ಮೈಸೂರು,ಡಿ,11,2019(www.justkannada.in): ಹುಣಸೂರು ಕ್ಷೇತ್ರದಲ್ಲಿ ಬಿಜೆಪಿ ಸೋಲಿನ ಕುರಿತು ಮಾಜಿ ಸಚಿವ ಜಿ.ಟಿ ದೇವೇಗೌಡರು ಹೊಸ ಬಾಂಬ್ ಸಿಡಿಸಿದ್ದಾರೆ. ಹೆಚ್.ವಿಶ್ವನಾಥ್ ಸೋಲಿಗೆ ಸಿ.ಪಿ ಯೋಗೇಶ್ವರ್ ಕಾರಣ ಎಂದು ಜಿ.ಟಿ ದೇವೇಗೌಡರು ಹೇಳಿಕೆ ನೀಡಿದ್ದಾರೆ.
ಮೈಸೂರಿನ ಜಯಪುರದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಜಿ.ಟಿ ದೇವೇಗೌಡರು, ಯೋಗೀಶ್ವರ್ ಒಕ್ಕಲಿಗ ಸಮುದಾಯದ ನಾಯಕರನ್ನು ಟೀಕಿಸಿದ್ದರಿಂದ ಒಕ್ಕಲಿಗರು ವಿಶ್ವನಾಥ್ ವಿರುದ್ಧ ತಿರುಗಿ ಬಿದ್ದರು. ಅವನ್ಯಾರು ದೇವೇಗೌಡ, ಕುಮಾರಸ್ವಾಮಿ, ಜಿ.ಟಿ.ದೇವೇಗೌಡ ಅಂತೆಲ್ಲ ಮಾತನಾಡಿದ್ರು. ದುಡ್ಡು, ಸೀರೆ, ಕುಕ್ಕರ್ ಹಂಚಿ ಗೆಲ್ಲುತ್ತೇವೆ ಎಂಬ ಹುಂಬತನ ಇತ್ತು. 5 ಕೋಟಿ ಆಮಿಷ ತೋರಿ ಒಕ್ಕಲಿಗರನ್ನು ಓಲೈಸುವ ಪ್ರಯತ್ನ ಮಾಡಿದರು. ಹೀಗಾಗಿ ಬಿಜೆಪಿಗೆ ಸೋಲಾಯಿತು ಎಂದು ಕಿಡಿಕಾರಿದರು.
ಜಿಟಿಡಿ ಪಕ್ಷದ್ರೋಹಿ ಎಂಬ ಹೆಚ್.ವಿಶ್ವನಾಥ್ ಹೇಳಿಕೆ ಗೆ ತಿರುಗೇಟು…
ಇದೇ ವೇಳೆ ಜಿಟಿ ದೇವೇಗೌಡರು ಪಕ್ಷದ್ರೋಹಿ ಎಂಬ ಹೆಚ್.ವಿಶ್ವನಾಥ್ ಹೇಳಿಕೆಗೆ ತಿರುಗೇಟು ನೀಡಿದ ಜಿ.ಟಿ ದೇವೇಗೌಡರು, ಹುಣಸೂರಿನಲ್ಲಿ ವಿಶ್ವನಾಥ್ ಬೆಂಬಲಿಸುತ್ತೇನೆ ಅಂತ ನಾನು ಎಲ್ಲಿಯೂ ಹೇಳಿರಲಿಲ್ಲ. ಇಡೀ ಚುನಾವಣೆಯಲ್ಲಿ ನಾನು ಭಾಗವಹಿಸಲ್ಲ ಅಂತ ಮೊದಲೇ ಹೇಳಿದ್ದೆ. ಅಂದ ಮೇಲೆ ಪಕ್ಷದ್ರೋಹಿ ಹೇಗಾಗುತ್ತೆ ? ಎಂದು ಪ್ರಶ್ನಿಸಿದರು.
ನಾನು ಈಗಲೂ ತಟಸ್ಥನಾಗಿಯೇ ಇದ್ದೇನೆ. ನನ್ನ ಮಗ ಸ್ವತಂತ್ರನಿದ್ದಾನೆ. ಅವನು ಸ್ವತಂತ್ರ ನಿರ್ಧಾರ ಕೈಗೊಂಡಿದ್ದಾನೆ. ಯೋಗೀಶ್ವರ್ ಟೀಕೆ ನಂತರ ನನ್ನ ಮಗ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟು ನಿರ್ಧಾರ ಕೈಗೊಂಡಿದ್ದಾನೆ ಎಂದು ಕಾಂಗ್ರೆಸ್ ಬೆಂಬಲ ವಿಚಾರದಲ್ಲಿ ಮಗನನ್ನು ಸಮರ್ಥಿಸಿಕೊಂಡರು.
