ಮೈಸೂರು, ಸೆ.28, 2020 : (www.justkannada.in news) : ಕೆಲ ದಿನಗಳ ಹಿಂದೆಯಷ್ಟೆ ಮೈಸೂರು ಜಿಲ್ಲಾಧಿಕಾರಿಯಾಗಿ ನೇಮಕಗೊಂಡಿರುವ ಐಎಎಸ್ ಅಧಿಕಾರಿ ಶರತ್ ಅವರನ್ನು ಒತ್ತಡಕ್ಕೆ ಮಣಿದು ರಾಜ್ಯ ಸರಕಾರ ವರ್ಗಾಯಿಸಿದರೆ, ಸರಕಾರದ ವಿರುದ್ಧ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಬೋವಿ ಅಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷ ಜಿ.ವಿ.ಸೀತರಾಮು ಎಚ್ಚರಿಸಿದ್ದಾರೆ.
ಈ ಬಗ್ಗೆ ಜಸ್ಟ್ ಕನ್ನಡ ಜತೆ ಮಾತನಾಡಿದ ಜಿ.ವಿ.ಸೀತಾರಾಮು, ರಾಜಕೀಯ ಒತ್ತಡಗಳಿಗೆ ಮಣಿದು ರಾಜ್ಯ ಸರಕಾರ ಶರತ್ ಅವರನ್ನು ಬದಲಾಯಿಸಲು ಮುಂದಾಗಿರುವುದು ತಿಳಿದು ಬಂದಿದೆ . ಇದನ್ನು ಯಾವುದೇ ಕಾರಣಕ್ಕೂ ಸಹಿಸಲಾಗದು. ತಳ ಸಮುದಾಯದ ಅಧಿಕಾರಿಗಳಿಗೆ ಈ ಸರಕಾರದಲ್ಲಿ ರಕ್ಷಣೆ, ಸ್ವತಂತ್ರ ಇಲ್ಲದಂತಾಗಿರುವುದು ದುರಾದೃಷ್ಠಕರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಐಎಎಸ್ ಅಧಿಕಾರಿ ಶರತ್ ಅವರು ಮೈಸೂರು ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿ ತಿಂಗಳು ಸಹ ಕಳೆದಿಲ್ಲ. ಅಧಿಕಾರ ಸ್ವೀಕರಿಸಿದ ಕೂಡಲೇ ಕರೋನಾ ನಿಯಂತ್ರಣದಂತ ಕರ್ತವ್ಯದಲ್ಲಿ ಜಿಲ್ಲಾಧಿಕಾರಿ ತೊಡಗಿಸಿಕೊಂಡಿದ್ದಾರೆ. ಜತೆಗೆ ನಾಡ ಹಬ್ಬ ದಸರಾ ಮಹೋತ್ಸವದ ಪೂರ್ವ ತಯಾರಿಯ ಸಭೆಗಳಲ್ಲಿ ನಿರತವಾಗಿದ್ದಾರೆ. ಇಂಥ ವೇಳೆ ಏಕಾಏಕಿ ಯಾವುದೇ ಕಾರಣ ಇಲ್ಲದೆ ಜಿಲ್ಲಾಧಿಕಾರಿ ಶರತ್ ರ ಬದಲಾವಣೆಯ ಒತ್ತಡಕ್ಕೆ ರಾಜ್ಯ ಸರಕಾರ ಮಣಿಯುತ್ತಿರುವುದು ಸರಿಯಲ್ಲ ಎಂದರು.
ಮೈಸೂರು ಜಿಲ್ಲಾಧಿಕಾರಿ ಹುದ್ದೆ ಮೇಲೆ ಕಣ್ಣಿಟ್ಟಿರುವ ಐಎಎಸ್ ಅಧಿಕಾರಿಯೊಬ್ಬರು, ಶರತ್ ವರ್ಗಾವಣೆಗೆ ಸಂಬಂಧಿಸಿದಂತೆ ಲಾಭಿ ನಡೆಸುತ್ತಿರುವುದು ಮೂಲಗಳ ಮಾಹಿತಿಯಿಂದ ಸ್ಪಷ್ಟವಾಗಿದೆ. ಇದಕ್ಕಾಗಿ ಅವರು ನೆರೆ ರಾಜ್ಯದ ಮುಖ್ಯಮಂತ್ರಿಗಳಿಂದಲೂ ರಾಜ್ಯ ಸರಕಾರಕ್ಕೆ ಒತ್ತಡ ಹೇರಿದ್ದಾರೆ ಎನ್ನಲಾಗಿದೆ. ಈ ಒತ್ತಡಕ್ಕೆ ರಾಜ್ಯ ಸರಕಾರ ಯಾವುದೇ ಕಾರಣಕ್ಕೂ ಮಣಿಯಬಾರದು. ಒಂದು ವೇಳೆ ಮಣಿದು ಜಿಲ್ಲಾಧಿಕಾರಿ ಶರತ್ ಅವರನ್ನು ವರ್ಗಾವಣೆ ಮಾಡಿದ್ದೇ ಆದರೆ, ಈ ಭಾಗದ ಬೋವಿ ಸಮುದಾಯದ ಜನ ಸರಕಾರದ ವಿರುದ್ಧ ರಸ್ತೆಗಿಳಿದು ಪ್ರತಿಭಟನೆ ನಡೆಸುವುದು ಅನಿವಾರ್ಯ ಎಂದು ಸೀತಾರಾಮು ಎಚ್ಚರಿಕೆ ನೀಡಿದರು.
key words : mysore-dc-transferred-sharath-bovi-community-oppose-transfer