ಮೈಸೂರು,ಆಗಸ್ಟ್,14,2024 (www.justkannada.in): ನಾನು ಪಕ್ಷಕ್ಕೆ ಬ್ಯಾನರ್, ಬಂಟಿಂಗ್ ಕಟ್ಟಿಲ್ಲದೆ ಇರಬಹುದು. ಯುವ ಸಮೂಹವನ್ನು ಪಕ್ಷಕ್ಕೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದೇನೆ. ಬಿಎಸ್ ಯಡಿಯೂರಪ್ಪಅಂತವರು ನೇಪಥ್ಯಕ್ಕೆ ಸರಿಯುತ್ತಿರುವ ಕಾರಣ ನನ್ನಂಥ ಯಂಗ್ ಬ್ಲಡ್ ಬರಬೇಕಿದೆ. ಹೀಗಾಗಿ ನನ್ನ ರಾಜ್ಯದಲ್ಲೇ ಉಳಿಸಿದ್ದಾರೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದರು.
ರಾಜ್ಯ ರಾಜಕಾರಣಕ್ಕೆ ತಾವು ಬರುವ ವಿಚಾರ ಕುರಿತು ಮೈಸೂರಿನಲ್ಲಿ ಮಾತನಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ, ಕೇಂದ್ರಕ್ಕೆ ಹೋಗಬೇಡಿ ರಾಜ್ಯದಲ್ಲಿ ಇರಿ ಎಂಬ ಸಂದೇಶ ಸಿಕ್ಕಿದೆ. ಅದಕ್ಕೆ ಇಲ್ಲೆ ಇದ್ದೇನೆ. ನಾನು ಅನ್ಯಾಯದ ವಿರುದ್ದ ಅಷ್ಟೆ ರೆಬೆಲ್. ನಾನು ಪಕ್ಷದ ವಿರುದ್ದ ರೆಬೆಲ್ ಅಲ್ಲ. ಬಿಜೆಪಿಯ ದೊಡ್ಡ ದೊಡ್ಡ ನಾಯಕರಿಗಿಂತ ನಾನು ಪಾರ್ಟಿಗೆ ಸಿನೀಯರ್. ಯಾಕೆಂದರೆ ನನ್ನ ತಂದೆಯೆ ಆರ್ ಎಸ್ ಎಸ್ ನಲ್ಲಿದ್ದರು. ನಾನು ಯಾರನ್ನು ಓಲೈಸಲು ಮೆಚ್ಚಿಸಲು ರಾಜಕಾರಣ ಮಾಡಲ್ಲ. ಯಾರ ಮನೆಯೂ ಬಾಗಿಲು ತಟ್ಟಲ್ಲ. ನನಗೆ ಟಿಕೆಟ್ ಕೊಟ್ಟಿದ್ದು ಬಿಜೆಪಿ ಅಲ್ಲ. ರಾಷ್ಟ್ರೀಯ ಸ್ವಯಂ ಸೇವಾ ಸಂಘ ನನಗೆ ಟಿಕೆಟ್ ಕೊಟ್ಟಿದ್ದು. ಕ್ಷೇತ್ರ, ಜಾತಿ ಆಚೆಗೆ ಜನಪ್ರಿಯತೆ ಇರುವ ಬಸವನಗೌಡ ಯತ್ನಾಳ್ ಅಂಥವರಲ್ಲಿ ನಾನು ಕೂಡ ಒಬ್ಬ. ಇದರ ಬಗ್ಗೆ ಯಾರಿಗಾದರೂ ಅನುಮಾನ ಇದ್ದೆಯಾ? ಎಂದು ಪ್ರಶ್ನಿಸಿದರು. ಮೈಸೂರು ನೆಲೆ, ಪ್ರೀತಿ ಸಿಕ್ಕಿದೆ ನಾನು ಮೈಸೂರಲ್ಲೆ ಇರ್ತಿನಿ ಎಂದರು.