ವಿಶ್ವನಾಥ್ ಹುಣಸೂರು ಕ್ಷೇತ್ರ ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾದರು. ಅವರು ಎಲ್ಲಿಂದಲೋ ಬಂದವರು. ದೇವೇಗೌಡರು, ನಾನು ಒಟ್ಟಿಗೆ ಸೇರಿ ಗೆಲ್ಲಿಸಿಕೊಂಡಿದ್ವಿ. ಆದ್ರೆ ಅದನ್ನು ಉಳಿಸಿಕೊಳ್ಳಲು ವಿಶ್ವನಾಥ್ ಕೈಯಲ್ಲಿ ಆಗಲಿಲ್ಲ. ಹಳ್ಳಿಹಳ್ಳಿಯಲ್ಲಿ ಜನ ಆಕ್ರೋಶ ಹೊರಹಾಕಿದ್ರು. ಗ್ರಾಮಗಳ ಒಳಗೆ ಬಿಟ್ಟು ಕೊಳ್ಳಲಿಲ್ಲ ಎಂದ ಜಿಟಿ ದೇವೇಗೌಡರು ತಿಳಿಸಿದರು.
ಹುಣಸೂರಿನಲ್ಲಿ ಕಾಂಗ್ರೆಸ್ ಗೆಲ್ಲುತ್ತೆ ಅಂತ ನಾನು ಮೊದಲೇ ಹೇಳಿದ್ದೆ…
ಹುಣಸೂರಿನಲ್ಲಿ ಕಾಂಗ್ರೆಸ್ ಗೆಲ್ಲುತ್ತೆ ಅಂತ ನಾನು ಮೊದಲೇ ಹೇಳಿದ್ದೆ. ದೈವ ಶಕ್ತಿ ನನ್ನಿಂದ ಎಲ್ಲವನ್ನೂ ನುಡಿಸಿದೆ. ಹಿಂದೆ ಪುರಭವನದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಆಗುತ್ತಾರೆ ಅಂತ ಹೇಳಿದ್ದೆ. ಕುಮಾರ ಪರ್ವದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗುತ್ತಾರೆ ಅಂತ ನುಡಿದಿದ್ದೆ.ಮೈತ್ರಿ ಸರ್ಕಾರ ಪತನವಾದ ದಿನವೇ ಹುಣಸೂರು ಉಪಚುನಾವಣೆಯಲ್ಲಿ ಮಂಜುನಾಥ್ ಗೆಲ್ಲುತ್ತಾರೆ ಅಂತ ಹೇಳಿದ್ದೆ. ದೈವ ಶಕ್ತಿಯಿಂದ ನಾನು ಹೇಳಿದ್ದೆಲ್ಲ ನಡೆದಿದೆ ಎಂದು ಜಿಟಿಡಿ ನುಡಿದರು.
ಅನರ್ಹ ಶಾಸಕರಿಗೆ ಮಂತ್ರಿಗಿರಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಜಿ.ಟಿ ದೇವೇಗೌಡರು, ಯಡಿಯೂರಪ್ಪ ಕೊಟ್ಟ ಮಾತು ಉಳಿಸಿಕೊಳ್ಳುತ್ತಾರೆ. ಎಲ್ಲರೂ ಮಂತ್ರಿ ಆಗುತ್ತಾರೆ. ಕ್ಷೇತ್ರಕ್ಕೂ ಅನುದಾನ ಸಿಗುತ್ತೆ. ಬಿಜೆಪಿ ಜತೆ ಬೆರೆತು ನಡೆದುಕೊಂಡು ಹೋದರೆ ಎಲ್ಲರಿಗೂ ಒಳ್ಳೆಯದಾಗುತ್ತೆ ಎದು ಹೇಳಿದರು.
ಬಿಜೆಪಿ ಸರ್ಕಾರದಿಂದ ಕ್ಷೇತ್ರದ ಅಭಿವೃದ್ಧಿಗೆ ಯಾವುದೇ ಕೊರತೆ ಆಗಿಲ್ಲ.
ನಾನು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಸಮೀತವಾಗಿ ರಾಜಕೀಯ ಮಾಡುತ್ತೇನೆ. ಕ್ಷೇತ್ರದ ಅಭಿವೃದ್ಧಿಯೇ ಮೊದಲ ಆದ್ಯತೆ. ನೀಡುತ್ತಿದ್ದೇನೆ. ಇನ್ನು ಬಿಜೆಪಿ ಸರ್ಕಾರದಿಂದ ಕ್ಷೇತ್ರದ ಅಭಿವೃದ್ಧಿಗೆ ಯಾವುದೇ ಕೊರತೆ ಆಗಿಲ್ಲ. ಸ್ಮಶಾನ, ಶಾಲೆ, ಅಂಗನವಾಡಿ, ಮಾದರಿ ವಿದ್ಯುತ್ ಗ್ರಾಮಗಳ ಅಭಿವೃದ್ಧಿ ಮಾಡುತ್ತಿದ್ದೇನೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಕೊಟ್ಟಿದ್ದ ಯೋಜನೆಗಳು ಮುಕ್ತಾಯ ಆಗಿವೆ. ಕುಮಾರಸ್ವಾಮಿ ಸರ್ಕಾರದ ಯೋಜನೆಗಳು ಪ್ರಗತಿಯಲ್ಲಿವೆ. ಯಡಿಯೂರಪ್ಪ ಬಂದ ಮೇಲೆ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ 16 ಕೋಟಿ ರೂ. ಅನುದಾನ ಸಿಕ್ಕಿದೆ ಎಂದು ಜಿ.ಟಿಡಿ ತಿಳಿಸಿದರು.
Key words: mysore- former minister- GT devegowda-hunsur- bjp- h.vishwanath-cp yogeshwar