ಮೈಸೂರು, ಮೇ 27, 2021 (www.justkannada.in): ಮೈಸೂರು ಜಿಲ್ಲಾಡಳಿತದ ಮುನ್ನೆಚ್ಚರಿಕಾ ಕ್ರಮಗಳಿಂದಾಗಿ ಇಂದು ಮೈಸೂರು ಜಿಲ್ಲೆ ರಾಜ್ಯದಲ್ಲಿ ಅತೀ ಕಡಿಮೆ ಕೋವಿಡ್ ಮರಣ ಪ್ರಮಾಣ (ಪ್ರತಿ 100 ಕೋವಿಡ್ ಸೋಂಕಿತರ ಸಂಖ್ಯೆಯ ಪೈಕಿ) ಹೊಂದಿರುವ ಜಿಲ್ಲೆಯಾಗಿ ಗುರುತಿಸಿಕೊಂಡಿದೆ.
16,000 ಕೋವಿಡ್ ಸಕ್ರಿಯ ಪ್ರಕರಣಗಳು ಹಾಗೂ 41.32 %ರಷ್ಟು ಪಾಸಿಟಿವಿಟಿ ಪ್ರಮಾಣದೊಂದಿಗೆ ಮೈಸೂರು ಜಿಲ್ಲೆ ಅತೀ ಹೆಚ್ಚು ಪಾಸಿಟಿವಿಟಿ ಪ್ರಮಾಣ ಹೊಂದಿರುವ ಜಿಲ್ಲೆಗಳ ಪೈಕಿ ಒಂದಾಗಿದ್ದರೂ ಸಹ ಅತೀ ಕಡಿಮೆ ಮರಣ ಪ್ರಮಾಣವನ್ನು ಹೊಂದಿರುವ ಜಿಲ್ಲೆಯಾಗಿ ಕಂಡು ಬಂದಿದೆ.
ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ನೀಡಿರುವ ಮಾಹಿತಿ ಪ್ರಕಾರ, ಅತಿ ಕಡಿಮೆ ಕೋವಿಡ್ ಮರಣ ಪ್ರಮಾಣವಿರುವ ಜಿಲ್ಲೆಯಾಗಿರುವುದಕ್ಕೆ ಮೂರು ಪ್ರಮುಖ ಕಾರಣಗಳು ಹಾಗೂ ಕಲಿಕಾ ಅಂಶಗಳಿವೆ. ಅವುಗಳೆಂದರೆ: ರಾಜ್ಯದಲ್ಲಿ ಅತೀ ಹೆಚ್ಚು ಲಸಿಕೆ ನೀಡಿಕೆ ಪ್ರಮಾಣ, ಕೋವಿಡ್ ಮಿತ್ರ ಕಾರ್ಯಕ್ರಮದ ಮೂಲಕ ಆರಂಭಿಕ ಮಧ್ಯಸ್ಥಿಕೆ ಮತ್ತು ಏಪ್ರಿಲ್ ತಿಂಗಳಿಂದಲೇ ಕೋವಿಡ್ ಸೋಂಕಿನಿಂದಾಗಿ ಮರಣ ಹೊಂದಿದ ಪ್ರತಿ ಪ್ರಕರಣವನ್ನೂ ಅಧ್ಯಯನ ನಡೆಸಿರುವುದು.
ಕೋವಿಡ್ ಎರಡನೇ ಅಲೆ ಆರಂಭವಾದಾಗ, ಲಸಿಕೆ ಅಭಿಯಾನ ಆರಂಭಿಸಿದಾಗ ಜನರು ಲಸಿಕೆ ಪಡೆಯಲು ಹಿಂಜರಿಯುತ್ತಿದ್ದ ಸಮಯದಲ್ಲಿಯೇ, ಅಂದರೆ ಏಪ್ರಿಲ್ 1 ರಿಂದಲೇ ಲಸಿಕೆಯ ಕುರಿತು ಮೈಸೂರು ಜಿಲ್ಲಾಡಳಿತ ಜಿಲ್ಲೆಯಾದ್ಯಂತ ವಿಸ್ತೃತ ಪ್ರಚಾರವನ್ನು ಕೈಗೊಳ್ಳುವ ಮೂಲಕ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಪ್ರಯತ್ನಗಳನ್ನು ಕೈಗೊಂಡಿತು. ಇದರ ಫಲವಾಗಿ ಜಿಲ್ಲೆಯಲ್ಲಿ 45 ವರ್ಷಗಳಿಗೂ ಮೇಲ್ಪಟ್ಟ ವಯೋಮಾನದವರ ಪೈಕಿ ಗ್ರಾಮೀಣ ಪ್ರದೇಶಗಳಲ್ಲಿ ಶೇ.75 ಹಾಗೂ ನಗರ ಪ್ರದೇಶದಲ್ಲಿ ಶೇ.65 ಲಸಿಕೆ ನೀಡಿಕೆಯನ್ನು ಸಾಧಿಸಲಾಗಿದೆ. ರಾಜ್ಯ ಸರ್ಕಾರದೊಂದಿಗೆ ಸತತವಾಗಿ ಸಂಪರ್ಕದಲ್ಲಿರುವುದು ಹಾಗೂ ಜಿಲ್ಲೆಯ ಅಗತ್ಯತೆಯ ಅಂಶಗಳ ಮೇಲೆ ನಿರಂತರವಾಗಿ ಗಮನವಿಟ್ಟು, ಅನುಸರಣೆ ಮಾಡುವ ಮೂಲಕ ಈ ಲಸಿಕೆ ನೀಡುವ ಅಭಿಯಾನದ ಯಶಸ್ಸನ್ನು ಸಾಧಿಸಲಾಯಿತು.