ಸೆ.17ಕ್ಕೆ ವಾಲ್ಮೀಕಿ ಹಗರಣ ವಿಚಾರದಲ್ಲಿ ಪಾದಯಾತ್ರೆ
ಇನ್ನು ಸೆಪ್ಟಂಬರ್ 17ಕ್ಕೆ ವಾಲ್ಮೀಕಿ ಹಗರಣ ವಿಚಾರದಲ್ಲಿ ಪಾದಯಾತ್ರೆ ಮಾಡಲು ನಿರ್ಧಾರವಾಗಿದೆ. ಬೆಳಗಾವಿಯಲ್ಲಿ ನಡೆದದ್ದು ಬಿಜೆಪಿ ಅತೃಪ್ತರ, ಬಂಡಾಯಗಾರರ ಸಭೆಯಲ್ಲ. ಬಿಜೆಪಿಯ ಜನಪ್ರಿಯ ನೇತಾರ ಬಸವಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ನಡೆದ ಸಭೆಯದು. ನಾವು ಮೈಸೂರು ಚಲೋ ಪಾದಯಾತ್ರೆ ಅನುಭವ ಹಂಚಿಕೊಂಡಿದ್ದೇವೆ. ವಾಲ್ಮೀಕಿ ಹಗರಣದ ವಿರುದ್ದ ಸರಿಯಾದ ಹೋರಾಟ ನಡೆದರೆ ಸಿಎಂ ಕುರ್ಚಿ ಅಲ್ಲಾಡುತ್ತೆ. ಬಸವಗೌಡ ಯತ್ನಾಳ್ ರಂಥ ಬಹು ದೊಡ್ಡ ನಾಯಕರು ಕರೆದ ಕಾರಣ ನಾನು ಹೋಗಿದ್ದೆ. ಈ ಪಾದಯಾತ್ರೆ ಯಾರ ಮೇಲಾಟದ ಕಾರ್ಯಕ್ರಮವಲ್ಲ. ಯಾರ ನಾಯಕತ್ವ ಪ್ರದರ್ಶನವೂ ಅಲ್ಲ. ಪಾದಯಾತ್ರೆಗೆ ಹೈಕಮಾಂಡ್ ಅನುಮತಿ ಕೊಡುತ್ತೆ. ಅವರ ಅನುಮತಿಯೊಂದಿಗೆ ಪಾದಯಾತ್ರೆ ಮಾಡುತ್ತೇವೆ. ಬಿಜೆಪಿ ರಾಜ್ಯಾಧ್ಯಕ್ಷರ ಹಾದಿಯಾಗಿ ಎಲ್ಲರನ್ನು ಪಾದಯಾತ್ರೆ ಗೆ ಕರೆಯುತ್ತಾರೆ ಎಂಬ ವಿಶ್ವಾಸವಿದೆ ಎಂದು ಪ್ರತಾಪ್ ಸಿಂಹ ನುಡಿದರು.
ಗೌರಿ ಲಂಕೇಶ್ ಆರೋಪಿಯ ಭೇಟಿಯಾದ ವಿಚಾರ: ದಿನೇಶ್ ಗುಂಡೂರಾವ್ ಗೆ ತಿರುಗೇಟು
ಗೌರಿ ಲಂಕೇಶ್ ಆರೋಪಿಯ ಭೇಟಿಯಾದ ವಿಚಾರ ಕುರಿತು ಸಚಿವ ದಿನೇಶ್ ಗುಂಡೂರಾವ್ ಟ್ವೀಟ್ ಗೆ ತಿರುಗೇಟು ಕೊಟ್ಟ ಮಾಜಿ ಸಂಸದ ಪ್ರತಾಪ್ ಸಿಂಹ, ರಾಜಕಾರಣಿಗಳ ಮಕ್ಕಳಿಗೆ ಅಪ್ಪಂದಿರ ಪ್ರತಿಭೆ ವರ್ಗಾವಣೆ ಆಗಲ್ಲ. ದಿನೇಶ್ ಗುಂಡೂರಾವ್ ವಿಚಾರದಲ್ಲೂ ಅದೇ ಆಗಿದೆ. ಪ್ರಕರಣದ ಆರೋಪಿಯನ್ನು ಮಾತಾಡಿಸುವುದೇ ತಪ್ಪಾ? ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಹಗರಣದ ವಿಚಾರದಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಇಬ್ಬರು ಆರೋಪಿಗಳು. ಕಾಂಗ್ರೆಸ್ ನಾಯಕರು ಯಾಕೆ ಹೋಗಿ ಅವರ ಕಾಲಿಗೆ ಬೀಳುತ್ತಾರೆ. ಅಧಿನಾಯಕ, ಅಧಿನಾಯಕಿ ಅಂತಾ ಕರೆಯುವ ಸೋನಿಯಾ, ರಾಹುಲ್ ಆರೋಪಿ ಸ್ಥಾನದಲ್ಲಿ ಇಲ್ವಾ? ದಿನೇಶ್ ಗುಂಡೂರಾವ್ ತಿಳಿಗೇಡಿ ತನದಲ್ಲಿ ಹೇಳಿಕೆ ಕೊಡುವುದನ್ನು ನಿಲ್ಲಿಸಲಿ ಎಂದು ಕಿಡಿಕಾರಿದರು.
Key words: mysore, Former MP, Prathap simha