ಮೈಸೂರು, ಅ.11, 2021 : (www.justkannada.in news ) ನಗರದಲ್ಲಿ ಹತ್ತಾರು ವರ್ಷಗಳಿಂದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವವರ ಕನಸು ಸ್ವಂತ ಕನಸು ಹೊಂದಬೇಕು ಎಂಬುದು. ಆದರೆ ನಿವೇಶನ, ಕಟ್ಟಡ ಸಾಮಾಗ್ರಿ ಬೆಲೆ ದುಬಾರಿ ಹೀಗೆ ನಾನಾ ಕಾರಣಗಳಿಂದ ಮಧ್ಯಮ ಹಾಗೂ ಬಡ ಕುಟುಂಬಗಳ ಕನಸಿನ ಸೂರು ನನಸಾಗುವುದು ಕಷ್ಟಸಾಧ್ಯ. ಇದನ್ನು ಮನಗಂಡ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಗುಂಪುಮನೆ ಯೋಜನೆಯಡಿ ಸ್ವಂತ ಮನೆ ಹೊಂದಬೇಕೆಂದು ಕನಸು ಕಾಣುತ್ತಿರುವವರ ಕನಸನ್ನು ನನಸು ಮಾಡಲು ಹೊರಟಿದೆ.
ಮುಡಾ ವ್ಯಾಪ್ತಿಯ ಬಡಾವಣೆಗಳಲ್ಲಿ ಮುಡಾ ಅಧ್ಯಕ್ಷ ಎಚ್.ವಿ. ರಾಜೀವ್ ಗುಂಪು ಮನೆ ಯೋಜನೆಯಲ್ಲಿ ಸುಸಜ್ಜಿತ ಮನೆ ನಿರ್ಮಿಸಿಕೊಡಲು ಮತ್ತು ಗುಣಮಟ್ಟದ ಮನೆಗಳನ್ನು ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದಾರೆ. ಇದಕ್ಕೆ ಪೂರಕವಾಗಿ ನಗರದ ಜನತೆಯಿಂದ ಸಮೀಕ್ಷೆ ಕಾರ್ಯವನ್ನೂ ಕೈಗೊಂಡಿದ್ದಾರೆ.
ಮೈಸೂರು ನಗರ ಕೂಡ ಬೆಂಗಳೂರಿನಷ್ಟೇ ವೇಗವಾಗಿ ಬೆಳೆಯುತ್ತಿದೆ. ಜನಸಂಖ್ಯೆ ಕೂಡ ದ್ವಿಗುಣಗೊಳ್ಳುತ್ತಿದೆ. ಹೀಗಾಗಿ ಸ್ವಂತ ಸೂರಿನ ಕನಸು ಎಲ್ಲರಿಗೂ ನನಸು ಮಾಡುವುದು ತುಸು ಕಷ್ಟಸಾಧ್ಯವೇ ಸರಿ. ಆದರೆ ಬಹು ಮಹಡಿ ಕಟ್ಟಡ ಮಾದರಿಯ ಮನೆಗಳಿಗೆ ಹೆಚ್ಚು ಒತ್ತು ನೀಡಿದರೆ ಎಲ್ಲರೂ ಸ್ವಂತ ಸೂರು ಹೊಂದಬಹುದು. ಹೀಗಾಗಿ ಗುಂಪು ಮನೆಗಳಿಗೆ ಮುಡಾ ಹೆಚ್ಚು ಗಮನ ಹರಿಸಿದೆ. ಜಿ ಪ್ಲಸ್ ೧೩ ಅಂತಸ್ತಿನ ಗುಂಪು ಮನೆ ನಿರ್ಮಾಣಕ್ಕಾಗಿ ಸರ್ವೆ ನಡೆಸಿ ಯೋಜನೆ ರೂಪಿಸಿ ಅದನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್ ಹೆಜ್ಜೆ ಇಟ್ಟಿದ್ದಾರೆ.