ಆರಂಭದಲ್ಲಿ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಕೋವಿಡ್ ಮಿತ್ರ ಕಾರ್ಯಕ್ರವನ್ನು ಆರಂಭಿಸಲಾಯಿತು. ಕ್ರಮೇಣ ಈ ಕಾರ್ಯಕ್ರಮವನ್ನು ನಗರ ಪ್ರದೇಶಗಳಲ್ಲಿರುವ ಸಾರ್ವಜನಿಕ ಆರೋಗ್ಯ ಕೇಂದ್ರಗಳಿಗೆ ವಿಸ್ತರಿಸಿದ ಜಿಲ್ಲಾಡಳಿತ ಈ ಕಾರ್ಯಕ್ರಮದ ಮೂಲಕ ಸೋಂಕಿರುವ ಬಗ್ಗೆ ಆರಂಭದಲ್ಲಿಯೇ ಹೆಚ್ಚು ತಪಾಸಣೆ ನಡೆಸಿ ಸೋಂಕಿತರನ್ನು ಪ್ರತ್ಯೇಕಗೊಳಿಸುವಲ್ಲಿ ಸಫಲವಾಯಿತು. ಈವರೆಗೆ ಒಟ್ಟಾರೆ 25000 ಜನರನ್ನು ಕೋವಿಡ್ ಮಿತ್ರ ಕೇಂದ್ರಗಳಲ್ಲಿ ಪ್ರತ್ಯೇಕಗೊಳಿಸಲಾಗಿದೆ. ಇದರಲ್ಲಿ ಗರಿಷ್ಠ ಪ್ರಮಾಣ ಗ್ರಾಮೀಣ ಪಿಹೆಚ್ಸಿಗಳಲ್ಲಾಗಿವೆ. ಸೋಂಕಿನ ಸೂಚನೆಗಳು ಕಂಡು ಬಂದರೆ, ತಪಾಸಣೆ ಒಳಗೊಂಡಂತೆ ಮೊದಲ ಐದು ದಿನಗಳೊಳಗೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಜಿಲ್ಲೆಯಾದ್ಯಂತ ವ್ಯಾಪಕ ಪ್ರಚಾರ ನೀಡಲಾಯಿತು. ಇದೂ ಸಹ ಕೋವಿಡ್ ಸೋಂಕನ್ನು ನಿಯಂತ್ರಿಸುವಲ್ಲಿ ಜಿಲ್ಲಾಡಳಿತದ ಒಂದು ಯಶಸ್ಸಿ ಭಾಗವಾಗಿದೆ.
ಮೂರನೇಯದಾಗಿ ಏಪ್ರಿಲ್ ತಿಂಗಳಿನಿಂದಲೇ ಪ್ರತಿ ದಿನ ತಪ್ಪದೇ ಜಿಲ್ಲೆಯಲ್ಲಿ ಕೋವಿಡ್ನಿಂದಗಿ ಸಂಭವಿಸಿರುವ ಪ್ರತಿಯೊಂದೂ ಮರಣ ಪ್ರಕರಣಗಳ ಮೇಲೆ ನಿಗಾವಹಿಸಿ ಕೂಲಂಕುಷವಾಗಿ ಅಧ್ಯಯನ ನಡೆಸಲಾಯಿತು. ಈ ಅಂಶವೂ ಸಹ ಜಿಲ್ಲಾಡಳಿತದ ಕಾರ್ಯತಂತ್ರಕ್ಕೆ ದೊಡ್ಡ ಕೊಡುಗೆ ನೀಡಿದೆ.
