ಮೈಸೂರು, ಸೆ.09, 2021 : (www.justkannada.in news): ಗ್ಯಾಂಗ್ ರೇಪ್ ಪ್ರಕರಣ ಬೆಳಕಿಗೆ ಬಂದ ನಂತರ ಪೊಲೀಸರು ಸಮರ್ಪಕವಾಗಿ ಕರ್ತವ್ಯ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಮೈಸೂರಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣ ಸಂಬಂಧ, ವಿಧಾನ ಪರಿಷತ್ ಸದಸ್ಯ ಉಗ್ರಪ್ಪ ನೇತೃತ್ವದಲ್ಲಿ ನಡೆದಿದ್ದ ‘ಕಾಂಗ್ರೆಸ್ ಸತ್ಯ ಶೋಧನಾ ಸಮಿತಿ’ ವರದಿ ಬಿಡುಗಡೆ ಮಾಡಿ, ಕಾಂಗ್ರೆಸ್ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಲಾಯಿತು. ಶಾಸಕ ತನ್ವೀರ್ ಸೇಠ್ ಮಾತನಾಡಿ ಹೇಳಿದಿಷ್ಟು…
ಘಟನೆ ಬಳಿಕ ಮೈಸೂರಿಗೆ ಆಗಮಿಸಿದ್ದ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಪೊಲೀಸ್ ಅಕಾಡೆಮಿಯಲ್ಲಿ ಫೈರಿಂಗ್ ತರಬೇತಿಯಲ್ಲಿ ನಿರತರಾಗುವ ಮೂಲಕ ಬೇಜವಾಬ್ದಾರಿಯಿಂದ ನಡೆದುಕೊಂಡಿದ್ದಾರೆ. ಕಾಟಾಚಾರಕ್ಕೆಂಬಂತೆ ಘಟನಾ ಸ್ಥಳಕ್ಕೆ ಗೃಹ ಸಚಿವರು ಹೋಗಿ ಪರಿಶೀಲಿಸಿದ್ದಾರೆ. ಘಟನೆಯ ನೈತಿಕ ಹೊಣೆಹೊತ್ತು ಗೃಹ ಸಚಿವರು ರಾಜೀನಾಮೆ ನೀಡಬೇಕು.
ಘಟನೆಯ ಬಗ್ಗೆ ಕಾಂಗ್ರೆಸ್ ಟೀಮ್ ಮಾಹಿತಿ ಕಲೆ ಹಾಕಿದೆ. ಎಫ್‌ಐಆರ್ ಯಾಕೆ ತಡ ಆಯ್ತು? ಯುವತಿ ಆ ಸಂದರ್ಭದಲ್ಲಿ ಯಾಕೆ ಅಲ್ಲಿ ಹೋಗಿದ್ದಳು? ಪ್ರಕರಣದಲ್ಲಿ ಪೊಲೀಸರ ಕಾರ್ಯ ವೈಖರಿ ಹೇಗಿತ್ತು? ಇದರಲ್ಲಿ ಹಸ್ತಕ್ಷೇಪ ಇತ್ತ? ಇಲ್ಲವಾ? ಸಂತ್ರಸ್ತೆಗೆ ಪೊಲೀಸರು ರಕ್ಷಣೆ ಕೊಡುವ ಜವಬ್ದಾರಿ ಸರಿಯಾಗಿ ನಿರ್ವಹಣೆ ಆಯ್ತಾ? ಈ ಎಲ್ಲಾ ಮಾಹಿತಿಯನ್ನ ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ತನ್ವೀರ್ ಸೇಠ್ ಸ್ಪಷ್ಟಪಡಿಸಿದರು.
ಮಂಜುಳ ಮಾನಸ ಆಕ್ರೋಶ.
ಗ್ಯಾಂಗ್ ರೇಪ್ ಪ್ರಕರಣ ಖಂಡಿಸಿ ದೇಶದಾದ್ಯಂತ ಬಂದ್ ಆಗಬೇಕಿತ್ತು, ಗಲಾಟೆ ಆಗಬೇಕಿತ್ತು. ಆದರೆ ಇದು ಯಾವುದು ಆಗಲಿಲ್ಲ ಎಂದು ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳ ಮಾನಸ ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರಿನ ಬಿಜೆಪಿ ಮಹಿಳಾ ನಾಯಕಿಯರು ಮಾತಾಡುತ್ತಿಲ್ಲ. ಕಾಂಗ್ರೆಸ್‌ನ ಮಹಿಳಾ ನಾಯಕಿಯರು ಇನ್ನು ಹೆಚ್ಚು ಮಾತಾಡಬೇಕಿತ್ತು. ಆದರೆ ಅವರು ಮಾತಾಡುತ್ತಿಲ್ಲ. ಪಕ್ಷ ಬೇಧ ಮರೆತು ಈ ಪ್ರಕರಣ ಖಂಡಿಸಬೇಕಿತ್ತು. ಈಗೆಲ್ಲ ಆದ್ರೆ ಕಾನೂನು ಯಾಕ್ರಿ ಬೇಕು- ಸುಟ್ಟು ಹಾಕಿ ಬಿಡಿ. ಹಿಂದಿನಿಂದಲು ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಲೇ ಇದೆ. ಹೆಣ್ಣನ್ನ ಕಣ್ಣೀರಲ್ಲೇ ಕೈ ತೊಳೆಯುವಂತೆ ಮಾಡಿದ್ದೀರಿ.
ಸಂಸದರು ಕೆಡಿಪಿ ಸಭೆಯಲ್ಲಿ ಮಸೀದಿ ಕೆಡವಬೇಕು ಅಂತ ಮಾತಾಡ್ತಾರೆ. ಆದ್ರೆ ಒಂದು ಹೆಣ್ಣುಮಗಳ ಮೇಲೆ ಗ್ಯಾಂಗ್ ರೇಪ್ ಆಗಿದ್ದರೂ ಏಕೆ ಮಾತನಾಡುತ್ತಿಲ್ಲ ಎಂದು ಮಂಜುಳ ಮಾನಸ ಆಕ್ರೋಶ ವ್ಯಕ್ತಪಡಿಸಿದರು.
key words : mysore-gang-rape-police-home.minister-failure-congress-allegation