ಗುಂಪು ಮನೆ ಯೋಜನೆ ಸಂಬಂಧ ಮುಡಾ ಅಧ್ಯಕ್ಷ ರಾಜೀವ್ ಮಾತುಗಳು…
ಗುಂಪು ಮನೆ ಯೋಜನೆಗೆ ಮೈಸೂರು ನಗರಾಭಿವೃದ್ಧಿ ಪ್ರಾಕಾರ (ಮುಡಾ)ದಿಂದ ಡಿಪಿಆರ್ ಸಿದ್ಧವಾಗಿದೆ. ಸರಕಾರದ ಅನುಮೋದನೆ ಬಳಿಕ ಶೀಘ್ರವೇ ಯೋಜನೆಗೆ ಚಾಲನೆ ಸಿಗಲಿದೆ. ವಿಜಯನಗರ 2ನೇ ಹಂತದ ರಿಂಗ್ ರಸ್ತೆ ಬಳಿ 4 ಎಕರೆ ಪ್ರದೇಶದಲ್ಲಿ 13 ಅಂತಸ್ತಿನ 2 ಬ್ಲಾಕ್ಗಳಲ್ಲಿ 560 ಮನೆ, ದಟ್ಟಗಳ್ಳಿಯ 3.8 ಎಕರೆ ಜಾಗದಲ್ಲಿ 392 ಮನೆ ಹಾಗೂ ಸಾತಗಳ್ಳಿ ಬಡಾವಣೆಯಲ್ಲಿ 1008 ಮನೆ ಸೇರಿದಂತೆ ಒಟ್ಟು 1960 ಮನೆ (ಯೂನಿಟ್)ಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.
ಈ ಮೂರೂ ಬಡಾವಣೆಗಳೂ ಸಹ ರಿಂಗ್ ರಸ್ತೆ ಒಳಗೆ ಜನವಸತಿ ಪ್ರದೇಶವಾಗಿದ್ದು, ಗುಂಪು ಮನೆ ಯೋಜನೆಗೆ ಸೂಕ್ತ ಸ್ಥಳಗಳಾಗಿವೆ. ಇಲ್ಲಿಗೆ ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಗಳನ್ನು ಒದಗಿಸಲಾಗುವುದು. ಗುಣಮಟ್ಟ ಕಾಪಾಡಿಕೊಳ್ಳಲು ಕಂಕಣಬದ್ಧ.
ನಗರಾಭಿವೃದ್ಧಿ ಪ್ರಾಧಿಕಾರ ನಗರದ ಜನತೆಗೆ ಉತ್ತಮ ಮನೆ ನಿರ್ಮಾಣಕ್ಕಾಗಿ ಗುಣಮಟ್ಟ ಕಾಪಾಡಿಕೊಳ್ಳಲು ಕಂಕಣ ಬದ್ಧವಾಗಿರ ಬೇಕು. ಹೀಗಾಗಿ ಬಹುಮಹಡಿ ಕಟ್ಟಡಗಳ ಗುಂಪು ಮನೆ ಯೋಜನೆಯಡಿ ಸೂರು ಕಲ್ಪಿಸಲು ಯೋಜನೆ ರೂಪಿಸಿ ವರದಿ ಮತ್ತು ನಕ್ಷೆ ತಯಾರಿಸಲಾಗಿದೆ.
ಜೆ. 13 ಮತ್ತು 11 ವಾಸದ ಮನೆಗಳು ನಿರ್ಮಾಣಕ್ಕೆ ಜನರ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ಸಾತಗಳ್ಳಿಯಲ್ಲಿ ಸಿಂಗಲ್ ಬೆಡ್ ರೂಂ, ಶಾರದೇವಿನಗರದಲ್ಲಿ ಡಬಲ್ ಬೆಡ್ ರೂಂ ಮನೆ ಮಾಡುವ ಯೋಜನೆ ಇದೆ. ಸಾರ್ವಜನಿಕರಿಂದ ಅರ್ಜಿ ಸಲ್ಲಿಕೆಗೆ ಇನ್ನೂ ಕಾಲಾವಕಾಶವಿದೆ. ಅಷ್ಟರೊಳಗೆ ಬರುವ ಎಲ್ಲ ಅರ್ಜಿಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ಸಾರ್ವಜನಿಕರ ಅಭಿಪ್ರಾಯ, ಸಲಹೆ ಸೂಚನೆಗಳನ್ನು ಪರಿಗಣಿಸಿ ಯೋಜನೆಗೆ ಮತ್ತಷ್ಟು ರೂಪ ನೀಡಲಾಗುತ್ತದೆ ಎಂದು ಎಚ್.ವಿ.ರಾಜೀವ್ ತಿಳಿಸಿದರು.
