ಮೈಸೂರು,ಫೆಬ್ರವರಿ,21,2025 (www.justkannada.in): ಜಿಲ್ಲೆಯಲ್ಲಿ ಮಾರ್ಚ್ 01 ರಿಂದ ಮಾರ್ಚ್ 10 ರವರೆಗೆ ನಡೆಯಲಿರುವ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಸುಸೂತ್ರವಾಗಿ ಹಾಗೂ ವ್ಯವಸ್ಥಿತವಾಗಿ ಜರುಗಿಸುವಂತೆ ನೋಡಿಕೊಳ್ಳಲು ಅಪರ ಜಿಲ್ಲಾಧಿಕಾರಿ ಡಾ ಪಿ.ಶಿವರಾಜು ಅವರು ಸೂಚಿಸಿದರು.
ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಸಂಬಂಧ ನಡೆದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮೈಸೂರು ಜಿಲ್ಲೆಯಲ್ಲಿ 50 ಪರೀಕ್ಷಾ ಕೇಂದ್ರಗಳಲ್ಲಿ ದ್ವಿತೀಯ ವಾರ್ಷಿಕ ಪರೀಕ್ಷೆಗಳು ನಡೆಯಲ್ಲಿದ್ದು, ಮೈಸೂರು ನಗರದಲ್ಲಿ 27 ಪರೀಕ್ಷಾ ಕೇಂದ್ರಗಳು ಹಾಗೂ ಗ್ರಾಮಾಂತರ ವ್ಯಾಪ್ತಿಯಲ್ಲಿ 23 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲ್ಲಿವೆ ಎಂದು ಅವರು ತಿಳಿಸಿದರು.
ಪರೀಕ್ಷೆ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ತಲುಪಿಸಲು ಮಾರ್ಗಾಧಿಕಾರಿಗಳು ನೇಮಕ ಮಾಡಲಾಗಿದ್ದು, ಪರೀಕ್ಷಾ ದಿನಗಳಂದು ಪರೀಕ್ಷಾ ಕೇಂದ್ರಗಳಿಗೆ ನಿರಂತರ ವಿದ್ಯುತ್ ಸರಬರಾಜು ಮಾಡಲು ಚೆಸ್ಕಾಂ ರವರಿಗೆ ಕ್ರಮ ವಹಿಸಲು ತಿಳಿಸಲಾಗಿದೆ.
ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದ್ದು, ಪರೀಕ್ಷೆ ಕೇಂದ್ರಗಳ ಸುತ್ತ ಸ್ವಚ್ಚತೆಯನ್ನು ಕಾಪಾಡಲು ಸಂಬಂಧಪಟ್ಟ ಪರೀಕ್ಷಾ ಕೇಂದ್ರದ ಮುಖ್ಯಸ್ಥರಿಗೆ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ನಿರ್ದೇಶನವನ್ನು ನೀಡಿದರು.
ಮೈಸೂರಿನಲ್ಲಿ 27 ಪರೀಕ್ಷಾ ಕೇಂದ್ರಗಳು, ನಂಜನಗೂಡಿನಲ್ಲಿ 5 , ಟಿ ನರಸೀಪುರದಲ್ಲಿ 4 , ಹುಣಸೂರಿನಲ್ಲಿ 4, ಕೆ ಆರ್ ನಗರದಲ್ಲಿ 2, ಸಾಲಿಗ್ರಾಮದಲ್ಲಿ 3 , ಎಚ್ .ಡಿ ಕೋಟೆಯಲ್ಲಿ 2 ಹಾಗೂ ಪಿರಿಯಾಪಟ್ಟಣದಲ್ಲಿ 4 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿವೆ ಎಂದರು.
ಸಭೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
Key words: second PUC, examination, Mysore, ADC, Dr. P. Shivaraju