ಜಿಲ್ಲಾ ನ್ಯಾಯಾಧೀಶರಿಗಿಲ್ಲ ಗನ್ ಮ್ಯಾನ್ ಭದ್ರತೆ:  ಶಿಸ್ತು ಕ್ರಮ ಕೈಗೊಳ್ಳಲು ಹೈಕೋರ್ಟ್ ಗೆ ಆಗ್ರಹ

ಮೈಸೂರು ಜುಲೈ 24,2024 (www.justkannada.in): ಕಳೆದ ಒಂದು ವರ್ಷದಿಂದ ಮೈಸೂರಿನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರೊಬ್ಬರಿಗೆ ಗನ್ ಮ್ಯಾನ್ ಭದ್ರತೆ ಒದಗಿಸಲು ಪೊಲೀಸ್ ಆಯುಕ್ತರು ವಿಫಲರಾಗಿರುವ ಸಂಗತಿ ಬಯಲಾಗಿದೆ.

ಮೈಸೂರಿನ ಜಿಲ್ಲಾ ನ್ಯಾಯಾಲಯಗಳ ಆವರಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ 6ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಿಗೆ ನೀಡಲಾಗಿದ್ದ ಗನ್ ಮ್ಯಾನ್ ಭದ್ರತೆಯನ್ನು ಹಿಂಪಡೆದು ವರುಷ ಉರುಳಿದೆ.

ಹಾಗಾಗಿ ನ್ಯಾಯಾಧೀಶರಾದ ಪಿ.ಜೆ.ಸೋಮಶೇಖರ ಅವರು 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸಲು ಅಧಿಕಾರ ಸ್ವೀಕರಿಸಿ ವರುಷ ಉರುಳಿದರೂ ನ್ಯಾಯಾಧೀಶರಿಗೆ ಗನ್ ಮ್ಯಾನ್ ಭದ್ರತೆ ಒದಗಿಸುವಲ್ಲಿ ಪೊಲೀಸ್ ಆಯುಕ್ತರು ವಿಫಲರಾಗಿದ್ದಾರೆ. ಹಾಗಾಗಿ ನ್ಯಾಯಾಧೀಶರಿಗೇ ಭದ್ರತೆ ಇಲ್ಲದಂತಾಗಿದೆ.

ಮೈಸೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಂಟು ಜಿಲ್ಲಾ ನ್ಯಾಯಾಧೀಶರು, ನಾಲ್ಕು ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರು ಹಾಗೂ ಔದ್ಯಮಿಕ ನ್ಯಾಯಾಧೀಕರಣದ ಪೀಠಾಸೀನಾಧಿಕಾರಿಗಳಿಗೆ ಸಶಸ್ತ್ರ ಮೀಸಲು ಪಡೆಯಿಂದ ಗನ್ ಮ್ಯಾನ್ ಭದ್ರತೆಯನ್ನು ಒದಗಿಸಿರುವಾಗ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಿಗೆ ಗನ್ ಮ್ಯಾನ್ ಭದ್ರತೆಯನ್ನು ನೀಡಲು ನಿರಾಕರಿಸಿರುವ ಪೊಲೀಸ್ ಆಯುಕ್ತರ ನಿರ್ಧಾರ ಅನುಮಾನಾಸ್ಪದ ಹಾಗೂ ಆತಂಕಕಾರಿಯಾಗಿದೆ.

6ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಕೊಲೆ, ಸುಲಿಗೆ, ದರೋಡೆ, ಢಕಾಯತಿಯಂತಹ ಗಂಭೀರ ಅಪರಾಧ ಮತ್ತು ಅಪರಾಧಿಗಳ ವಿಚಾರಣೆ ನಡೆಯುತ್ತಿರುತ್ತದೆ. ಜೀವಾವಧಿ ಶಿಕ್ಷೆಯಿಂದ ಹಿಡಿದು ಗಲ್ಲು ಶಿಕ್ಷೆ ವಿಧಿಸಬಹುದಾದಂತಹ ಗಂಭೀರ ಅಪರಾಧ ಎಸಗಿರುವ ಆರೋಪಿಗಳು ಈ ನ್ಯಾಯಾಲಯಕ್ಕೆ ಬಂದುಹೋಗುತ್ತಿರುತ್ತಾರೆ. ಹೀಗಿರುವಾಗ ಇಂತಹ ಗಂಭೀರ ಪ್ರಕರಣಗಳಲ್ಲಿ ನ್ಯಾಯಾಧೀಶರಿಗೆ ಭದ್ರತೆ ಒದಗಿಸುವುದು ಪೊಲೀಸ್ ಆಯುಕ್ತರ ಕರ್ತವ್ಯ ಹಾಗೂ ಜವಾಬ್ದಾರಿ.

ಈ ಕೂಡಲೇ ಮೈಸೂರಿನ ಪೊಲೀಸ್ ಆಯುಕ್ತರು ಮೈಸೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಿಗೆ ಗನ್ ಮ್ಯಾನ್ ಭದ್ರತೆ ಒದಗಿಸಿ ನ್ಯಾಯಾಲಯವು ನಿರ್ಭೀತಿಯಿಂದ ಕಾರ್ಯ ನಿರ್ವಹಿಸಲು ಸಹಕರಿಸಿ ಜವಾಬ್ದಾರಿ‌ ಮೆರೆಯಬೇಕಾಗಿದೆ. ಕಾನೂನು, ನ್ಯಾಯಾಲಯ, ನ್ಯಾಯವಾದಿಗಳು ಹಾಗೂ ನ್ಯಾಯಾಧೀಶರೆಂದರೆ ಪೊಲೀಸ್ ಅಧಿಕಾರಿಗಳಿಗೆ ಮೊದಲಿನಿಂದಲೂ ಅಸಡ್ಡೆ!

ಕೇವಲ ಜನಪ್ರತಿನಿಧಿಗಳಿಗೆ ಭದ್ರತೆ ಒದಗಿಸುವುದು ಮಾತ್ರ ಪೊಲೀಸರ ಕೆಲಸವಲ್ಲ. ನ್ಯಾಯದೇವತೆಗೇ ಭದ್ರತೆ ನೀಡಲು ನಿರಾಕರಿಸಿರುವ ನಮ್ಮ ಪೊಲೀಸ್ ಇಲಾಖೆಯು ಜನಸಾಮಾನ್ಯರಿಗೆ ಭದ್ರತೆ ನೀಡಲು ಹೇಗೆ ಸಾಧ್ಯ?

ಮೈಸೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಿಗೆ ನೀಡಲಾಗಿದ್ದ ಗನ್ ಮ್ಯಾನ್ ಭದ್ರತೆಯನ್ನು ಪೊಲೀಸ್ ಆಯುಕ್ತರು ಹಿಂಪಡೆದ ವಿಚಾರವಾಗಿ ಕರ್ನಾಟಕದ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು ಶಿಸ್ತುಕ್ರಮ ಜರುಗಿಸಬೇಕಾಗಿದೆ.

-ಪಿ.ಜೆ.ರಾಘವೇಂದ್ರ

ನ್ಯಾಯವಾದಿ, ಮೈಸೂರು

Key words: mysore, District Judge, gun man,  security, Police Commissioner