ಗುಂಪು ಮನೆ ಯೋಜನೆಗೆ ಸಂಬಂಧಿಸಿದಂತೆ ವಿಷಯವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್,ಟಿ.ಸೋಮಶೇಖರ್ ಅವರೊಂದಿಗೆ ಚರ್ಚಿಸಿದ ವೇಳೆ ಸಚಿವರು ಸಮಗ್ರ ವರದಿ ಮತ್ತು ಯೋಜನೆ ತಯಾರಿಸಿಕೊಂಡು ಬರುವಂತೆ ಸೂಚಿಸಿದ್ದರು. ಅದರಂತೆ ನಾವು ತಯಾರಿಸಿದ ವರದಿಯನ್ನು ಪ್ರಾಧಿಕಾರದ ಸಭೆಯಲ್ಲಿ ಅನುಮೋದನೆ ಪಡೆದು ಅಲ್ಲಿಂದ ನಗರಾಭಿವೃದ್ಧಿ ಇಲಾಖೆ ಒಪ್ಪಿಗೆ ಪಡೆದು ಬಳಿಕ ಸಚಿವ ಸಂಪುಟದ ಅನುಮತಿ ಪಡೆಯಲಾಯಿತು. ಒಟ್ಟಾರೆ – 377 ಕೋಟಿ ಮೊತ್ತದ ಕಾಮಗಾರಿ ನಡೆಸಿ ಸಮಸ್ಯೆ ಪರಿಹರಿಸಲಾಯಿತು, ಇದರ ಜತೆಗೆ ನಗರ ಯೋಜನೆ ವ್ಯಾಪ್ತಿಗೆ ಒಳಪಡುವ ಗ್ರಾಮಗಳ ಅಭಿವೃದ್ಧಿ ಕಾರ್ಯಕೈಗೊಳ್ಳಲಾಯಿತು.
ಕಳೆದ 30 ವರ್ಷದಿಂದ ಮೈಸೂರಿನ ಜನತೆಗೆ ಬಹುತೇಕರಿಗೆ ಸೂರಿನ ಭಾಗ್ಯ ಸಿಕ್ಕಿಲ್ಲ. ಮುಡಾದಿಂದ ಎಲ್ಲರಿಗೂ ಸೈಟ್ ಕೊಡಲು ಮುಡಾದಿಂದ ಸಾಧ್ಯವಾಗುತ್ತಿಲ್ಲ. ಮಧ್ಯಮ ವರ್ಗ ಹಾಗೂ ಅದಕ್ಕಿಂತಲೂ ಕೆಳಗೆ ಇರುವ ಜನರಿಗೆ ವರ್ಟಿಕಲ್ ಮಾದರಿ ಮನೆ ನೀಡುವುದು ನಮ್ಮ ಮುಂದಿರುವ ಸದ್ಯದ ಆಯ್ಕೆ. ಬೆಂಗಳೂರಿನ ಬಿಡಿಎ ಬಹುಮಹಡಿ ಕಟ್ಟಡ ಮಾದರಿಯಲ್ಲಿ ನಗರದಲ್ಲೂ ಗುಂಪು ಮನೆ ನಿರ್ಮಿಸಿ ಸಾಧ್ಯವಾದಷ್ಟು ಮಂದಿಗೆ ಮನೆ ನಿರ್ಮಿಸಿಕೊಡಬೇಕೆಂಬುದು ನಮ್ಮ ಉದ್ದೇಶವಾಗಿದೆ. ಈ ಸಂಬಂಧ ಈಗಾಗಲೇ ಬೆಂಗಳೂರಿಗೂ ಹೋಗಿ ಪರಿಶೀಲನೆ ನಡೆಸಿದ್ದೇವೆ. ಅಲ್ಲದೆ, ಸಂಬಂಧಪಟ್ಟ ಎಂಜಿನಿಯರ್, ಖಾಸಗಿ ಡೆವಲಪರ್ಸ್ ಜತೆಯೂ ಮಾತುಕತೆ ನಡೆಸಲಾಗಿದೆ. ಸದ್ಯ ಒಂದೊಳ್ಳೆ ತಂಡ ನಮ್ಮ ಬಳಿ ಇದೆ. ಗುಣಮಟ್ಟದಲ್ಲಿ ರಾಜಿ ಆಗುವುದಿಲ್ಲ.
