ಮುಡಾ ಅಧ್ಯಕ್ಷರಾಗಿ ಎಚ್.ಎನ್.ವಿಜಯ್ ನಾಮಫಲಕ ಈಗಲೂ ರಾರಾಜಿಸುತ್ತಿದೆ, ವೆಬ್ ಸೈಟ್ ನಲ್ಲೂ ಇದೆ ಭಾವಚಿತ್ರ..!

 

ಮೈಸೂರು, ಆ.03, 2019 : (www.justkannada.in news) : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಈಗಲೂ ಎಚ್.ಎನ್.ವಿಜಯ್ ಅವರ ನಾಮಫಲಕವೇ ರಾರಾಜಿಸುತ್ತಿದೆ. ಜತೆಗೆ ಮುಡಾ ವೆಬ್ ಸೈಟ್ ನಲ್ಲೂ ಅಧ್ಯಕ್ಷರ ಭಾವಚಿತ್ರದಲ್ಲಿ ವಿಜಯ್ ಅವರ ಫೋಟೋ ಇದೆ.

ಕಳೆದ ವಾರ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಹಿಂದಿನ ಮೈತ್ರಿ ಸರಕಾರದಲ್ಲಿ ನಿಗಮ, ಮಂಡಳಿಗಳಿಗೆ ಮಾಡಿದ್ದ ನೇಮಕವನ್ನು ರದ್ದುಪಡಿಸಿ ಆದೇಶ ಹೊರಡಿಸಲಾಯಿತು. ಈ ತಕ್ಷಣದಿಂದಲೇ ಜಾರಿಗೆ ಬರುವಂತೆ ನೇಮಕಾತಿಯನ್ನು ರದ್ದು ಪಡಿಸಲಾಗಿದೆ ಎಂದು ಸರಕಾರದ ಸುತ್ತೊಲೆಯಲ್ಲಿ ಆದೇಶಿಸಲಾಗಿತ್ತು.

ಆದರೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯ ಅಧ್ಯಕ್ಷರ ಕೊಠಡಿ ಮುಂಭಾಗದ ನಾಮಫಲಕವಿನ್ನು ತೆರವುಗೊಳಿಸಿಲ್ಲ. ಪರಿಣಾಮ ಈಗಲೂ ಎಚ್.ಎನ್.ವಿಜಯ್ ಅವರ ನಾಮಫಲಕವೇ ರಾರಾಜಿಸುತ್ತಿದೆ. ಸರಕಾರದ ನಿಯಮಾವಳಿಗಳ ಪ್ರಕಾರ, ಅಧ್ಯಕ್ಷ ಗಾದಿಗೆ ನೇಮಕ ನಡೆಯದಿದ್ದ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳೇ ಆ ಹುದ್ದೆ ಅಲಂಕರಿಸುತ್ತಾರೆ. ಹಾಗಾಗಿ ನಾಮಫಲಕದಲ್ಲಿ ಮೈಸೂರು ಜಿಲ್ಲಾಧಿಕಾರಿ ಹೆಸರು ಅಳವಡಿಸಬೇಕಿತ್ತು. ಆದರೆ ಅದಾಗಿಲ್ಲ.

ಜತೆಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕೃತ ವೆಬ್ ಸೈಟ್ ನಲ್ಲೂ ಅಧ್ಯಕ್ಷರ ಬದಲಾವಣೆಗೆ ಸಂಬಂಧಿಸಿದಂತೆ ಮಾಹಿತಿ ಇಲ್ಲ. ಈಗಲೂ www.mudamysore.gov.in ವೆಬ್ ಸೈಟ್ ಕ್ಲಿಕ್ ಮಾಡಿದ್ರೆ ವಿಜಯ್ ಅವರ ಭಾವಚಿತ್ರವೇ ಅಧ್ಯಕ್ಷರ ಸ್ಥಳದಲ್ಲಿ ಕಾಣಿಸುತ್ತಿದೆ.

—-

key words : mysore-development-authority-MUDA-president-name-plate-not-removed