ಎಲೆಹುಂಡಿ ಗ್ರಾಮದಲ್ಲಿ ಸಂಚರಿಸಿ, ಅಹವಾಲು ಕೇಳಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ…..

ಮೈಸೂರು,ಮಾರ್ಚ್,20,2021(www.justkannada.in):  ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ” ಕಾರ್ಯಕ್ರಮದ ಅಂಗವಾಗಿ ಶನಿವಾರ ಹೆಚ್.ಡಿ.ಕೋಟೆ ತಾಲ್ಲೂಕು ಕಸಬಾ ಹೋಬಳಿಯ ಎಲೆಹುಂಡಿ ಗ್ರಾಮಕ್ಕೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಭೇಟಿ ನೀಡಿ, ಗ್ರಾಮದಲ್ಲಿ ಸಂಚರಿಸಿದರು.

ಮೊದಲಿಗೆ ಗ್ರಾಮದ ವರದರಾಜಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ದೇವಾಲಯದ ಆವರಣದಲ್ಲಿ ಎರಡು ಗಿಡ ನೆಟ್ಟು ನೀರು ಎರೆದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪೋಷಣ ಪಾಕ್ಷಿಕ ಕಾರ್ಯಕ್ರಮದ ಅಂಗವಾಗಿ ಗ್ರಾಮದ ಅಂಗನವಾಡಿಯಲ್ಲಿ ಇಬ್ಬರು ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ಆಯೋಜಿಸಿದ್ದು, ಅವರಿಗೆ ಅಕ್ಷತೆ ಹಾಕಿ ಶುಭಕೋರಿದರು.

ಎಲೆಹುಂಡಿ ಸಮೀಪದ ಭೀಮನಹಳ್ಳಿಯಲ್ಲಿ ಸರ್ಕಾರಿ ಗಿರಿಜನ ಆಶ್ರಮ ಶಾಲೆಗೆ ಭೇಟಿ ನೀಡಿ, ಮಕ್ಕಳೊಂದಿಗೆ ಸಂವಾದ ಮಾಡಿದರು. ಶಾಲೆಯ 6ನೇ ತರಗತಿ ವಿದ್ಯಾರ್ಥಿ ಕಿರಣ್ ಮಗ್ಗಿ ಒಪ್ಪಿಸಿದರೆ, 7ನೇ ತರಗತಿ ವಿದ್ಯಾರ್ಥಿನಿ ಅಂಜಲಿ ‘ನಂಬಿದೆ ನಿನ್ನ ನಾಗಾಭರಣ, ಕಾಯೋ ಕರುಣಾಮಯ ನನ್ನ” ಗೀತೆ ಹಾಡಿ ಪ್ರತಿಭೆ ಪ್ರದರ್ಶಿಸಿದರು. ಜಿಲ್ಲಾಧಿಕಾರಿಗಳು ಈ ವಸತಿ ಶಾಲೆಯಲ್ಲಿ ಊಟೋಪಚಾರದ ವ್ಯವಸ್ಥೆ, ಮುಂತಾದ ಸೌಲಭ್ಯಗಳ ಬಗ್ಗೆ ಮಕ್ಕಳಿಂದ ಮಾಹಿತಿ ಪಡೆದರು.mysore dc-Rohini Sindhuri-visit- elehundi-village

ಎಲೆಹುಂಡಿ ಗ್ರಾಮ ಸರ್ಕಾರಿ ಶಾಲೆಯಲ್ಲಿ ಗಿಡನೆಟ್ಟು ನೀರೆರೆದರು. ಗ್ರಾಮದ ಹಲವರು ತಮ್ಮ ಕುಂದುಕೊರತೆಗಳ ಅಹವಾಲುಗಳನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು.

ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎ.ಎನ್. ಯೋಗೇಶ್, ಉಪವಿಭಾಗಾಧಿಕಾರಿ ಬಿ.ಎನ್. ವೀಣಾ, ತಹಶೀಲ್ದಾರ್ ನರಗುಂದ್, ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Key words: mysore dc-Rohini Sindhuri-visit- elehundi-village