ಮೈಸೂರು, ಅ.21, 2020 : (www.justkannada.in news) : ‘ ಸಾಮಾಜಿಕ ಜಾಲತಾಣಗಳಲ್ಲಿನ ‘ ಟ್ರೋಲ್ ‘ ನಿಂದ ತುಂಬಾ ಬೇಸರವಾಗಿದೆ. ಈ ರೀತಿ ಬೆಳವಣಿಗೆಗಳು ನಮ್ಮ ಉತ್ಸಾಹವನ್ನು ಸಂಪೂರ್ಣ ಕುಗ್ಗಿಸಿಬಿಡುತ್ತದೆ’.
ಕಳೆದ ಎರಡು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಗ್ರಾಮ ಪಂಚಾಯ್ತಿ ಕಾರ್ಯದರ್ಶಿಯೊಬ್ಬರು ಛತ್ರಿ ಕೆಳಗೆ ನಿಂತು ಕೆಲಸ ಮಾಡುತ್ತಿದ್ದ ಫೋಟೋವೊಂದು ವೈರಲ್ ಆಗಿದದ್ದು ನಿಮಗೆ ನೆನಪಿರಬಹುದು. ಈ ವೈರಲ್ ಫೋಟೋ ಬೆನ್ನತ್ತಿದ ಜಸ್ಟ್ ಕನ್ನಡ ಗೆ, ಫೋಟೋದಲ್ಲಿದ್ದದ್ದು ಮೈಸೂರು ತಾಲೊಕು ಗುಂಗ್ರಾಜ್ ಛತ್ರದ ಗ್ರಾಪಂನ ಕಾರ್ಯದರ್ಶಿ ಗ್ರೇಡ್ 1 ದಿವ್ಯ ಎಂಬುದು ತಿಳಿಯಿತು.
ಈ ಹಿನ್ನೆಲೆಯಲ್ಲಿ ‘ಫೋಟೋ ಟ್ರೊಲ್ ‘ಘಟನೆಗೆ ಸಂಬಂಧಿಸಿದಂತೆ ಜಸ್ಟ್ ಕನ್ನಡ, ಗ್ರಾಪಂ ಕಾರ್ಯದರ್ಶಿ ದಿವ್ಯ ಅವರನ್ನು ದೂರವಾಣಿ ಮೂಲಕ ಮಾತನಾಡಿಸಿತು. ಆಗಲೇ ಅವರು ಈ ಮೇಲಿನಂತೆ ಉತ್ತರಿಸಿದ್ದು. ಇಷ್ಟು ಹೇಳುವಷ್ಟರಲ್ಲಿ ಅವರ ಗಂಟಲು ಬಿಗಿದು ಗದ್ಗದಿತರಾದರು.
ಆ ದಿನ ನಡೆದ ಘಟನೆಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ದಿವ್ಯ ಅವರು ಹೇಳಿದಿಷ್ಟು…
ಭೂ ಮಾಪನ ಇಲಾಖೆ ಸಹಯೋಗದಲ್ಲಿ ‘ಸ್ವಮಿತ್ವ’ ಯೋಜನೆ ಜಾರಿಗೆ ಗುಂಗ್ರಾಲ್ ಛತ್ರ ಗ್ರಾಮ ಪಂಚಾಯ್ತಿಯನ್ನು ಪೈಲಟ್ ಗ್ರಾಮವನ್ನು ಆಯ್ಕೆ ಮಾಡಲಾಗಿದೆ. ಅದರಂತೆ ಕಳೆದ ದಿನಗಳಿಂದ ಗ್ರಾಮದ ಪ್ರತಿಯೊಬ್ಬರ ಸ್ವವಿವರ, ಆಸ್ತಿ ವಿವರ ಸಂಗ್ರಹಿಸಿ ಅದನ್ನು ದಾಖಲಿಸಲಾಗುತ್ತಿದೆ. ಗ್ರಾಮದ ವ್ಯಕ್ತಿಗಳಿಗೆ ಆಸ್ತಿ ಕಾರ್ಡ್ (property card) ನೀಡುವುದು ಯೋಜನೆ ಉದ್ದೇಶ. ಇದಕ್ಕಾಗಿ ವ್ಯಕ್ತಿಗಳ ಆಸ್ತಿ, ನಕಾಶೆ, ಚಕ್ ಬಂದಿ ಸೇರಿದಂತೆ ಸಮಗ್ರ ಮಾಹಿತಿಯನ್ನು ಸಂಗ್ರಹಿಸಿ ದಾಖಲಿಸಲಾಗುತ್ತದೆ. ಸ್ವಮಿತ್ವಕ್ಕಾಗಿ ಬೆಳಗ್ಗೆ ಆರು ಗಂಟೆಗೆ ಕೆಲಸ ಶುರು ಆಗುತ್ತೆ. ಇದರಲ್ಲಿ ಸಂಪೂರ್ಣವಾಗಿ ಗ್ರಾಮ ಪಂಚಾಯತಿ ಸಿಬ್ಬಂದಿ ತೊಡಗಿಸಿಕೊಂಡಿದ್ದಾರೆ.