ಗುಂಪು ಮನೆಯಲ್ಲಿ ಸೋಲಾರ್ ಅಳವಡಿಸಿ ಎನರ್ಜಿ ಉಳಿಸಲಾಗುವುದು. ವಾಟರ್ ಮ್ಯಾನೆಜ್ಮೆಂಟ್, ತ್ಯಾಜ್ಯ ವಿಲೇವಾರಿಗೆ ಸೂಕ್ತ ವಿಧಾನ ಅನುಸರಿಸಲಾಗುವುದು. ಸದ್ಯ 1 ಬಿಎಚ್ಕೆಗೆ 16 ಲಕ್ಷ ರೂ., 2 ಬಿಎಚ್ಕೆಗೆ 29 ಲಕ್ಷ ರೂ(5.34ಚದರ ಅಡಿ). ಹಾಗೂ 2 ಬಿಎಚ್ಕೆ 33 ಲಕ್ಷ ರೂ (5.64 ಚದರ ಅಡಿ), ಡಿಮ್ಯಾಂಡ್ ಸರ್ವೆ ಕೂಡ ಮಾಡಲಾಗಿದ್ದು, 35 ಸಾವಿರಕ್ಕೂ ಹೆಚ್ಚು ಮಂದಿ ಬೇರೆ ಬೇರೆ ವಿಧಾನದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಮನೆ ಹಂಚಿಕೆಯಾಗುತ್ತಿದ್ದಂತೆಯೇ ಬ್ಯಾಂಕ್ನಿಂದ ಸಾಲ ಸೌಲಭ್ಯ ದೊರೆಯಲಿದೆ.
ಅಪಾರ್ಟ್ ಮೆಂಟ್ ಕಲ್ಚರ್ ಮೈಸೂರಿನಲ್ಲಿ ಮುನ್ನಲೆಗೆ ಬರುತ್ತಿದ್ದು, ಖಾಸಗಿ ಸಂಸ್ಥೆಗಳು ನಿರ್ಮಾಣ ಮಾಡುವ ಮೂಲಸವಲತ್ತುಗಳ ಮಾದರಿಯಲ್ಲೇ ಮುಡಾದ ಅಪಾರ್ಟ್ ಮೆಂಟ್ ಸಹ ನಿರ್ಮಾಣವಾಗಲಿದೆ. ಆ ಮೂಲಕ ಸರಕಾರಿ ದರದಲ್ಲಿ ಖಾಸಗಿ ಸಂಸ್ಥೆಗಳ ಸವಲತ್ತು ನಾಗರಿಕರಿಗೆ ಲಭಿಸಲಿದೆ. ಇದರಿಂದಾಗಿ ಈ ಯೋಜನೆ ಯಶಸ್ವಿ ಕಾಣಲಿದೆ. ಆ ಮೂಲಕ ಪ್ರಾಧಿಕಾರ ಜನರ ವಿಶ್ವಾಸ ಗಳಿಸಲಿದೆ ಎಂದು ಎಚ್.ವಿ.ರಾಜೀವ್ ವಿಶ್ವಾಸ ವ್ಯಕ್ತಪಡಿಸಿದರು.
key words :mysore-development-authority-MUDA-apartments-group-houses-rajeev-bjp