ಮೈಸೂರು,ಮಾರ್ಚ್.1,2021(www.justkannada.in): ಮೂರನೇ ಹಂತದಲ್ಲಿ ಹಿರಿಯ ನಾಗರಿಕರಿಗೆ ಕೋವಿಡ್-19 ಲಸಿಕಾ ಅಭಿಯಾನಕ್ಕೆ ಜಿಲ್ಲಾ ಆಸ್ಪತ್ರೆಯಲ್ಲಿ ಸೋಮವಾರ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಚಾಲನೆ ನೀಡಿದರು.
ಚಾಲನೆ ನೀಡಿದ ನಂತರ ಮಾತನಾಡಿದ ಡಿಸಿ ರೋಹಿಣಿ ಸಿಂಧೂರಿ, ಕೋವಿಡ್ ಲಸಿಕೆ ನೀಡುವ ಅಭಿಯಾನ ಮೈಸೂರು ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಶೇ.90% ಹಾಗೂ ಎರಡನೇ ಹಂತದಲ್ಲಿ ಶೇ.50%ರಷ್ಟು ಪೂರ್ಣಗೊಂಡಿದೆ. ಮೊದಲ ಹಂತದಲ್ಲಿ ಕೊರೋನಾ ವಾರಿಯರ್ಸ್ಗಳು, ಎರಡನೇ ಹಂತದಲ್ಲಿ ಮುಂಚೂಣಿ ಕಾರ್ಯಕರ್ತೆಯರಿಗೆ ಲಸಿಕೆ ಕೊಡಲಾಗಿದೆ. ಇಂದು ಮೂರನೇ ಹಂತದಲ್ಲಿ 60 ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ ದೊರೆತಿದೆ. ಮೈಸೂರು ಜಿಲ್ಲೆಯಲ್ಲಿ ನಾಲ್ಕುವರೆ ಲಕ್ಷ ಮಂದಿ ಹಿರಿಯ ನಾಗರಿಕರಿಗೆ ಕೋವಿಡ್-19 ಲಸಿಕೆ ನೀಡುವ ಗುರಿ ಇದೆ ಎಂದರು.
ಬೇಡಿಕೆಯ ಅನುದಾನ ನಿರ್ಧಿಷ್ಠ ಅಸ್ಪತ್ರೆಗಳಲ್ಲಿ ಲಸಿಕೆ ಕೊಡಲಾಗುವುದು. ಮೊದಲ ಲಸಿಕೆ ನಂತರ ಎರಡನೇ ಲಸಿಕೆಯನ್ನು 28 ದಿನಗಳ ಬಳಿಕ ಲಸಿಕೆಯನ್ನು ತಪ್ಪದೆ ಪಡೆಯಬೇಕು. ಅರೋಗ್ಯ ಕಾರ್ಯಕರ್ತರು ಲಸಿಕೆ ಪಡೆಯದವರು ಈಗ ಲಸಿಕೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಲಸಿಕೆ ಪಡೆಯಲು ಹೆಚ್ಚಿನ ಮಂದಿ ಈಗ ನೇರವಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ಹೆಸರು ನೋಂದಾಯಿಸಿಕೊಳ್ಳುತ್ತಿದ್ದಂತೆ ಲಸಿಕೆ ಕೊಡಲು ವ್ಯವಸ್ಥೆ ಮಾಡಿಕೊಳ್ಳಲಾಗುವುದು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ಟಿ. ಅಮರನಾಥ್ ಅವರು ಮಾತನಾಡಿ, 3ನೇ ಹಂತದಲ್ಲಿ ಲಸಿಕೆ ಅಭಿಯಾನದಲ್ಲಿ 60 ವರ್ಷ ಮೇಲ್ಪಟ್ಟ ಹಾಗೂ ಸಹ ಅಸ್ವಸ್ಥತೆಗಳಿಂದ ಬಳಲುತ್ತಿರುವ 45ರಿಂದ 59 ವರ್ಷದೊಳಗಿನವರಿಗೆ ನೀಡಲಾಗುತ್ತಿದೆ. ಮೈಸೂರು ಜಿಲ್ಲೆಯಲ್ಲಿ ಒಟ್ಟು 10 ಕೇಂದ್ರಗಳಲ್ಲಿ ಕೋವಿಡ್-19 ಲಸಿಕೆಯನ್ನು ನೀಡಲಾಗುತ್ತಿದ್ದು, ನಗರದಲ್ಲಿ 04, ಗ್ರಾಮಾಂತರದಲ್ಲಿ 06 ಕೋವಿಡ್ ಲಸಿಕಾ ಕೇಂದ್ರಗಳಲ್ಲಿ ವಿತರಿಸಲಾಗುವುದು. ಮೈಸೂರು ಜಿಲ್ಲಾ ಆಸ್ಪತ್ರೆ, ಮೈಸೂರು ವೈದ್ಯಕೀಯ ಕಾಲೇಜಿನ ಆಸ್ಪತ್ರೆ, ಜೆಎಸ್ಎಸ್ ಆಸ್ಪತ್ರೆ, ಅಪೋಲೊ ಆಸ್ಪತ್ರೆ, ಗ್ರಾಮಾಂತದಲ್ಲಿ ಎಲ್ಲಾ ತಾಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ ನೀಡಲಾಗುತ್ತದೆ ಎಂದು ತಿಳಿಸಿದರು.
ಈಗಾಗಲೇ 70 ಮಂದಿ ತಮ್ಮ ದಾಖಲೆಗಳನ್ನು ನೀಡಿ ಸ್ಥಳದಲ್ಲೇ ಹೆಸರು ನೋಂದಾಯಿಸಿಕೊಂಡಿದ್ದು, ಎರಡು ಕೊಠಡಿಗಳಲ್ಲಿ ಪ್ರತಿ ದಿನ 200 ಜನರಿಗೆ ಲಸಿಕೆ ನೀಡಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ನೋಂದಾಯಿಸಿಕೊಂಡರೆ ಕೇಂದ್ರಗಳನ್ನು ವಿಸ್ತರಿಲಾಗುವುದು ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಎ.ಎಂ.ಯೋಗೇಶ್, ಆರ್.ಸಿ.ಹೆಚ್. ಅಧಿಕಾರಿ ಡಾ.ಎಲ್.ರವಿ, ಜಿಲ್ಲಾ ಕೋವಿನ್ ನೊಡಲ್ ಅಧಿಕಾರಿ ಡಾ. ಶಿವಶಂಕರ್, ಮೈಸೂರು ವಿಭಾಗೀಯ ತಾಂತ್ರಿಕ ಸಲಹೆಗಾರರಾದ ಡಾ.ಸುಧೀರ್ ನಾಯಕ್, ಸ್ಥಾನೀಯ ವೈದ್ಯಾಧಿಕಾರಿಗಳಾದ ಡಾ. ನಯಾಜ್ ಪಾಷಾ ಹಾಗೂ ಜಿಲ್ಲಾ ಆಸ್ಪತ್ರೆಯ ಕೋವಿನ್ ನೂಡಲ್ ಅಧಿಕಾರಿ ಡಾ. ಸತ್ಯಪ್ರಕಾಶ್ ಉಪಸ್ಥಿತರಿದ್ದರು.
Key words: Mysore DC- Rohini Sindhuri- – 3rd phase- covid-19 -vaccine -campaign