ಮೈಸೂರು,ಜನವರಿ,9,2025 (www.justkannada.in): ಬೋರ್ ವೆಲ್ ನೀರು ತಪ್ಪಿಸಿ ಜಲಮೂಲದಿಂದ ಶುದ್ಧ ಕುಡಿಯುವ ನೀರನ್ನು ಪ್ರತಿಯೊಂದು ಮನೆಗೂ ತಲುಪಿಸಲು ರೂಪಿಸಿರುವ ಜಲಜೀವನ್ ಮಿಷನ್ ಯೋಜನೆಯಡಿ ಮೈಸೂರು ಜಿಲ್ಲೆಯಲ್ಲಿ 4.43 ಲಕ್ಷ ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಲಾಗಿದ್ದು, ಶೀಘ್ರದಲ್ಲೇ ಶೇ. 100 ರಷ್ಟು ಗುರಿ ತಲುಪಲಿದೆ.
ದೇಶದ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಒದಗಿಸಿ ಕಲುಷಿತ ಮತ್ತು ಬೋರ್ ವೆಲ್ ನೀರು ಕುಡಿಯುವುದನ್ನು ತಪ್ಪಿಸಲು ಪ್ರಧಾನಮಂತ್ರಿ ನರೇಂದ್ರಮೋದಿ ಸರ್ಕಾರ ಜಲ್ ಜೀವನ್ ಮಿಷನ್ ಯೋಜನೆಯನ್ನು ಅನುಷ್ಠಾನಕ್ಕೆ ತಂದಿತ್ತು. ಈ ಯೋಜನೆ ಅಡಿಯಲ್ಲಿ ಮನೆ ಮನೆಗೆ ಗಂಗೆ ಹರಿಯುವಂತೆ ಮಾಡಿದ ಮೇಲೆ ಗ್ರಾಮದ ಮಹಿಳೆಯರು ಕೂಲಿ ಕಾರ್ಮಿಕರು ನೀರಿಗಾಗಿ ಪರದಾಡುವ ಸ್ಥಿತಿ ಬದಲಾಗಿದೆ.
ಈಗ ದಿನದ 24 ಗಂಟೆಯೂ ಮನೆಯಂಗಳದ ನಲ್ಲಿಯಲ್ಲಿ ನೀರು ಹರಿಯುತ್ತಿದೆ. ಮೊದಲಿನಂತೆ ಡ್ರಮ್ ಗಳಲ್ಲಿ ಹಾಗೂ ನೀರಿನ ತೊಟ್ಟಿಯಲ್ಲಿ ನೀರನ್ನು ಸಂಗ್ರಹಿಸುವ ಅವಶ್ಯಕತೆ ಇಲ್ಲ, ಗ್ರಾಮದಲ್ಲಿರುವ ಓವರ್ ಹೆಡ್ ಟ್ಯಾಂಕ್ ನಲ್ಲಿ ನೀರು ಇರುತ್ತದೆ. ಯಾವಾಗ ಬೇಕಾದರೂ ಮನೆ ಅಂಗಳದಲ್ಲಿರುವ ನಲ್ಲಿಯಲ್ಲಿ ನೀರು ಬರುತ್ತಿರುತ್ತದೆ. ಈ ಯೋಜನೆಯು 2025ಕ್ಕೆ ಮುಕ್ತಾಯಗೊಳ್ಳಬೇಕಿರುವ ರಾಜ್ಯದ ಮೈಸೂರು, ಚಾಮರಾಜನಗರ, ಮಂಡ್ಯ ಸೇರಿದಂತೆ 31 ಜಿಲ್ಲೆಗಳಲ್ಲಿ ನಿಗದಿತ ಕಾಮಗಾರಿಗಳು ಭರದಿಂದ ಸಾಗಿವೆ. ಜಿಲ್ಲೆಯ 1128 ಗ್ರಾಮಗಳಲ್ಲಿ ಹರ್ ಘರ್ ಜಲ್‌ನಲ್ಲಿ 429 ಗ್ರಾಮಗಳನ್ನು ಪೂರ್ಣಗೊಳಿಸಿ ಡಿಕ್ಲೇರ್ ಮಾಡಲಾಗಿದೆ. 362 ಗ್ರಾಮಗಳು ವರದಿ ಸಲ್ಲಿಸಿದ್ದು, 288 ಗ್ರಾಮಗಳನ್ನು ಡಿಕ್ಲೇರ್ ಮಾಡಬೇಕಿದೆ. ಎಚ್.ಡಿ.ಕೋಟೆ, ಹುಣಸೂರು, ಕೆ.ಆರ್.ನಗರ, ಮೈಸೂರು, ನಂಜನಗೂಡು, ತಿ.ನರಸೀಪುರ, ಪಿರಿಯಾಪಟ್ಟಣ ತಾಲ್ಲೂಕುಗಳಿಂದ 4.71 ಲಕ್ಷ ಮನೆಗಳಿದ್ದು, ಅದರಲ್ಲಿ 4.42 ಲಕ್ಷ ಮನೆಗಳಿಗೆ ನಳ ಸಂಪರ್ಕವನ್ನು ಕಲ್ಪಿಸಲಾಗಿದೆ. ಪ್ರಸ್ತುತ ಯೋಜನೆಗೆ ೧೨೯೩ ಕೋಟಿ ರೂ.ನಲ್ಲಿ ೭೫೩.೯೬ ಕೋಟಿ ರೂ.ವೆಚ್ಚ ಮಾಡಲಾಗಿದೆ ಎಂದು ಹೇಳಲಾಗಿದೆ.