ಇದಾದ ಬಳಿಕ ಆಸ್ತಿ ನಕಾಶೆಯನ್ನು ಡ್ರೋನ್ ಬಳಕೆ ಮೂಲಕ ಚಿತ್ರೀಕರಿಸಿ ದಾಖಲಿಸಲಾಗುತ್ತದೆ. ಇದಕ್ಕಾಗಿ 25 ಲಕ್ಷ ರೂ. ವೆಚ್ಚದ ಡ್ರೋನ್ ತಂದಿದ್ದು ಅದರ ಸಹಾಯದಿಂದ ಕಳೆದ ಸೋಮವಾರದಿಂದ ಕೆಲಸ ನಿರ್ವಹಿಸಲಾಗುತ್ತಿದೆ. ಡ್ರೋನ್ ನ ಚಿತ್ರಗಳನ್ನು ಮಾನೀಟರ್ ನಲ್ಲಿ ವೀಕ್ಷಿಸಲು ಸಹಾಯಕವಾಗಲಿ ಎಂಬ ಕಾರಣ ಭೂ ಮಾಪನ ಇಲಾಖೆಯವರೇ ಛತ್ರಿಗಳನ್ನು ಬಳಸುತ್ತಿದ್ದರು. ಸೂರ್ಯನ ಬೆಳಕಿಗೆ ಮಾನೀಟರ್ ನಲ್ಲಿ ಚಿತ್ರಗಳನ್ನು ವೀಕ್ಷಿಸಲಾಗದು. ಅದಕ್ಕಾಗಿ ಛತ್ರಿ ಅಡ್ಡ ಹಿಡಿದು ಚಿತ್ರ ವೀಕ್ಷಿಸಿ ದಾಖಲೆಗಳನ್ನು ಪರಿಶೀಲಿಸಲಾಗುತ್ತಿತ್ತು. ಈ ವೇಳೆ ಅಚಾನಕ್ಕಾಗಿ ಛತ್ರಿ ಹಿಡಿದ ವ್ಯಕ್ತಿಯ ಕೆಳಗೆ ಕೆಲ ಕ್ಷಣ ನಾನು ನಿಂತದ್ದು. ಇದನ್ನೇ ಸೋಷಿಯಲ್ ಮೀಡಿಯದಲ್ಲಿ ಮಹಿಳೆಯೊಬ್ಬರು ಟ್ರೋಲ್ ಮಾಡಿರುವುದು. ಇದಕ್ಕೆ ಮತ್ತೊಂದಷ್ಟು ಮಂದಿ, ಸತ್ಯ ಪರಿಶೀಲಿಸದೆ ಅನಗತ್ಯವಾಗಿ ಕಮೆಂಟ್ಸ್ ಮಾಡಿದ್ದಾರೆ. ಇದು ನನಗೆ ಘಾಸಿ ಉಂಟು ಮಾಡಿದೆ. ಕೆಲಸ ಸೇರಿ 7 ವರ್ಷವಾಯಿತು. ಈ ಅವಧಿಯಲ್ಲಿ ಒಂದು ದಿನವೂ ನಾನು ಛತ್ರಿಯನ್ನೇ ಬಳಸಿಲ್ಲ. ಅಂಥದ್ದರಲ್ಲಿ ಈ ರೀತಿ ಸುಳ್ಳು ಮಾಹಿತಿ ಹಂಚಿ ಟ್ರೋಲ್ ಮಾಡಿದ್ದು ನನ್ನ ಆತ್ಮವಿಶ್ವಾಸವನ್ನೇ ಕುಗ್ಗಿಸಿದೆ. ದಯವಿಟ್ಟು ಕೇವಲ ಪೋಟೋ ನೋಡೇ ಕಮೆಂಟ್ ಮಾಡಬೇಡಿ. ಕಣ್ಣಾರೆ ಕಂಡ್ರು ಪ್ರಮಾಣಿಸಿ ನೋಡಿ ಎಂದು ಟ್ರೋಲಿಗರನ್ನು ದಿವ್ಯ ವಿನಂತಿಸಿಕೊಂಡರು.
ಅಧಿಕಾರಿ ಸಮರ್ಥನೆ:
ಸೋಷಿಯಲ್ ಮಿಡಿಯಾಗಳಲ್ಲಿನ ಟ್ರೋಲ್ ಗೆ ಮೈಸೂರು ಜಿಲ್ಲಾ ಪಂಚಾತ್ತಿ ಇಒ ಕೃಷ್ಣ ಕುಮಾರ್ ಪ್ರತ್ಯುತ್ತರ ನೀಡಿದ್ದಾರೆ.
ಕೆಲ ಸಂದರ್ಭದಲ್ಲಿ ಚಿತ್ರಗಳು ನಮ್ಮನ್ನು ಮಿಸ್ ಲೀಡ್ ಮಾಡುತ್ತವೆ. ಗ್ರಾಮೀಣ ಪ್ರದೇಶಗಳಲ್ಲಿ ಪ್ರಾಪರ್ಟಿ ಕಾರ್ಡ್ ನೀಡುವ ಸಲುವಾಗಿ ಡ್ರೋನ್ ಬಳಸಲಾಗುತ್ತಿದೆ. ಈ ವೇಳೆ ಡ್ರೋನ್ ತೆಗವ ಚಿತ್ರಗಳನ್ನು ಪರಿಶೀಲಿಸಲು ನೆರಳಿನ ಅಗತ್ಯತೆ ಇರುತ್ತದೆ. ಈ ಕಾರಣಕ್ಕಾಗಿ ಛತ್ರಿ ಬಳಸಲಾಗಿದೆ ಎಂದು ಟ್ರೋಲಿಗರಿಗೆ ಸ್ಪಷ್ಟನೆ ನೀಡಿದ್ದಾರೆ.
oooooo
key words : Mysore-grama.panchayath-secretory-drone-troll-clarification