ಮೈಸೂರು,ಜೂನ್,19,2024 (www.justkannada.in): ರಾಜ್ಯದಲ್ಲಿ ಆರ್ಥಿಕತೆ ಸಂಪೂರ್ಣ ದಿಕ್ಕು ತಪ್ಪಿದ್ದು, ಇಲಾಖೆಗಳಲ್ಲಿ ಹಣ ದಿಕ್ಕಾಪಾಲಾಗಿ ಪೋಲಾಗುತ್ತಿದೆ. ಸರ್ಕಾರದ ಆರ್ಥಿಕ ನೀತಿ ದುರ್ಬಲವಾಗಿದೆ. ನೀ ನೀವು ಯಾವ ಸೀಮೆ ಹಣಕಾಸು ಸಚಿವರು ಮಿಸ್ಟರ್ ಸಿದ್ದರಾಮಯ್ಯ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ವಾಗ್ದಾಳಿ ನಡೆಸಿದರು.
ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಚ್.ವಿಶ್ವನಾಥ್, ಸಿದ್ದರಾಮಯ್ಯ ಅವರ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ಪರದಾಡುತ್ತಿದೆ. ಇದರ ಬದಲು ಎಲ್ಲಿ, ಯಾವ ಕ್ಷೇತ್ರದಲ್ಲಿ ಸಮಸ್ಯೆಗಳು ಇದೆ ಅದಕ್ಕೆ ಪರಿಹಾರ ಕಂಡುಕೊಂಡಿದ್ದರೆ ಸಾಕಾಗಿತ್ತು. ಈ ಎಲ್ಲಾ ಗ್ಯಾರಂಟಿಗಳ ಬದಲು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಗಮನ ಹರಿಸಬೇಕಿತ್ತು. 1 ರಿಂದ 12 ನೇ ತರಗತಿವರೆಗೆ ಉಚಿತ ಶಿಕ್ಷಣ ಕೊಡುವ ಕೆಲಸ ಮಾಡಬೇಕಿತ್ತು. ಲಕ್ಷಾಂತರ ರೂಪಾಯಿ ಕೊಟ್ಟು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಮಕ್ಕಳನ್ನು ಸೇರಿಸಿ ಪೋಷಕರು ಪರದಾಡುತ್ತಾರೆ. ಉಚಿತ ಆರೋಗ್ಯದ ಜೊತೆಗೆ ಉಚಿತ ಶಿಕ್ಷಣ ನೀಡಬೇಕಿತ್ತು. ಗ್ಯಾರಂಟಿ ಯೋಜನೆಗಳ ಬದಲು ಎಲ್ಲರಿಗೂ ಉಚಿತ ಶಿಕ್ಷಣ ಯೋಜನೆ ಹೊರಡಿಸಲಿ. 65 ಸಾವಿರ ಕೋಟಿ ಖರ್ಚು ಮಾಡಿ ಅದಕ್ಕೊಬ್ಬ ಉಸ್ತುವಾರಿ, ಜಿಲ್ಲೆಗೊಬ್ಬ ಉಸ್ತುವಾರಿ ಕೊಟ್ಟು ಹಣ ದುರುಪಯೋಗ ಮಾಡುತ್ತಿರುವುದು ಸರಿಯಲ್ಲ ಎಂದು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಕುರಿತು ಅಸಮಧಾನ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಆರ್ಥಿಕತೆ ಸಂಪೂರ್ಣ ದಿಕ್ಕು ತಪ್ಪಿದೆ. 14 ರಿಂದ 15 ಬಾರಿ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿಗಳು ಹಿಂದೆ ತಿರುಗಿ ನೋಡಿಲ್ಲ. ಎಸ್ಟಾಬ್ಲಿಸ್ ಮೆಂಟ್ ಗೆ 50% ಅಭಿವೃದ್ದಿಗೆ 50% ಅನುದಾನ ಮೀಸಲಿಡಬೇಕು. ರಾಜ್ಯದಲ್ಲಿ ಬಜೆಟ್ ಅನವಶ್ಯಕವಾಗಿ ಸೋರಿಕೆಯಾಗುತ್ತಿದೆ. ಇಲಾಖೆಗಳಲ್ಲಿ ಹಣ ದಿಕ್ಕಾಪಾಲಾಗಿ ಪೋಲಾಗುತ್ತಿದೆ. ಎಸ್ಟಾಬ್ಲಿಸ್ ಮೆಂಟ್ ಗೆ 70% ಹೋಗುತ್ತಿದೆ. ಅಭಿವೃದ್ದಿಗೆ ಕೇವಲ 30% ಹೋಗುತ್ತಿದೆ. ನೀವ್ಯಾವ ಸೀಮೆ ಹಣಕಾಸು ಸಚಿವರು ಮಿ. ಸಿದ್ದರಾಮಯ್ಯ. ಸರ್ಕಾರದ ಆರ್ಥಿಕ ನೀತಿ ದುರ್ಬಲವಾಗಿದೆ. ವಿವೇಚನಾ ರಹಿತವಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಹೆಚ್.ವಿಶ್ವನಾಥ್ ಹರಿಹಾಯ್ದರು.
Key words: mysore, H.Vishwanath, CM, Siddaramaiah