ಮೈಸೂರು, ಜು.24, 2022 : (www.justkannada.in news) ನಗರದ ಮಾನಸ ಗಂಗೋತ್ರಿ ವಿಜ್ಞಾನ ಭವನದಲ್ಲಿ ಭಾನುವಾರ ಖ್ಯಾತ ಶಿಕ್ಷಣ ತಜ್ಞ ಡಾ. ಗುರುರಾಜ ಕರಜಗಿ ಅವರಿಗೆ 2022ನೇ ಸಾಲಿನ ಡಿವಿಜಿ ಪ್ರಶಸ್ತಿಯನ್ನು ನೀಡಿ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಗೌರವಿಸಿದರು.
ನಂತರ ಮಾತನಾಡಿದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ಡಾ. ಗುರುರಾಜ ಕರಜಗಿ ಖ್ಯಾತ ವಾಗ್ಮಿ ಎಂಬುದರಲ್ಲಿ ಎರಡು ಮಾತಿಲ್ಲ. ಕಾರಣ ಈಗಿನ ಅವರ ಮಾತನ್ನು ಕೇಳದವರು ವಿರಳ, ಇವರ ವಾಕ್‌ಚಾತುರ್ಯ ಅತ್ಯದ್ಭುತವಾಗಿದ್ದು, ನಮ್ಮ ಕನ್ನಡ ನಾಡಿನಲ್ಲೇ ಮಾತ್ರವಲ್ಲದೇ ದೇಶ ವಿದೇಶಗಳಲ್ಲಿ ಇವರ ಹೆಸರು ಕೇಳಿದ ತಕ್ಷಣ ಆಪ್ತತೆಯ ಭಾವ ಮೂಡುತ್ತದೆ. ಡಿವಿಜಿ ಬಳಗ ಪ್ರತಿಷ್ಠಾನವು 2006ರಲ್ಲಿ ಪ್ರಾರಂಭವಾಗಿ ಡಿವಿಜಿಯವರ ಸಾಹಿತ್ಯದ ಚಿಂತನೆ ಮತ್ತು ಪ್ರಚಾರದಲ್ಲಿ ತೊಡಗಿಕೊಂಡಿದೆ. ಕನ್ನಡ ನಾಡುನುಡಿಗಾಗಿ ಅನುಪಮ ಸೇವೆ ಸಲ್ಲಿಸಿದಂತಹ ವ್ಯಕ್ತಿಗಳನ್ನು ಗುರುತಿಸಿ, ಗೌರವಿಸುವ ದೃಷ್ಟಿಯಿಂದ ‘ಡಿವಿಜಿ ಪ್ರಶಸ್ತಿ’ ಎಂಬ ಪರಿಕಲ್ಪನೆಯೊಂದಿಗೆ, ಡಿವಿಜಿ, ಬಳಗವು, ಈ ಕಂಕರ್ಯವನ್ನು ಕೈಗೊಂಡಿರುವುದು ಉತ್ತಮವಾದ ಬೆಳವಣಿಗೆ ಹಾಗೂ ಪ್ರಶಂಸನೆ ಅರ್ಹವಾದುದಾಗಿದೆ ಎಂದು ಹೇಳಿದರು.
ಡಿವಿಜಿ ಬಳಗವು ಚೊಚ್ಚಲ ಪ್ರಶಸ್ತಿಯನ್ನು ಡಿವಿಜಿಯವರ ನಿಕಟವರ್ತಿಯಾಗಿದ್ದ ವಿದ್ವಾನ್ ನಡಹಳ್ಳಿ ರಂಗನಾಥಶರ್ಮ ಅವರಿಗೆ ದ್ವಿತೀಯ ವರ್ಷದ ಪ್ರಶಸ್ತಿಯನ್ನು ಡಾ. ಎಸ್.ಆರ್ ರಾಮಸ್ವಾಮಿಯವರಿಗೆ, ತೃತೀಯ ಪ್ರಶಸ್ತಿಯನ್ನು ಬೋಳುಬಸವನಬೊಂತೆ ಖ್ಯಾತಿಯ ಶ್ರೀ ಕುಮಾರ ನಿಜಗುಣ ಸ್ವಾಮೀಜಿಯವರಿಗೆ ಹೀಗೆ ಒಟ್ಟು ಆರು ಪ್ರಶಸ್ತಿಯನ್ನು ನೀಡಿದೆ. ಈ ಬಾರಿ 2022ರ ಪ್ರಶಸ್ತಿಯನ್ನು ಖ್ಯಾತ ವಾಗ್ಮಿ ಹಾಗೂ ಶಿಕ್ಷಣ ತಜ್ಞ ಡಾ. ಗುರುರಾಜ ಕರಜಗಿ ಅವರಿಗೆ ನೀಡುತ್ತಿುವುದು ತುಂಬಾ ಪ್ರಸ್ತುತ ಹಾಗೂ ಸಂತೋಷಕರವಾದ ಸಂಗತಿ ಎಂದರು.
ಡಾ.ಗುರುರಾಜ ಕರಜಗಿ ಅವರು ಪ್ರಾಧ್ಯಾಪಕರಾಗಿ, ಪ್ರಾಚಾರ್ಯರಾಗಿ, ಶಿಕ್ಷಣ ತಜ್ಞರಾಗಿ, ಸೃಜನಶೀಲ ಅಧ್ಯಾಪನ ಕೇಂದ್ರದ ಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಇವರು ಬಹುಮುಖ ಪ್ರತಿಭೆಯುಳ್ಳವರು, ಕನ್ನಡ ಹಾಗೂ ಆಂಗ್ಲಭಾಷೆಯಲ್ಲಿ ಸರಾಗವಾಗಿ ಮಾತನಾಡುವ ಕಲೆಯನ್ನು ರೂಢಿಸಿಕೊಂಡಿದ್ದು, ದೇಶವಿದೇಶಗಳಲ್ಲಿ ಅಪಾರ ಅಭಿಮಾನಿಗಳನ್ನು ಪಡೆದಿದ್ದಾರೆ ಎಂದರು.
ವಿದ್ವಾನ್ ಜಿ.ಎಸ್. ನಟೇಶ್, ಡಿವಿಜಿ ಬಳಗ ಪ್ರತಿಷ್ಠಾನ ಸಂಚಾಲಕ ಕನಕರಾಜು ಸಿ. ಸೇರಿದಂತೆ ಇತರರು ಇದ್ದರು.
key words : mysore-DVG-vc-hemanth.kumar