ಮೈಸೂರು,ನವೆಂಬರ್,5,2022(www.justkannada.in): ವಾರಸುದಾರರಿಲ್ಲ ಆಸ್ತಿ ಕಬಳಿಸಲು ಸಂಚು ರೂಪಿಸಿ ನಕಲಿ ದಾಖಲೆ ಸೃಷ್ಟಿಸಿ ಅಕ್ರಮವೆಸಗಿದ್ದ ಮಾಜಿ ಎಂ.ಎಲ್.ಎ ಕುಟುಂಬದ ಮೂವರ ವಿರುದ್ದ ಮೈಸೂರಿನ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಿ.ನರಸೀಪುರ ಕ್ಷೇತ್ರದ ಮಾಜಿ ಎಂ.ಎಲ್.ಎ. ದಿ. ಶ್ರೀನಿವಾಸ ಅಯ್ಯಂಗಾರ್ ಅವರ ಸೊಸೆ ಲಲಿತಾ ಜಯಗೋಪಾಲ್, ಮೊಮ್ಮಗ ಸುಧೀರ್ ಜಯಗೋಪಾಲ್, ಮೊಮ್ಮಗಳು ಸುಮನ್ ಜಯಗೋಪಾಲ್ ಅವರ ಮೇಲೆ FIR ದಾಖಲಾಗಿದೆ. 20 ಕೋಟಿ ಮೌಲ್ಯದ 3 ಎಕರೆ 21 ಗುಂಟೆ ಜಮೀನು ಕಬಳಿಸಲು ನಡೆಸಿದ ಸಂಚು ವಿಫಲವಾಗಿದೆ. RTI ಕಾರ್ಯಕರ್ತ ಬಿ.ಎನ್.ನಾಗೇಂದ್ರ ಅವರು ದಾಖಲೆ ಸಮೇತ ಅಕ್ರಮ ಬಯಲು ಮಾಡಿದ್ದಾರೆ.
ಮೈಸೂರು ತಾಲೂಕು ವರುಣ ಹೋಬಳಿ ಲಲಿತಾದ್ರಿಪುರ ಗ್ರಾಮದ ಸರ್ವೆ ನಂ206 ರ 3 ಎಕರೆ 21 ಗುಂಟೆ ಜಮೀನು ಸರ್ಕಾರಿ ಬೀಳು. ನಂತರದ ದಿನಗಳಲ್ಲಿ ಮೇಲುಕೋಟೆ ವಜ್ರಂಶಿಂಗಯ್ಯಂಗಾರ್ ಅವರಿಗೆ ಖಾತೆ ಆಗಿದೆ. ಸದ್ಯ RTC ಮೇಲುಕೋಟೆ ವಜ್ರಂ ಅಯ್ಯಂಗಾರ್ ಹೆಸರಿನಲ್ಲಿದೆ. ಸದರಿ ಆಸ್ತಿಗೆ ವಾರಸುದಾರರು ಇಲ್ಲದಿರುವುದನ್ನ ಪತ್ಯೆ ಹಚ್ಚಿದ ಮಾಜಿ ಎಂ.ಎಲ್.ಎ .ದಿ ಶ್ರೀನಿವಾಸ ಅಯ್ಯಂಗಾರ್ ಸೊಸೆ ಲಲಿತಾ ಜಯಗೋಪಾಲ್, ಮೊಮ್ಮಗ ಸುದೀರ್ ಜಯಗೋಪಾಲ್, ಮೊಮ್ಮಗಳು ಸುಮನ್ ಜಯಗೋಪಾಲ್ ರವರು ನಕಲಿ ವಂಶವೃಕ್ಷ ಸೃಷ್ಟಿಸಿ ಪೌತಿಖಾತೆ ಮಾಡಿಸಿಕೊಳ್ಳಲು ಮೈಸೂರು ತಾಲೂಕು ಕಚೇರಿಗೆ ದಾಖಲೆಗಳನ್ನ ಸಲ್ಲಿಸಿದ್ದಾರೆ. ಇದರ ಮಾಹಿತಿ ಅರಿತ RTI ಕಾರ್ಯಕರ್ತ ಬಿ.ಎನ್.ನಾಗೇಂದ್ರ ಅವರು ಸಂಪೂರ್ಣ ದಾಖಲೆಗಳನ್ನ ಪಡೆದು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು.
ಈ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡುವಂತೆ ಹೆಚ್ಚುವರಿ ತಹಸೀಲ್ದಾರ್ ಎನ್. ವಿಶ್ವನಾಥ್ ರವರಿಗೆ ಸೂಚನೆ ನೀಡಿದ್ದರು. ದಾಖಲೆಗಳನ್ನ ಪರಿಶೀಲಿಸಿದ ವಿಶ್ವನಾಥ್ ಅಕ್ರಮವನ್ನ ಖಚಿತಪಡಿಸಿಕೊಂಡು ಸಂಭಂಧಪಟ್ಟ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ವರುಣಾ ರೆವಿನ್ಯೂ ಇನ್ಸ್ಪೆಕ್ಟರ್ ಶಂಕರ್ ಗೆ ಆದೇಶಿಸಿದ್ದರು.
ಇದೀಗ ಮೈಸೂರಿನ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ದ FIR ದಾಖಲಾಗಿದೆ. 20 ಕೋಟಿ ಮೌಲ್ಯದ ಆಸ್ತಿ ಸೇಫ್ ಆಗಿದೆ. ನಕಲಿ ದಾಖಲೆ ಸೃಷ್ಟಿಸಿ ಅಕ್ರಮಕ್ಕೆ ಸಾಥ್ ನೀಡಿದ ಮೈಸೂರು ತಾಲೂಕು ಕಚೇರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು RTI ಕಾರ್ಯಕರ್ತ ಬಿ.ಎನ್.ನಾಗೇಂದ್ರ ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿ ಲಿಖಿತ ದೂರು ನೀಡಿದ್ದಾರೆ.
Key words: mysore-FIR-registered-against-three members – former MLA’s- family.