರ್ಧಾರಗಳನ್ನ ಪ್ರಸಾರ ಮಾಡುವ ಜವಾಬ್ದಾರಿ ಮಾಧ್ಯಮ ಮತ್ತು ಪತ್ರಕರ್ತರದ್ದಾಗಿದೆ. ಪತ್ರಿಕೋಧ್ಯಮ ಜಿಲ್ಲಾಡಳಿತದ ಒಂದು ಅವಿಬಾಜ್ಯ ಅಂಗ. ಜಿಲ್ಲಾಡಳಿತ ಉತ್ತಮ ಕೆಲಸ ಮಾಡಿದಾಗ ಶ್ಲಾಘಿಸುವ ಕೆಲಸ. ತಪ್ಪು ಮಾಡಿದಾಗ ತಿದ್ದುವ ಕೆಲಸ ಆಗಬೇಕು. ಕೋವಿಡ್ ಸಂದರ್ಭದಲ್ಲಿ ಪತ್ರಕರ್ತರು ತಮ್ಮ ಅರೋಗ್ಯವನ್ನು ಬಿಟ್ಟು ಕೆಲಸ ಮಾಡಿದ್ದಾರೆ. ಜನರ ನಾಡಿಮಿಡಿತ ನಿಮಗೆ ತಿಳಿದಿರುತ್ತೆ. ನೈಜವಾದ ಸುದ್ದಿಗಳನ್ನ ಪ್ರಕಟಿಸುವ ಕೆಲಸ ಮಾಧ್ಯಮಗಳು ಮಾಡಲಿ ಎಂದು ಕಿವಿಮಾತು ಹೇಳಿದರು.
ನಮ್ಮ ಜಿಲ್ಲೆ ಪ್ರವಾಸಿ ತಾಣಕ್ಕೆ ಹೆಚ್ಚಿನ ಹೆಸರು ವಾಸಿಯಾಗಿದೆ. ನಮ್ಮ ಜಿಲ್ಲೆಯ ಪರಂಪರೆಯನ್ನ ಉಳಿಸಿಕೊಳ್ಳುವ ಕೆಲಸ ಮಾಡೋಣ. ಮಹಿಳೆಯರು ,ವೃದ್ಧರು, ಮಕ್ಕಳ ಕಾಳಜಿ ಮುಖ್ಯ. ವಾರಾಂತ್ಯಗಳಲ್ಲಿ ಒಂದೊಂದು ವಿಷಯಧಾರಿತವಾಗಿ ಆಚರಿಸಲು ಸಕಲ ರೂಪುರೇಷೆಗಳನ್ನ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ವಾರಂತ್ಯಗಳಲ್ಲಿ ಒಂದೊಂದು ಇಲಾಖೆಗೆ ಒಂದೊಂದು ವೀಕೆಂಡ್ ನ ನೀಡಲಾಗುವುದು. ಜೊತೆಗೆ ಅದಕ್ಕೆ ಬೇಕಾದ ಹಣವನ್ನ ಬಿಡುಗಡೆ ಮಾಡಲಾಗುವುದು. ಒಟ್ಟು 30 ಇಲಾಖೆಗೆ ಇದರ ಜವಾಬ್ದಾರಿ ನೀಡಲಾಗುವುದು. ಚುನಾವಣೆ ವೇಳೆ ನಿಮ್ಮೆಲ್ಲ ಪಾತ್ರ ಮಹತ್ವವಾಗಿರುತ್ತೆ. ಈಗಾಗಲೇ ಮತದಾನದ ಬಗ್ಗೆ ಅಧಿಕಾರಿಗಳಿಗೆ ಮತ್ತು ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿದೆ. ಜೊತೆಗೆ ಸಾರ್ವಜನಿಕರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಡಿಸಿ ಕೆ ವಿ ರಾಜೇಂದ್ರ ಮಾಹಿತಿ ನೀಡಿದರು.
ಕೆಲ ಯುವಕರಿಗೆ ತಮ್ಮ ಮತಗಟ್ಟೆ ಮತ್ತು ಮತದಾನ ಕೇಂದ್ರದ ಬಗ್ಗೆ ಮಾಹಿತಿಯೇ ಇರಲ್ಲ. ಹಿರಿಯ ವಯಸ್ಸಿನ ನಾಗರಿಕರು ಮತದಾನದಲ್ಲಿ ಭಾಗಿಯಾಗಲು ಹುಮ್ಮಸ್ಸು ತೋರುತ್ತಿದ್ದಾರೆ. 80ವರ್ಷ ದಾಟಿರುವ ಹಿರಿಯ ನಾಗರಿಕರಿಗೆ ಪೋಸ್ಟಲ್ ವೋಟ್ ಮಾಡಲು ಚುನಾವಣೆ ಆಯೋಗ ಅನುಮತಿ ನೀಡಿದೆ.ನಮ್ಮ ಜಿಲ್ಲೆಯಲ್ಲಿ 80ಸಾವಿರಕ್ಕೂ ಹೆಚ್ಚು ಹಿರಿಯ ಮತದಾರರಿದ್ದಾರೆ. ವಿಶೇಷ ಚೇತನ ಮತದಾರರು 30ಸಾವಿರಕ್ಕೂ ಹೆಚ್ಚು ಜನರಿದ್ದಾರೆ. ಜೊತೆಗೆ ಜಿಲ್ಲೆಯಲ್ಲಿ ಗೂಂಡಾ ಕಾಯ್ದೆಯಲ್ಲಿ ಭಾಗಿಯಾಗಿರುವವರ ಬಗ್ಗೆ ಪೋಲೀಸ್ ಇಲಾಖೆ ಮಾಹಿತಿ ಕಲೆ ಹಾಕುತ್ತಿದೆ. ಇಂತಹ ವ್ಯಕ್ತಿಗಳು ಯಾವುದಾದರೂ ಸಮಾಜಘಾತುಕ ಕೆಲಸಗಳಲ್ಲಿ ಭಾಗಿಯಾದರೆ ನಿರ್ಧಾಕ್ಷ್ಯಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕೆ ವಿ ರಾಜೇಂದ್ರ ಖಡಕ್ ಎಚ್ಚರಿಕೆ ನೀಡಿದರು.
Key words: Mysore –DC- KV Rajendra- talk – with- journalists