ಭರದಿಂದ ಸಾಗಿದ ಎಂವಿಎಸ್ ಯೋಜನೆ..
ಕಬಿನಿ, ಕೆಆರ್‌ಎಸ್ ಜಲಾಶಯ ಇದ್ದರೂ ಪ್ರತಿಯೊಂದು ಗ್ರಾಮಗಳಿಗೂ ನೀರು ಕೊಡಲು ಸಾಧ್ಯವಾಗದೆ ಇದ್ದುದ್ದನ್ನು ಮನಗಂಡು ಜಲಜೀವನ್ ಮಿಷನ್ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ 13 ಯೋಜನೆಗಳಿಗೆ ಮಂಜೂರಾತಿ ದೊರೆತಿದ್ದು, 12 ಕಾಮಗಾರಿಗಳು ಭರದಿಂದ ನಡೆಯುತ್ತಿವೆ. 13 ಬಹುಗ್ರಾಮ ಕುಡಿಯುವ ನೀರಿನಯೋಜನೆಯಡಿ 618 ಗ್ರಾಮಗಳಿಗೆ ನೀರು ಒದಗಿಸಲಿದ್ದು, ಈಗಾಗಲೇ ರೂಪಿಸಿರುವ ಕಾಲಮಿತಿಯೊಳಗೆ ಪೂರ್ಣವಾಗಲಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರ ಎ.ಎಸ್.ರಂಜಿತ್ ಕುಮಾರ್ ಹೇಳಿದರು.
ಜಲ ಜೀವನ್ ಮಿಷನ್ ಮತ್ತು ನೀರಿನ ಸಮಿತಿಗಳು:
ಈ ಯೋಜನೆಯಡಿ, ಜಲ ಜೀವನ್ ಮಿಷನ್ ಮತ್ತು ನೀರಿನ ಸಮಿತಿಗಳನ್ನು ರಚಿಸಲಾಗಿದೆ, ಇದು ಕೆಲಸವನ್ನು ಮೇಲ್ವಿಚಾರಣೆ ವಾಡುತ್ತದೆ. ಗ್ರಾಮದಲ್ಲಿ ವಾಸಿಸುವ ಜನರು ಗ್ರಾಮದ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದ ಯೋಜನೆ ಮತ್ತು ನಿರ್ವಹಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದಾಗ ಮಾತ್ರ ಗ್ರಾಮ ಸ್ವರಾಜ್ಯದ ನಿಜವಾದ ಪ್ರಯೋಜನ ಲಭ್ಯವಾಗುತ್ತದೆ. ಈ ಗುರಿಯೊಂದಿಗೆ, ಸರ್ಕಾರವು ಗ್ರಾಮ ಪಂಚಾಯಿತಿಗಳಿಗೆ ವಿಶೇಷವಾಗಿ ನೀರು ಮತ್ತು ನೈರ್ಮಲ್ಯಕ್ಕಾಗಿ ವಾರ್ಷಿಕ ನಿರ್ವಹಣೆಯ ಮೊತ್ತವನ್ನು ನೀಡಿದೆ. ಇಂದು ಒಂದೆಡೆ ಗ್ರಾ.ಪಂ.ಗಳಿಗೆ ಹೆಚ್ಚು ಹೆಚ್ಚು ಅಧಿಕಾರ ನೀಡಲಾಗುತ್ತಿದ್ದರೆ, ಇನ್ನೊಂದೆಡೆ ಪಾರದರ್ಶಕತೆಗೂ ಕಾಳಜಿ ವಹಿಸಲಾಗುತ್ತಿದೆ.
Key words: 100% households, Mysore district, soon,