ಮೈಸೂರು,ಸೆಪ್ಟಂಬರ್,27,2023(www.justkannada.in): ಸುತ್ತೋಲೆಗಳ ಗೊಂದಲ, ವಿದ್ಯಾರ್ಥಿಗಳಿಗೆ ಗೊಂದಲ, ಶಿಕ್ಷಕರಿಗೆ ಪೀಕಲಾಟ, ಮೈಸೂರು ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳ ಆದೇಶಗಳು ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಬಹಳ ಗೊಂದಲವನ್ನುಂಟು ಮಾಡಿದೆ.
ಜಿಲ್ಲಾ ಉಪನಿರ್ದೇಶಕರು ದಿನಾಂಕ:20/09/2023ರಂದು ಆದೇಶ ಹೊರಡಿಸಿ ಜಿಲ್ಲೆಯಾದ್ಯಂತ ದಿನಾಂಕ 29/09/2023ರಿಂದ 07/10/2023ರ ತನಕ ಎಲ್ಲಾ ಶಾಲೆಗಳಲ್ಲಿ ಅರ್ಧವಾರ್ಷಿಕ ಪರೀಕ್ಷೆಗಳನ್ನು ನಡೆಸುವಂತೆ ವೇಳಾಪಟ್ಟಿಯನ್ನೂ ಸಹ ನೀಡಿದ್ದಾರೆ. ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿಯೂ ಸಹ ಉಪನಿರ್ದೇಶಕರ ಆದೇಶದಂತೆ ಈಗಾಗಲೇ ಮಕ್ಕಳೂ , ಶಿಕ್ಷಕರೂ 29/09/2023 ರಿಂದ ಪರೀಕ್ಷೆಗೆ ಸಿದ್ಧರಾಗಿದ್ದಾರೆ. ಆದರೆ ದಿನಾಂಕ:25/09/2023 ರಂದು ಮೈಸೂರು ಗ್ರಾಮಾಂತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆದೇಶ ಹೊರಡಿಸಿ ದಿನಾಂಕ:04/10/2023 ರಂದು ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಅಂದು ಯಾರೂ ಪರೀಕ್ಷೆಯನ್ನು ನಡೆಸದೇ ಕಲೋತ್ಸವದಲ್ಲಿ ಭಾಗವಹಿಸಬೇಕೆಂದು ಆದೇಶ ನೀಡಿದ್ದಾರೆ.
ಮೈಸೂರು ಗ್ರಾಮಾಂತರ ವಲಯದ ಶಿಕ್ಷಕರು ಯಾವ ಆದೇಶ ಪಾಲನೆ ಮಾಡಬೇಕೆಂಬ ಗೊಂದಲದಲ್ಲಿದ್ದರೆ ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧರಾಗುವುದೋ ಅಥವಾ ಪ್ರತಿಭಾ ಕಾರಂಜಿಗೆ ತಯಾರಿ ನಡೆಸುವುದೋ ಎಂಬ ಗೊಂದಲದಲ್ಲಿದ್ದಾರೆ. ಪರೀಕ್ಷೆ ಸಮಯದಲ್ಲಿ ಪ್ರತಿಭಾ ಕಾರಂಜಿ ಇಟ್ಟರೆ ಕಾರ್ಯಕ್ರಮದ ದಿನ ಮಾತ್ರ ಅಲ್ಲ ಹಾಗೂ ಹಿಂದಿನ ದಿನಗಳೂ ಸಹ ಮಕ್ಕಳು ತಯಾರಿ ನಡೆಸುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಎಂಬುದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.
Key words: mysore-exam-time- BEO -order – confusion-students-teacher