ಮೈಸೂರು,ಮೇ,2,2021(www.justkannada.in): ಕೆ.ಆರ್ ನಗರ ಶಾಸಕ ಸಾ.ರಾ ಮಹೇಶ್ ಮತ್ತು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ನಡುವಿನ ಶೀತಲ ಸಮರ ಮುಂದುವರೆದಿದೆ. ಈ ಮಧ್ಯೆ ಕೋವಿಡ್ ನಿರ್ವಹಣೆ ವಿಚಾರದಲ್ಲಿ ಡಿಸಿ ರೋಹಿಣಿ ಸಿಂಧೂರಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇಂದು ಮೈಸೂರಿನಲ್ಲಿ ಮಾತನಾಡಿರುವ ಶಾಸಕ ಸಾ.ರಾ ಮಹೇಶ್, ನಮಗೆ ರೋಲ್ ಮಾಡೆಲ್ ಅಧಿಕಾರಿ ಬೇಕು. ಮಾಡೆಲ್ ಅಧಿಕಾರಿ ಅಲ್ಲ. ಮೈಸೂರು ಡಿಸಿಯಾಗಿದ್ದ ಅಭಿರಾಂ ಜೀ ಶಂಕರ್, ಸಿ.ಶಿಖಾ ಅವರ ರೀತಿ ರೋಲ್ ಮಾಡೆಲ್ ಅಧಿಕಾರಿಯಾಗಿ. ಬರೀ ಮಾಡೆಲ್ ಆಗಬೇಡಿ ಎಂದು ಕಿಡಿಕಾರಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು ಬದುಕಿದ್ದಾರಾ ಎಂದು ಕೇಳಿದ್ದಕ್ಕೆ ಸಚಿವರಿಗೆ ಸಿಟ್ಟು ಬಂದಿದೆ. ಜನರ ಸ್ಥಿತಿ ನೋಡಿ ಬೇಸರದಿಂದ, ನೋವಿನಿಂದ ಆ ರೀತಿ ಹೇಳಿದ್ದೆ. ಕೆ.ಆರ್. ನಗರದ ಮಹಿಳೆ ಮೊನ್ನೆ ಸತ್ತು ಹೋದರು. ಜಿಲ್ಲಾಡಳಿತ ಆ ಮಹಿಳೆಯ ಕೋವಿಡ್ ಪರೀಕ್ಷೆ ರಿಪೋರ್ಟ್ ಬರುವುದರೊಳಗೆ ಶವವನ್ನು ಹಸ್ತಾಂತರ ಮಾಡಿತ್ತು. ಅವರು, ಶವ ತೆಗೆದು ಕೊಂಡು ಹೋಗಿ ಮನೆಯಲ್ಲಿಟ್ಟು ನಂತರ ಅಂತ್ಯಕ್ರಿಯೆ ಮಾಡಿದ್ದರು. ಮರು ದಿನ ಮೃತ ಮಹಿಳೆಯ ಕೋವಿಡ್ ರೀಪೋರ್ಟ್ ಬಂದಿದ್ದು ಕೋವಿಡ್ ಪಾಸಿಟಿವ್ ಇದೆ. ಈಗ ಆ ಮನೆಯಲ್ಲಿ 25 ಜನಕ್ಕೆ ಕರೋನಾ ಪಾಸಿಟಿವ್ ಆಗಿದೆ. ಇದು ಜಿಲ್ಲಾಡಳಿತದ ನಿರ್ಲಕ್ಷ್ಯ ಅಲ್ವಾ? ಇದನ್ನು ಪ್ರಶ್ನೆ ಮಾಡುವುದು ತಪ್ಪಾ? ಕೋವಿಡ್ ರಿಪೋರ್ಟ್ ಬರುವವರೆಗೂ ಶವ ಕೊಡಬೇಡಿ. ಮನೆಯವರ ಒತ್ತಾಯ ಮಾಡಿದರೆ ಕೋವಿಡ್ ನಿಯಮದಂತೆ ಶವಸಂಸ್ಕಾರ ಮಾಡಿಸಿ ಎಂದು ಸಾ.ರಾ ಮಹೇಶ್ ಹೇಳಿದರು.
