ಮೈಸೂರು,ಸೆಪ್ಟಂಬರ್,29,2020(www.justkannada.in): ಮೈಸೂರಿನ ಜಿಲ್ಲಾಧಿಕಾರಿ ಬಿ. ಶರತ್ ಅವರನ್ನ ವರ್ಗಾವಣೆ ಮಾಡಿ ಆ ಸ್ಥಾನಕ್ಕೆ ರೋಹಿಣಿ ಸಿಂಧೂರಿ ಅವರನ್ನ ನೇಮಕ ಮಾಡಿರುವುದಕ್ಕೆ ಸರ್ಕಾರದ ವಿರುದ್ಧ ಮಾಜಿ ಸಚಿವ ಹಾಗೂ ಶಾಸಕ ಸಾ.ರಾ ಮಹೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಶಾಸಕ ಸಾ.ರಾ ಮಹೇಶ್, ಕೇವಲ 29 ದಿನಗಳ ಅವಧಿಯಲ್ಲಿ ಆಂಧ್ರದ ಓರ್ವ ಹೆಣ್ಣು ಮಗಳಿಗೋಸ್ಕರ, ಕನ್ನಡಿಗ ದಲಿತ ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಲಾಗಿದೆ. ಇದೇ ರಾಜ್ಯ ಸರ್ಕಾರದ ಅತಿದೊಡ್ಡ ಸಾಧನೆಯಾಗಿದೆ. ಮೈಸೂರು ದಸರಾ ಉನ್ನತಮಟ್ಟದ ಮಟ್ಟದ ಸಭೆ ನಡೆದ ಬಳಿಕ, ದಸರಾ ವಿಶೇಷಾಧಿಕಾರಿಯಾಗಿರುವ ಜಿಲ್ಲಾಧಿಕಾರಿಯನ್ನೇ ವರ್ಗಾವಣೆ ಮಾಡಿರುವುದು ಇದೇ ಮೊದಲು. ಹಿಂದೆಂದೂ ಕೂಡ ಮೈಸೂರು ದಸರಾ ವಿಶೇಷಾಧಿಕಾರಿಯಾಗಿರುವ ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಿರಲಿಲ್ಲ ಎಂದು ರಾಜ್ಯ ಸರ್ಕಾರದ ಕಾರ್ಯ ವೈಖರಿಯ ವಿರುದ್ಧ ಟೀಕಾಪ್ರಹಾರ ನಡೆಸಿದರು.
ಜಿಲ್ಲಾಧಿಕಾರಿ ಬದಲಾವಣೆ ಆದ ಸಂದರ್ಭದಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ. ಕಳೆದ 29 ದಿನಗಳಿಂದ ಮೈಸೂರಿನಲ್ಲಿ ಯಾವುದೇ ಬಿಲ್ ಗಳು ಪಾಸ್ ಆಗಿರಲಿಲ್ಲ. ಕೆಲವೊಂದು ಪ್ರಕ್ರಿಯೆಗಳು ಮುಗಿದ ಬಳಿಕ ಜಿಲ್ಲಾಧಿಕಾರಿ ಬಿಲ್ ಗಳಿಗೆ ಸಹಿ ಹಾಕಬೇಕಾಗಿರುತ್ತದೆ. ಆ ಎಲ್ಲಾ ವಿಧಿಗಳು ಪೂರ್ಣಗೊಳ್ಳುವ ಸಮಯದಲ್ಲಿ ಏಕಾಏಕಿ ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಿದ್ದು ಸರಿಯಲ್ಲ. ಇದರಿಂದ ಜಿಲ್ಲೆಯ ಅಭಿವೃದ್ಧಿಗೆ ಮತ್ತಷ್ಟು ಸಮಸ್ಯೆಗಳು ಎದುರಾಗಲಿವೆ ಎಂದು ಸಾ.ರಾ ಮಹೇಶ್ ಕಿಡಿಕಾರಿದರು.
ಶರತ್ ದಲಿತ ಕನ್ನಡಿಗ ಎಂದು ಸಾರಿ ಸಾರಿ ಹೇಳಿದ ಸಾ.ರಾ ಮಹೇಶ್…
ಕನ್ನಡಿಗ ದಲಿತ ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಲಾಗಿದೆ ಎನ್ನುವ ಮೂಲಕ ಶರತ್ ದಲಿತ ಕನ್ನಡಿಗ ಎಂದು ಸಾರಿ ಸಾರಿ ಹೇಳಿದ ಸಾ.ರಾ ಮಹೇಶ್, ರೋಹಿಣಿ ಸಿಂಧೂರಿಗೆ ಜಿಲ್ಲಾಧಿಕಾರಿಯಾಗೆ ಇರಬೇಕೆಂಬ ಹಠ ಇದೆ. ಐಎಎಸ್ ಅಧಿಕಾರಿಗಳು ದೇಶದಲ್ಲಿ ಎಲ್ಲಿ ಹಾಕಿದ್ರು ಹೋಗಬೇಕು. ಜಿಲ್ಲಾಧಿಕಾರಿಯಾಗೆ ಇರಬೇಕೆಂದು ಮೈಸೂರಿಗೆ ವರ್ಗ ಮಾಡಿಸಿಕೊಂಡಿದ್ದಾರೆ. ಇಂತಹ ಅಧಿಕಾರಿಯಿಂದ ಹೇಗೆ ಉತ್ತಮ ಆಡಳಿತ ನಿರೀಕ್ಷಿಸಲು ಸಾಧ್ಯ..? ಎಂದು ಪ್ರಶ್ನಿಸಿದರು.