ಕೋವಿಡ್ ಸಹಾಯವಾಣಿ 2424111 (20,000 ಕರೆಗಳನ್ನು ಪಡೆಯಲಾಗಿದೆ), ವಾರ್ ರೂಂ ರಚನೆ, ಬೆಂಗಳೂರಿನಿಂದ ನಗರಕ್ಕೆ ಆಗಮಿಸುವವರಿಗೆ ಆರ್ಟಿಪಿಸಿಆರ್ ಪರೀಕ್ಷೆ ಕಡ್ಡಾಯವಾಗಿ ನಡೆಸುವಂತೆ ಮಾಡಿದ ಶಿಫಾರಸ್ಸು, ಲಸಿಕೆ ಪಡೆಯುವಂತೆ ಅತೀ ಹೆಚ್ಚಿನ ಸಂಖ್ಯೆಯ ಜನರ ಕ್ರೋಢೀಕರಣ, ಪಿಕೆಟಿಬಿ ಆಸ್ಪತ್ರೆ, ಟ್ರಾಮಾ ಕೇರ್, ಇಎಸ್ ಐ, ಕೆ.ಆರ್. ಆಸ್ಪತ್ರೆಯಲ್ಲಿ 600 ಆಮ್ಲಜನಕಸಹಿತ ಹಾಗೂ ಐಸಿಯು ಹಾಸಿಗೆಗಳ ಸೃಷ್ಟಿ, ಖಾಸಗಿ ಆಸ್ಪತ್ರೆಗಳಲ್ಲಿ ಕಟ್ಟೆಚ್ಚರ, ಸಿಎಸ್ಅರ್ ಪ್ರಯತ್ನಗಳ ಮೂಲಕ ರೂ 21.5 . ಕೋಟಿ ಹಣ ಕ್ರೋಢೀಕರಣ, ಟೆಲಿ ಟ್ರಯಾಜಿಂಗ್, ಜಿಲ್ಲೆಯಾದ್ಯಂತ ಮನೆ ಮನೆ ಸಮೀಕ್ಷೆ ಕ್ರಮ, ಕೋವಿಡ್ ಮುಕ್ತ ಗ್ರಾಮ ಹಾಗೂ ಪುರಸ್ಕಾರ ಘೋಷಣೆ ಕ್ರಮ, ತಾಲ್ಲೂಕುಗಳಲ್ಲಿ ಸಮುದಾಯ ಭಾಗವಹಿಸುವಿಕೆಗಾಗಿ ಪಿಹೆಚ್ಸಿ ಪ್ರಶಸ್ತಿಗಳ ಘೋಷಣೆ, ಮಧುಮೆಹಿಗಳ ಗುರುತಿಸುವಿಕೆ, ಅವರ ಮೇಲೆ ನಿಗಾವಹಿಸುವಿಕೆ, ಮೈಕ್ರೋಮ್ಯೂಕೋಸಿಸ್ ಪ್ರಕರಣಗಳನ್ನು ನಿಯಂತ್ರಿಸಲು ಡೀವರ್ಮಿಂಗ್ ದಿನ ಘೋಷಣೆ ಒಳಗೊಂಡಂತೆ ಜಿಲ್ಲಾಡಳಿತದ ಪರಿಣಾಮಕಾರಿ ಕ್ರಮಗಳು ಸೇರಿದಂತೆ ಎಲ್ಲಾ ಸರ್ಕಾರಿ ಇಲಾಖೆಗಳ ಸಂಘಟಿತ ಪ್ರಯತ್ನಗಳು ಜಿಲ್ಲಾಡಳಿತದ ಕೋವಿಡ್ ನಿಯಂತ್ರಣಕ್ಕೆ ತುಂಬಾ ಸಹಕಾರಿಯಾಗಿವೆ.
ಮೈಸೂರು ಜಿಲ್ಲಾಡಳಿತ, ಜುಲೈ 1ರಂದು ನಡೆಯಲಿರುವ ರಾಷ್ಟ್ರೀಯ ವೈದ್ಯರ ದಿನಾಚರಣೆಯ ಒಳಗಾಗಿ ಮೈಸೂರನ್ನು ಕೋವಿಡ್ ಮುಕ್ತ ಜಿಲ್ಲೆ ಮಾಡಲು ಪ್ರತಿಜ್ಞೆ ಮಾಡಿದೆ. ಇದಕ್ಕಾಗಿ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಒಳಗೊಂಡಂತೆ ಎಲ್ಲಾ ನಾಗರಿಕರ ಸಹಕಾರವನ್ನು ಜಿಲ್ಲಾಡಳಿತ ಕೋರಿದೆ.
Key words: Mysore – district – lowest -covid -death- rate.