ಮೈಸೂರು, ಅಕ್ಟೋಬರ್ 6,2020(www.justkannada.in): ಕೆ.ಆರ್. ಆಸ್ಪತ್ರೆಯಲ್ಲಿ ಕೋವಿಡ್ -19 ಹಾಸಿಗೆ ಹೆಚ್ಚಿಸಲು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಮೈಸೂರು ವೈದ್ಯಕೀಯ ಮಹಾವಿದ್ಯಾಲಯಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ತಜ್ಞ ವೈದ್ಯರು, ವೈದ್ಯರು, ನರ್ಸ್ ಗಳು, ಸ್ನಾತಕೋತ್ತರ ವಿದ್ಯಾರ್ಥಿಗಳ ಸಂಖ್ಯೆ, ಹಾಸಿಗೆಗಳ ಸಾಮರ್ಥ್ಯದ ಬಗ್ಗೆ ಮಾಹಿತಿ ಪಡೆದರು. ಹೆಚ್ಚು ಪರೀಕ್ಷೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಹಾಸಿಗೆಗಳು ಹಾಗೂ ವೈದ್ಯರ ಸಂಖ್ಯೆ ನಿಯೋಜನೆ ಹೆಚ್ಚಿಸಬೇಕಾಗಿದೆ ಎಂದು ಡಿಸಿ ರೋಹಿಣಿ ಸಿಂಧೂರಿ ಸೂಚನೆ ನೀಡಿದರು.
ಹಾಗೆಯೇ ಕೆ.ಆರ್. ಆಸ್ಪತ್ರೆಯಲ್ಲಿ ಈಗ 178 ಬೆಡ್ ಇವೆ. ಇನ್ನೂ 200 ಬೆಡ್ ಗಳನ್ನು ಕೋವಿಡ್ ಚಿಕಿತ್ಸೆಗೆ ಹೆಚ್ಚಿಸುವಂತೆ ಹಾಗೂ ಟ್ರಾಮಾ ಕೇರ್ ಸೆಂಟರ್ ನಲ್ಲೂ ಕೋವಿಡ್ ಚಿಕಿತ್ಸೆಗೆ ಆಕ್ಸಿಜನ್ ಬೆಡ್ ಗಳನ್ನು ವ್ಯವಸ್ಥೆ ಮಾಡಿಕೊಳ್ಳಲು ಆಗಿರುವ ಪ್ರಕ್ರಿಯೆಯನ್ನು ಬೇಗ ಪೂರ್ಣಗೊಳಿಸುವಂತೆ ಡಿಸಿ ರೋಹಿಣಿ ಸಿಂಧೂರಿ ತಿಳಿಸಿದರು.
ವೈದ್ಯಕೀಯ ಸ್ನಾತಕೋತ್ತರ ಪದವಿಯ ಕೊನೆಯ ವರ್ಷದಲ್ಲಿ 154 ವಿದ್ಯಾರ್ಥಿಗಳು ಇರುತ್ತಾರೆ. ಅವರನ್ನು ಕೋವಿಡ್ ಚಿಕಿತ್ಸೆಗೆ ಬಳಸಿಕೊಳ್ಳಲು ಸೂಕ್ತ ತರಬೇತಿ ನೀಡುವ ಬಗ್ಗೆ ಆಲೋಚಿಸುವಂತೆ ಡಿಸಿ ಸೂಚಿಸಿದರು. ನಂತರ ಕೆ.ಆರ್. ಆಸ್ಪತ್ರೆಯ ಕೋವಿಡ್ ಚಿಕಿತ್ಸಾ ವಿಭಾಗಕ್ಕೆ ಭೇಟಿ ನೀಡಿದ ರೋಹಿಣಿ ಸಿಂಧೂರಿ ಆಕ್ಸಿಜನ್ ಸಿಲಿಂಡರ್, ಹಾಗೂ ವೆಂಟಿಲೇಟರ್ ಗಳನ್ನು ಪರಿಶೀಲಿಸಿದರು. ಬಳಿಕ ಕೋವಿಡ್-19 ವಿಭಾಗಕ್ಕೆ ತೆರಳಿ ಪ್ರತಿಯೊಂದು ಕೊಠಡಿಯಲ್ಲಿನ ಸೋಂಕಿತರನ್ನ ವೀಕ್ಷಿಸಿದರು.
ಮೈಸೂರು ಮೆಡಿಕಲ್ ಕಾಲೇಜಿನ ನರ್ಸ್ ಗಳು ಬೇಡಿಕೆಗಳನ್ನು ಪೂರೈಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ನೀಡಲಾಯಿತು. ಇದಾದ ಬಳಿಕ ನೂತನ ಲಿಕ್ವಿಡ್ ಆಕ್ಸಿಜನ್ ಕಟ್ಟಡವನ್ನು ವೀಕ್ಷಣೆ ಮಾಡಿದರು.
ವೈದ್ಯಕೀಯ ಮಹಾವಿದ್ಯಾಲಯದ ನಿರ್ದೇಶಕ ಹಾಗೂ ಡೀನ್ ಡಾ. ಸಿ.ಪಿ. ನಂಜರಾಜ್, ಸಿ.ಎ.ಒ. ಬಿ.ಆರ್.ರೂಪ, ಹಣಕಾಸು ಅಧಿಕಾರಿ ಮಹದೇವ ನಾಯ್ಕ, ಕೆ.ಆರ್. ಆಸ್ಪತ್ರೆ ಅಧೀಕ್ಷಕ ಡಾ. ನಂಜುಂಡಸ್ವಾಮಿ, ಚೆಲುವಾಂಭ ಆಸ್ಪತ್ರೆ ಅಧೀಕ್ಷಕಿ ಡಾ. ಪ್ರಮೀಳಾ, ಡಾ. ಸುನೀತಾ, ಡಾ. ಎಂ. ಅನುರಾಧ, ಡಾ. ವೆಂಕಟೇಶ್, ಡಾ. ಹೆಚ್.ಜಿ. ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.
Key words: mysore- DC Rohini Sindhuri- instructs -increase covid bed –KR hospital.