175 ಕೋಟಿ ವೆಚ್ಚದಲ್ಲಿ ನಡೆದ ಮಹಾ ಮಸ್ತಕಾಭಿಷೇಕದ ವೇಳೆ ಹಾಸನ ಜಿಲ್ಲಾಧಿಕಾರಿಯಾಗಿ ಹೋಗಿದ್ರು. ಈಗ ವಿಶ್ವ ವಿಖ್ಯಾತ ಮೈಸೂರು ಜಿಲ್ಲಾಧಿಕಾರಿಯಾಗಿ ಬಂದಿದ್ದಾರೆ. ಐಎಎಸ್ ಅಧಿಕಾರಿ ಅಕ್ರಂಪಾಷ ಗೆ ನಿವಾಸ ಬಿಟ್ಟುಕೊಡದೆ ರೋಹಿಣಿ ಸಿಂಧೂರಿ ಸತಾಯಿಸಿದ್ದರು. ಇದು ಕೇವಲ ಶರತ್ಗೆ ಆದ ಅಪಮಾನವಲ್ಲ. ಇಡೀ ಕನ್ನಡಿಗರಿಗೆ, ಕನ್ನಡಿಗ ಐಎಎಸ್ ಅಧಿಕಾರಿಗಳಿಗೆ ಆದ ಅವಮಾನ ಎಂದು ಸಾ.ರಾ ಮಹೇಶ್ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಆಂಧ್ರ ಸಿಎಂ ಸರ್ಕಾರ ನಡೆಯುತ್ತಿದ್ದೆಯಾ ಎಂಬ ಪ್ರಶ್ನೆ ಕಾಡ್ತಿದೆ…?
ಬೇರೆ ರಾಜ್ಯದ ಸಿಎಂ ಒತ್ತಡಕ್ಕೆ ಮಣಿದು ವರ್ಗಾವಣೆ ಮಾಡಲಾಗಿದೆ ಅಂತ ಮಾಹಿತಿ ಇದೆ. ಶರತ್ ಅವರನ್ನ ಮೈಸೂರಿಗೆ ಪೋಸ್ಟಿಂಗ್ ಮಾಡಬಾರದಿತ್ತು. ಮಾಡಿದ ಬಳಿಕ ಇದೀಗಾ ಅವಮಾನ ಮಾಡಿದಾಗೆ ಆಯ್ತು. ಒಬ್ಬ ಡಿಸಿಯಾಗಿ ಅವರ ಮನಸ್ಸು ಎಷ್ಟು ನೋವು ಅನುಭವಿಸಿರತ್ತೆ. ಕನ್ನಡದಲ್ಲಿ IAS ಮಾಡುವವರ ಸಂಖ್ಯೆಯೇ ವಿರಳ. ಅಂತಹದಲ್ಲಿ ಆಂಧ್ರದ ಮಹಿಳೆಗಾಗಿ ಕನ್ನಡಿಗನಿಗೆ ಅವಮಾನ ಮಾಡ್ತಿದ್ದಾರೆ. ರಾಜ್ಯದಲ್ಲಿ ಆಂಧ್ರ ಸಿಎಂ ಸರ್ಕಾರ ನಡೆಯುತ್ತಿದೆಯಾ ಎಂಬ ಪ್ರಶ್ನೆ ಕಾಡ್ತಿದೆ? ನಮ್ಮ ರಾಜ್ಯದಲ್ಲಿ ಯಡಿಯೂರಪ್ಪ ಆಡಳಿತ ನಡಸುತ್ತಿದ್ದಾರಾ? ಅಥವಾ ಆಂಧ್ರದ ಸಿಎಂ ಆಡಳಿತ ನಡೆಸುತ್ತಿದ್ದರಾ.? ಎಂದು ಪ್ರಶ್ನಿಸಿದರು.
ಸರ್ಕಾರ ವರ್ಗಾವಣೆ ದಂದೆ ನಡೆಸುತ್ತಿದ್ದೆ. ಅದರ ಭಾಗವಾಗಿ ರೋಹಿಣಿ ಸಿಂಧೂರಿ ವರ್ಗಾವಣೆ ಆಗಿದೆ ಎಂದು ಸಾ.ರಾ ಮಹೇಶ್ ಆರೋಪಿಸಿದರು.
Key words: Mysore- DC -Sharath –Transfer-MLA- SA RA Mahesh- outrage- against- government