ಮೈಸೂರು ,ಮಾರ್ಚ್,15,2024(www.justkannada.in): ನಾವು ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆಗಳನ್ನ ಜಾರಿಗೊಳಿಸಿದ್ದೇವೆ. ಬಿಜೆಪಿಯವರು ಮಾಡಿದ ಟೀಕೆಗಳಿಗೆ ತಲೆಕೆಡಿಸಿಕೊಂಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಇಂದು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿಆಯೋಜಿಸಿದ್ದ ಗ್ಯಾರಂಟಿ ಫಲಾನುಭವಿಗಳ ಸಮಾವೇಶದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಾವು ಕೊಟ್ಟ ಮಾತಿನಂತೆ ಗ್ಯಾರಂಟಿ ಜಾರಿ ಮಾಡಿದ್ದೇವೆ. ಆದರೆ ಬಿಜೆಪಿಯವರು ಟೀಕೆ ಮಾಡಿದರು. ಆದರೆ ಅವರ ಟೀಕೆಗೆ ನಾವು ತಲೆ ಕೆಡಿಸಿಕೊಳ್ಳಲಿಲ್ಲ . ಗ್ಯಾರಂಟಿ ಬಗ್ಗೆ ಎಲ್ಲಾ ರೀತಿಯ ಆರೋಪ ಮಾಡಿದ್ದಾರೆ. ಗ್ಯಾರಂಟಿ ಯೋಜನೆ ಜಾರಿಯಾಗಲ್ಲ ಎಂದು ಅಪ್ಪಟ ಸುಳ್ಳು ಹೇಳಿದ್ದರು ಆದರೆ ನಾವು ಹೇಳಿದಂತೆ ಗ್ಯಾರಂಟಿ ಜಾರಿ ಮಾಡಿದ್ದೇವೆ ಎಂದರು.
ಶಕ್ತಿಯೋಜನೆಯಿಂದ ದೇವಸ್ಥಾನಗಳಿಗೆ ಹೆಚ್ಚಿನ ಮಹಿಳೆಯರು ಬರುತ್ತಿದ್ದಾರೆ. ಮಹಿಳೆಯರ ದುಡ್ಡನ್ನ ಕೆಎಸ್ ಆರ್ ಟಿಸಿಗೆ ಸರ್ಕಾರ ನೀಡುತ್ತಿದೆ. ರಾಜ್ಯದಲ್ಲಿ ಹಸಿವು ನೀಗಿಸಲು ಅನ್ನಭಾಗ್ಯ ಘೋಷಣೆ ಮಾಡಿದ್ದೆ. ಅನ್ನಭಾಗ್ಯ ಯೋಜನೆಯಡಿ ಪ್ರತಿ ಕುಟುಂಬಕ್ಕೆ 10 ಕೆಜಿ ಅಕ್ಕಿ ಘೋಷಣೆ ಮಾಡಿದ್ದವು. ಅಕ್ಕಿ ಕೊರತೆ ಉಂಟಾಯಿತು. ಆದರೆ ಕೇಂದ್ರ ಸರ್ಕಾರ ನಮಗೆ ಅಕ್ಕಿ ಕೊಡದೇ ಮೋಸಮಾಡಿತು. 5 ಕೆಜಿ ಅಕ್ಕಿ ಜೊತೆಗೆ ಪ್ರತಿಯೊಬ್ಬರಿಗೂ 170 ರೂ ಹಾಕುತ್ತಿದ್ದೇವೆ. ಅಂದು ಬಿಜೆಪಿಯವರು ಅಕ್ಕಿಯನ್ನ 7 ಕೆಜಿಯಿಂದ 5ಕೆಜಿಗೆ ಇಳಿಸಿದ್ದರು ಎಂದು ಕಿಡಿಕಾರಿದರು.
ಗ್ಯಾರಂಟಿ ಯೋಜನೆಗಳು ಎಲ್ಲಾ ಜಾತಿಯ ಬಡವರು, ಎಲ್ಲಾ ಧರ್ಮದ ಬಡವರು ಅವರೆಲ್ಲರಿಗೂ ಕೂಡ ಈ ಯೋಜನೆಗಳು ತಲುಪುವ ಕೆಲಸ ಮಾಡುತ್ತೇವೆ. ಭಾರತೀಯ ಜನತಾ ಪಕ್ಷದ ಬಡವರಿಗೂ ಕೂಡ ಕೊಡುತ್ತಿದ್ದೇವೆ. ನಾವು ಯಾವುದೇ ಧರ್ಮ ಜಾತಿ ಪಕ್ಷ ಪಂಗಡ ಎಂದು ಬೇಧ ಮಾಡುವುದಿಲ್ಲ. ಎಲ್ಲಾ ಮಹಿಳೆಯರು ಎಲ್ಲಾ ಬಡವರು ಅವರಿಗೆ ಸಹಾಯ ಮಾಡಬೇಕೆಂಬುದೇ ನಮ್ಮ ಗ್ಯಾರಂಟಿ ಯೋಜನೆಗಳ ಪ್ರಮುಖ ಉದ್ದೇಶವಾಗಿದೆ ಎಂದರು.
Key words: mysore-Guarantee-implementation – promised- CM -Siddaramaiah