ನನ್ನ ಹಾಗೂ ಸಿದ್ದರಾಮಯ್ಯ ಸ್ನೇಹಕ್ಕೆ ಕೆಲವರು ಪಿನ್ ಹಾಕಲು ಯತ್ನಿಸಿದ್ದ್ರು: ಡಾ.ಎಚ್.ಸಿ.ಮಹಾದೇವಪ್ಪ

ಮೈಸೂರು,ನವೆಂಬರ್,13,2024 (www.justkannada.in): ನನ್ನ ಹಾಗೂ ಸಿದ್ದರಾಮಯ್ಯ ಸ್ನೇಹಕ್ಕೆ ಕೆಲವರು ಪಿನ್ ಹಾಕಲು ಯತ್ನಿಸಿದ್ದ್ರು. ಹೀಗಾಗಿ ನಾವು ಎಚ್ಚರ ವಹಿಸಿದ್ದೇವೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹಾದೇವಪ್ಪ ನುಡಿದರು.

ಟಿ.ನರಸೀಪುರ ತಾಲೂಕಿನ ಹೊರಳಹಳ್ಳಿ ರೇಷ್ಮೆ ಫಾರಂ ಬಳಿ ನಡೆದ ಕಾರ್ಯಕ್ರಮದಲ್ಲಿ 470 ಕೋಟಿ ಮೊತ್ತದ 211 ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಚಾಲನೆ ನೀಡಲಾಯಿತು.  ಸರ್ಕಾರದ ವಿವಿಧ ಇಲಾಖೆಗಳ ಫಲಾನುಭವಿಗಳಿಗೆ ಸವಲತ್ತು ವಿತರಣೆ ಮಾಡಲಾಯಿತು.

ಟಿ.ನರಸೀಪುರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಚಿವ ಮಹದೇವಪ್ಪ, ಜನತೆ ನಮ್ಮ ಜೊತೆ ಇರೋದಕ್ಕೆ 40 ವರ್ಷ ರಾಜಕಾರಣದಲ್ಲಿ ಇದ್ದೇವೆ. ಎಲ್ಲ ಸಮುದಾಯವನ್ನ ಗಟ್ಟಿಗೊಳಿಸುವ ಕೆಲಸ ಮಾಡುತ್ತಿದ್ದೇವೆ. ಜನರ ಪ್ರೀತಿ ಆಶೀರ್ವಾದ ಪಡೆದು ಈ ಮಟ್ಟಕ್ಕೆ ನಾನು ಸಿದ್ದರಾಮಯ್ಯ ಬಂದಿದ್ದೇವೆ. ಸಿದ್ದರಾಮಯ್ಯನವರ ಜೊತೆ ಜೊತೆಯಲ್ಲೇ ನಾನು ಸಾಗಿದ್ದೇ ನಮ್ಮ ಭಾಗ್ಯ. ಸಿದ್ದರಾಮಯ್ಯ ಅಂತಹ ಮಹಾನ್ ನಾಯಕ ನಮಗೆ ಸಿಗೋದು ಕಷ್ಟ ಎಂದರು.

ವಿಷಯಧಾರಿತ ವಿಚಾರಕ್ಕಿಂತ ದ್ವೇಷ, ಅಸೂಯೆ, ಸಂವಿಧಾನ ವಿರೋಧದ ನಡೆಗಳು ಹೆಚ್ಚಾಗಿವೆ. ಇವತ್ತಿನ ರಾಜಕಾರಣ ವ್ಯಕ್ತಿಗತವಾಗಿ ನಡೆಯುತ್ತಿದೆ. ಇತ್ತೀಚಿನ ರಾಜಕಾರಣ ನೋಡಿದ್ರೆ, ನಾವೇ ಅನುದಾನ ತಂದವು ಅಂದುಕೊಂಡು ಪೋಸ್ ಕೊಡುತ್ತಿದ್ದರು. ರಾಜ್ಯಾದ್ಯಂತ ಸಿದ್ದರಾಮಯ್ಯರಂತ ನಾಯಕತ್ವ ಬೆಳೆಸಿಕೊಳ್ಳಲು ಸಿದ್ದರಾಮಯ್ಯನವರೇ ಕಾರಣ. ಇದನ್ನ ನೋಡಿ ಕೆಲವರು ಪಿನ್ ಹಾಕಲು ಮುಂದಾದರು. ಹೀಗಾಗಿ ನಾವು ಎಚ್ಚರ ವಹಿಸಿದ್ದೇವೆ. ಸಿದ್ದರಾಮಯ್ಯ ಮುಖಕ್ಕೆ ಮಸಿ ಬಳಿದು ಸಿದ್ದರಾಮಯ್ಯ ನಾಯಕತ್ವ ಕೆಳಗಿಳಿಸಲು ಮಾಡಿರೋದು ರಾಜಕೀಯದ ಕರಾಳ ದಿನ ಎಂದು ಸಚಿವ ಹೆಚ್.ಸಿ ಮಹದೇವಪ್ಪ ಕಿಡಿಕಾರಿದರು.

