ಮೈಸೂರು,ಆ,19,2019(www.justkannada.in): ದೂರ ಶಿಕ್ಷಣ ನೀಡಲು ಪ್ರತ್ಯೇಕ ವಾದ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಇರುವಾಗ ಸಾಂಪ್ರದಾಯಿಕ ವಿವಿಗಳಿಗೆ ದೂರ ಶಿಕ್ಷಣ ನೀಡಲು ಸರ್ಕಾರ ಅನುಮತಿ ನೀಡಿರುವ ಕ್ರಮ ಸರಿಯಲ್ಲ ಎಂದು ಮುಕ್ತ ವಿವಿ ವಿಶ್ರಾಂತ ಕುಲಪತಿ ಡಾ.ಎನ್.ಎಸ್.ರಾಮೇಗೌಡ ಅವರು ಬೇಸರ ವ್ಯಕ್ತಪಡಿಸಿದರು.
ಮೈಸೂರಿನಲ್ಲಿ ಸುದ್ದಿಗೋಷ್ಡಿ ನಡೆಸಿ ಮಾತನಾಡಿದ ವಿಶ್ರಾಂತ ಕುಲಪತಿ ಡಾ.ಎನ್.ಎಸ್.ರಾಮೇಗೌಡ, ಸಾಂಪ್ರದಾಯಿಕ ವಿವಿಗಳಲ್ಲಿ ಆರ್ಥಿಕ ಸಂಪನ್ಮೂಲ ಹೆಚ್ಚಿಸಿಕೊಳ್ಳಲು ದೂರ ಶಿಕ್ಷಣ ನೀಡಲು ಅನುಮತಿ ನೀಡಿರುವುದಾಗಿ ಸರ್ಕಾರ ತಿಳಿಸಿದೆ. ಆದರೆ ಶಿಕ್ಷಣ ಇದರಿಂದ ವ್ಯಾಪಾರೀಕರಣವಾದಂತೆ ಅಗುತ್ತದೆ. ಹಣ ಇದ್ದವರಿಗೆ ಉನ್ನತ ಶಿಕ್ಷಣ ಎಂದಾಗುತ್ತದೆ. ಆದ್ದರಿಂದ ಸರ್ಕಾರ ಇಂತಹ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದರು.
ದೂರಶಿಕ್ಷಣ ವಿದ್ಯಾರ್ಥಿಗಳಿಂದ ಪಡೆಯುವ ಶುಲ್ಕವನ್ನು ಓಡಿಎಲ್ ವ್ಯವಸ್ಥೆಗೆ ಕೇವಲ 25 ರಿಂದ 30ರಷ್ಟು ಬಳಸಿಕೊಂಡು ಉಳಿದ 75ರಿಂದ 70 ರಷ್ಟು ಶುಲ್ಕವನ್ನು ಸಾಂಪ್ರದಾಯಿಕ ವ್ಯವಸ್ಥೆಗೆ ಬಳಸಿಕೊಳ್ಳುವ ಉದ್ದೇಶ ನ್ಯಾಯ ಸಮ್ಮತವಲ್ಲ, ಇದರಿಂದ ಶಿಕ್ಷಣ ಗುಣಮಟ್ಟದಲ್ಲೂ ಪರಿಣಾಮ ಬೀರಲಿದೆ. ದೂರಶಿಕ್ಷಣ ವ್ಯವಸ್ಥೆ ಅತ್ಯುತ್ತಮವಾಗಿದ್ದು, ಅದರ ಅನುಷ್ಠಾನದಲ್ಲಿ ತೊಡಕುಂಟಾಗುತ್ತಿದೆ. ಮುಕ್ತ ವಿವಿ ಬಗ್ಗೆ ವಿದ್ಯಾರ್ಥಿಗಳಲ್ಲಿ ಈಗಾಗಲೇ ಗೊಂದಲ ಇರುವುದರಿಂದ ಅದನ್ನು ಹೋಗಲಾಡಿಸಬೇಕು ಎಂದು ಆಗ್ರಹಿಸಿದರು.
ಅಲ್ಲದೆ ಹಿಂದೆ ಅಗಿರುವ ತಪ್ಪನ್ನು ಸರಿಪಡಿಸಿಕೊಂಡು ಮುಂದೆ ಮುಕ್ತ ವಿವಿ ಸುಧಾರಣೆಗೆ ನಾನು ಸೇರಿದಂತೆ ನಾಲ್ವರ ಸಮಿತಿ ರಚಿಸಲಾಗಿದ್ದು ಸದ್ಯವೇ ವರದಿ ನೀಡಲಾಗುವುದು ಎಂದು ವಿಶ್ರಾಂತ ಕುಲಪತಿ ಡಾ. ಎನ್ ಎಸ್ ರಾಮೇಗೌಡ ತಿಳಿಸಿದರು.
Key words: mysore- Government- sanction -education -raditional university- not right – Dr NS Ramegowda