ಕೆ.ಆರ್ ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಕೆ.ಆರ್ ನಗರದಲ್ಲೂ ವೆಂಟಿಲೇಟರ್ ಇದೆ, ಆದ್ರೆ ಆಪರೇಟರ್ಸ್ ಇಲ್ಲ. ಇನ್ನೊಂದೆಡೆ ಡಾಕ್ಟರ್ಸ್, ನರ್ಸ್ ಕೊರತೆ ಬಹಳಷ್ಟಿದೆ. ಇಡೀ ಜಿಲ್ಲೆಯಲ್ಲಿರುವ ಸರ್ಕಾರಿ, ಖಾಸಗಿ ವೈದ್ಯರು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆದ್ರೆ ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಜನರಿಗೆ ಕಷ್ಟವಾಗಿದೆ. ಇಡೀ ಜಿಲ್ಲೆಯಲ್ಲಿ ಚಿಕಿತ್ಸೆ ಸಿಗದೆ ಜನ ನರಳುತ್ತಿದ್ದಾರೆ ಎಂದು ಸಾ.ರಾ ಮಹೇಶ್ ಹೇಳಿದರು.
ಕೆ. ಆರ್ ನಗರದಲ್ಲಿ ಕೋವಿಡ್ ಸೆಂಟರ್ ಮಾಡಿದ್ದೇವೆ. ಆ ಸೆಂಟರ್ ಗೆ ಈ ಮೂವರು ಡಾಕ್ಟರ್ ನಿಯೋಜನೆ ಮಾಡಿದ್ದೇವೆ. ಪ್ರತಿಯೊಬ್ಬರ ಸಂಬಳ ತಲಾ ಒಂದು ಲಕ್ಷ ರೂಪಾಯಿ. ಸಾರಾ ಸ್ನೇಹ ಬಳಗದಿಂದ ಈ ಸಂಬಳ ನೀಡುತ್ತೇವೆ. ಮುಂದಿನ ವಾರ 200 ಬೆಡ್ ಗಳ ಸುಸಜ್ಜಿತ ಕೋವಿಡ್ ಸೆಂಟರ್ ಅನ್ನು ಸಾರಾ ಸ್ನೇಹ ಬಳಗದಿಂದ ಆರಂಭಿಸುತ್ತೇವೆ. ಅದನ್ನು ತಾಲೂಕು ಆಡಳಿತಕ್ಕೆ ಹಸ್ತಾಂತರಿಸುತ್ತೇವೆ. ವಿಶ್ವಾಸದಿಂದ ಕೆಲಸ ಮಾಡಿ, ದರ್ಪದಿಂದ ಅಲ್ಲ ಅಂತಾ ನಿಮ್ಮ ಅಧಿಕಾರಿಗೆ ಹೇಳಿ ಎಂದು ಸಚಿವ ಸೋಮಶೇಖರ್ ಗೆ ಸಾರಾ ಮಹೇಶ್ ಸಲಹೆ ನೀಡಿದರು.
ಅಭಿರಾಂ ಶಂಕರ್ ಡಿಸಿಯಾಗಿದ್ದಾಗ ಡಿ. ಗ್ರೂಪ್ ನೌಕರರಿಗೂ ಗೌರವ ಕೊಡುತ್ತಿದ್ದರು. ಯಾರೇ ಸಲಹೆ ಕೊಟ್ಟರು ಸ್ವೀಕರಿಸುತ್ತಿದ್ದರು. ಆದರೆ, ಇವತ್ತಿನ ಜಿಲ್ಲಾಧಿಕಾರಿ ಗೆ ಆ ಸೌಜನ್ಯ ಇಲ್ಲ. ಈ ಜಿಲ್ಲಾಧಿಕಾರಿ ಗೆ ಇಚ್ಛಾಶಕ್ತಿ ಕೊರತೆ ಇದೆ. ಕೋವಿಡ್ ನಿರ್ವಹಣೆಯ ಉಸ್ತುವಾರಿಗೆ ಒಬ್ಬ ಹಿರಿಯ ಅಧಿಕಾರಿಯನ್ನು ನಿಯೋಜಿಸಿ ಎಂದು ಮಾಜಿ ಸಚಿವ ಸಾರಾ ಮಹೇಶ್ ತಿಳಿಸಿದರು.
Key words: mysore- DC -Rohini Sindhuri- MLA sa Ra Mahesh