ಮೈಸೂರು,ಮೇ,19,2022(www.justkannada.in): ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಮೈಸೂರು ಜಿಲ್ಲೆಗೆ ಉತ್ತಮ ಫಲಿತಾಂಶ ಬಂದಿದ್ದು ಈ ಬಾರಿಯೂ ಹೆಣ್ಣುಮಕ್ಕಳೆ ಮೇಲುಗೈ ಸಾಧಿಸಿದ್ದಾರೆ ಎಂದು ಮೈಸೂರು ಡಿಡಿಪಿಐ ರಾಮಚಂದ್ರ ರಾಜೇ ಅರಸ್ ಹೇಳಿದರು.
ಈ ಕುರಿತು ಸುದ‍್ಧಿಗೋಷ್ಠಿ ನಡೆಸಿ ಮಾತನಾಡಿದ ಮೈಸೂರು ಡಿಡಿಪಿಐ ರಾಮಚಂದ್ರ ರಾಜೇ ಅರಸ್, ಈ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಮೈಸೂರು ಜಿಲ್ಲೆಗೆ ಉತ್ತಮ ಫಲಿತಾಂಶ ಬಂದಿದೆ. ಮೈಸೂರು ಜಿಲ್ಲೆಗೆ ಎ ಶ್ರೇಣಿ ಲಭಿಸಿದೆ. ಜಿಲ್ಲೆಯಲ್ಲಿ 36,128 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 33,012 ಮಕ್ಕಳು ಉತ್ತೀರ್ಣರಾಗಿದ್ದು ಶೇ 91.38ರಷ್ಟು ಫಲಿತಾಂಶ ಬಂದಿದೆ. ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಉತ್ತಮ ಫಲಿತಾಂಶ ಬಂದಿದೆ. ಈ ಉತ್ತಮ ಫಲಿತಾಂಶ ಬಂದಿರುವ ಶ್ರೇಯಸು ಶಿಕ್ಷಕರು , ಮಕ್ಕಳು, ಪೋಷಕರಿಗೆ ಸಲ್ಲಬೇಕು ಎಂದರು.
ಒಟ್ಟು 18,100 ವಿದ್ಯಾರ್ಥಿಗಳು ಗಂಡು ಮಕ್ಕಳು ಪರೀಕ್ಷೆ ಬರೆದಿದ್ದರು. ಈ ಪೈಕಿ 16014 ಮಕ್ಕಳು ಉತ್ತೀರ್ಣರಾಗಿದ್ದಾರೆ. 18, 028 ಹೆಣ್ಣುಮಕ್ಕಳಲ್ಲಿ 16, 898 ಮಂದಿ ಉತ್ತೀರ್ಣರಾಗಿದ್ದಾರೆ. ಜಿಲ್ಲೆಯಲ್ಲಿ 6 ಮಕ್ಕಳು ಶೇ 100 ಕ್ಕೆ 100 ಅಂಕ ಪಡೆದಿದ್ದಾರೆ. ಮೈಸೂರಿನ ಆದರ್ಶ ಶಾಲೆಯ ವಿದ್ಯಾರ್ಥಿನಿ ಏಕ್ತಾ ಎಂ ಜಿ, ಮರಿಮಲ್ಲಪ್ಪ ಶಾಲೆಯ ಚಾರುಕೀರ್ತಿ, ಸದ್ವಿದ್ಯ ಶಾಲೆಯ ಅದಿತಿ, ಯಶಸ್ವಿನಿ ಅರಸ್, ನಂಜನಗೂಡಿನ ಶಾಲೆಯ ದೇವಿಕಾ, ಬನ್ನೂರಿನ ದಿಶಾ ಶೇ 100ಕ್ಕೆ ನೂರು ಅಂಕ ಪಡೆದಿದ್ದಾರೆ.
ಈ ಬಾರಿ ಗ್ರಾಮೀಣ ಪ್ರದೇಶ ಮಕ್ಕಳು ಜಿಲ್ಲೆಯಲ್ಲಿ ಮೇಲುಗೈ ಸಾಧಿಸಿದ್ದಾರೆ. ಶೇ 92.87 ಗ್ರಾಮೀಣ ಭಾಗದ ಮಕ್ಕಳು ಹಾಗೂ ಶೇ 89.54 ನಗರದ ಪ್ರದೇಶ ಮಕ್ಕಳು ಉತ್ತೀರ್ಣರಾಗಿದ್ದಾರೆ. ಒಟ್ಟು 117 ಶಾಲೆಗಳಲ್ಲಿ ಶೇ 100 ರಷ್ಟು ಫಲಿತಾಂಶ ಬಂದಿದೆ. ಮೈಸೂರು ಜಿಲ್ಲೆಯಲ್ಲಿ ಪಿರಿಯಾಪಟ್ಟಣ ತಾಲೂಕು ಫಲಿತಾಂಶದಲ್ಲಿ ಪ್ರಥಮ ಸ್ಥಾನದಲ್ಲಿದೆ. ಕೆ.ಆರ್ ನಗರ ಕೊನೆ ಸ್ಥಾನದಲ್ಲಿದೆ. ಈ ಬಾರಿ ಸರ್ಕಾರಿ ಶಾಲೆ ಹಾಗೂ ಗ್ರಾಮೀಣ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಇಲಾಖೆಯಿಂದ ಸುಮಾರು 50ಕ್ಕೂ ಹೆಚ್ವು ಕಾರ್ಯಕ್ರಮ ಮತ್ತು ಸರಣಿ ಸಭೆ ಮಾಡಿದ್ದೆವು. ಜೊತೆಗೆ ನಾಲ್ಕು ಹಂತದ ಪ್ರಶ್ನೆ ಪತ್ರಿಕೆ ಮಾಡಲಾಗಿತ್ತು. ತಾಲೂಕು ಮಟ್ಟದಲ್ಲೂ ಒಟ್ಟು 7 ರಿಂದ 8 ಮಾಡೆಲ್ ಪೇಪರ್ ಬರೆದು ವಿದ್ಯಾರ್ಥಿಗಳು ಸಿದ್ದತೆ ಮಾಡಿಕೊಂಡಿದ್ದರು
ರಾತ್ರಿ ಶಾಲೆ ಕೂಡ ಮಾಡಲಾಗಿತ್ತು. ಪೋಷಕರ ಸಹಕಾರ ಚೆನ್ನಾಗಿ ಇತ್ತು. ಜೊತೆಗೆ ಶಿಕ್ಷಕರ ಇಲಾಖೆ ಸೂಚನೆ ಸ್ಪಷವಾಗಿ ಪಾಲಿಸಿದ್ದಾರೆ. ಅವರ ಶ್ರಮದಿಂದಲೂ ಉತ್ತಮ ಫಲಿತಾಂಶ ಬರಲು ಸಾಧ್ಯವಾಗಿದೆ. ಇದರ ಎಲ್ಲಾ ಕ್ರೆಡಿಟ್ ಶಿಕ್ಷಕರು, ವಿದ್ಯಾರ್ಥಿಗಳಿಗೆ ಸಲ್ಲಬೇಕು ಎಂದು ಡಿಡಿಪಿಐ ರಾಮಚಂದ್ರ ರಾಜೆ ಅರಸ್ ತಿಳಿಸಿದ್ದಾರೆ.
Key words: Mysore district –best- result –SSLC- exam