ಎಲೆಕ್ಷನ್ ಹತ್ತಿರ ಬಂದಾಗ ಮೇಕೆದಾಟು, ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆ ಮಾತನಾಡ್ತಾರೆ. ಚುನಾವಣೆ ನಂತರ ಆ ಬಗ್ಗೆ ಮಾತನಾಡೋದೇ ಇಲ್ಲ. ಸಿದ್ದರಾಮಯ್ಯ ಈ ರಾಜ್ಯ ಕಂಡ ಶ್ರೇಷ್ಠ ಮತ್ಸದ್ದಿ. ಜನರಿಂದ ಆಯ್ಕೆಯಾದ ಸರ್ಕಾರ ಅಸ್ಥಿರಗೊಳಿಸಲು ಮುಂದಾಗೋದು ಸಂವಿಧಾನದ ವಿರೋಧಿ ನಡೆ. ವಿಪಕ್ಷಗಳು ಅಭಿವೃದ್ಧಿ ಎಲ್ಲಿದೆ ಎಂದು ಕೇಳುತ್ತಿವೆ. ಇದೆಲ್ಲವನ್ನ ನೀವೇ ನೋಡಿ. ಸರ್ಕಾರದ ವಿವಿಧ ಇಲಾಖೆಗಳಿಗೆ ಬಜೆಟ್ ನಲ್ಲಿ ಅನುದಾನ ಕೊಟ್ಟಿಲ್ವಾ. ನೀರಾವರಿ ಯೋಜನೆಗೆ ಅನುದಾನ ಕೊಟ್ಟಿಲ್ವಾ. ಕುಡಿಯುವ ನೀರಿಗಾಗಿ ಗ್ರಾಮೀಣಭಿವೃದ್ಧಿ ಇಲಾಖೆ ದುಡ್ಡು ಕೊಟ್ಟಿಲ್ವಾ. 13 ಸಾವಿರ ಮನೆಗಳನ್ನ ನರಸೀಪುರ ಕ್ಷೇತ್ರಕ್ಕೆ ಕೊಟ್ಟಿದ್ದೇವೆ. ಕಾಲೇಜು, ಹಾಸ್ಟೆಲ್, ವಸತಿ ಶಾಲೆಗಳು ಕೊಟ್ಟಿದ್ದೇವೆ ಎಂದು ಹೆಚ್.ಸಿ ಮಹದೇವಪ್ಪ ಹೇಳಿದರು.

ದೇವರು ಇದ್ದಾನೋ ಇಲ್ಲವೋ ಗೊತ್ತಿಲ್ಲ. ಆದರೆ ಸತ್ಯ ಗೊತ್ತಾಗುತ್ತದೆ ಕಾಯಿರಿ ಅಷ್ಟೇ. ಕುಟುಂಬಕ್ಕಾಗಿ ಸಮಯವನ್ನು ಕೂಡ ಕೊಟ್ಟವರಲ್ಲ ಸಿದ್ದರಾಮಯ್ಯ. ಸಿದ್ದರಾಮಯ್ಯರದ್ದು ಸದಾ ಜನಪರ ಚಿಂತನೆ ಅಷ್ಟೆ. ಸಿದ್ದರಾಮಯ್ಯ ನವರ ಚಾರಿತ್ರ್ಯಹರಣ ಮಾಡುತ್ತಿರುವವರ ಬಾಯಿಯನ್ನು ಜನರು ಮುಚ್ಚಿಸಬೇಕು ಎಂದು ಸಚಿವ ಮಹದೇವಪ್ಪ ತಿಳಿಸಿದರು.

Key words: Mysore, friendship, with, Siddaramaiah, Dr. HC Mahadevappa