ಮೈಸೂರು,ಡಿಸೆಂಬರ್,9,2020(www.justkannada.in): ಹಸಮಣೆ ಏರಬೇಕಿದ್ದ ವರ ಮದುವೆಗೂ ಎರಡು ದಿನ ಮೊದಲೇ ವಧುವಿಗೆ ಕೈಕೊಟ್ಟು ಪ್ರೇಯಸಿ ಜತೆ ಪರಾರಿಯಾಗಿದ್ದು, ವಧುವಿನ ಮನೆಯವರು ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದಿದೆ.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಆ ಮನೆಯಲ್ಲಿ ಇಂದು ಮದುವೆ ಸಡಗರ ಸಂಭ್ರಮ ಮೇಳೈಸುತ್ತಿತ್ತು. ಆದರೆ ವರನೇ ವಧುವಿಗೆ ಕೈಕೊಟ್ಟು ಪ್ರಿಯತಮೆ ಜತೆ ಎಸ್ಕೇಪ್ ಆಗಿದ್ದಾನೆ. ಮೈಸೂರಿನ ಕೆ.ಆರ್. ಮೊಹಲ್ಲಾದಲ್ಲಿ ಈ ಘಟನೆ ನಡೆದಿದೆ. ಮೈಸೂರಿನ ಸುಣ್ಣದಕೇರಿಯ ಉಮೇಶ್ ಪರಾರಿಯಾದ ವರ.
ಉಮೇಶ್ ಜತೆ ಕೆ.ಆರ್. ಮೊಹಲ್ಲಾದ ಯುವತಿಯ ಮದುವೆಯನ್ನು ಎರಡೂ ಕುಟುಂಬದ ಹಿರಿಯರು ನಿಶ್ಚಯಿಸಿದ್ದರು. ಬುಧವಾರ ಮದುವೆ ನೆರವೇರಬೇಕಿತ್ತು. ಆದರೆ, ಮತ್ತೊಬ್ಬಳನ್ನು ಪ್ರೀತಿಸುತ್ತಿದ್ದ ವರ ಉಮೇಶ್ ಸೋಮವಾರವೇ ಆಕೆಯೊಂದಿಗೆ ಎಸ್ಕೇಪ್ ಆಗಿದ್ದಾನೆ.
ಇದರಿಂದ ಕಂಗಾಲಾದ ಕುಟುಂಬಸ್ಥರು ಮದುವೆಯನ್ನು ರದ್ದು ಮಾಡಿದ್ದಾರೆ. ವಧುವಿನ ಪೋಷಕರು ಉಮೇಶ್ ವಿರುದ್ಧ ಕೆ.ಆರ್.ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Key words: mysore-escape-lover- break-marriage- police