ಮೈಸೂರು,ಡಿ,26,2019(www.justkannada.in): ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರದ ಬಗ್ಗೆ ಉದ್ವೇಗಕ್ಕೆ ಒಳಗಾಗಿರುವ ಮುಸ್ಲಿಂ ಸಮುದಾಯಕ್ಕೆ ಮನವರಿಕೆ ಮಾಡಿಕೊಡಬೇಕಾಗಿದೆ. ಈ ಬಗ್ಗೆ ಜೆಡಿಎಸ್ ನ ಕುಮಾರಸ್ವಾಮಿ ಹಾಗು ಕಾಂಗ್ರೆಸ್ ನ ಸಿದ್ದರಾಮಯ್ಯ ಅವರನ್ನು ಮನವಿ ಮಾಡುತ್ತೇನೆ. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸಲು ಈ ಇಬ್ಬರೂ ನಾಯಕರು ಕಾರಣೀಭೂತರಾಗಬೇಕು ಎಂದು ಮಾಜಿ ಸಚಿವ ಹೆಚ್.ವಿಶ್ವನಾಥ್ ಮನವಿ ಮಾಡಿದರು.
ಮೈಸೂರಿನ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಚಿವ ಎ.ಹೆಚ್. ವಿಶ್ವನಾಥ್, ಪೌರತ್ವ ಕಾಯ್ದೆಯಂತಹ ಮಹತ್ವದ ಕಾಯ್ದೆ ಜಾರಿಯಾದಾಗ ದೇಶದ ಹಿತಚಿಂತಕರು, ಬುದ್ಧಿಜೀವಿಗಳು ಜನರಿಗೆ ಮನವರಿಕೆ ಮಾಡಕೊಡಬೇಕಿತ್ತು. ಆದರೆ ಇದನ್ನು ಕೆಲವರು ತಮ್ಮ ರಾಜಕೀಯ ಲಾಭಕ್ಕಾಗಿ ಬಳಿಸಿಕೊಳ್ಳುತ್ತಿರುವುದು ವಿಪರ್ಯಾಸವಾಗಿದೆ. ಇದೇ ವಿಚಾರವನ್ನು ಮುಂದಿಟ್ಟುಕೊಂಡು ಜನರನ್ನು ಉದ್ರೇಕಗೊಳಿಸಿ ಎತ್ತಿಕಟ್ಟಲಾಗುತ್ತಿದೆ. ಈ ವಿಚಾರದಲ್ಲಿ ಮುಸ್ಲಿಂ ಸಮುದಾಯ ಆತಂಕಕ್ಕೆ ಒಳಗಾಗಿದೆ. ಹಾಗಾಗಿ ಮುಸ್ಲಿಮರನ್ನು ಕೆರಳಿಸುವ ಬದಲು ಹೀಲಿಂಗ್ ಟಚ್ ಬೇಕಾಗಿದೆ. ಉದ್ವೇಗಕ್ಕೆ ಒಳಗಾಗಿರುವ ಮುಸ್ಲಿಂ ಸಮುದಾಯಕ್ಕೆ ಅದೇ ಸಮುದಾಯದ ಬುದ್ಧಿವಂತರು, ಧರ್ಮಗುರುಗಳು ಮನವರಿಕೆ ಮಾಡಿಕೊಡಬೇಕಾಗಿದೆ ಎಂದರು.
ಹಾಗೆಯೇ ಈ ಬಗ್ಗೆ ಜೆಡಿಎಸ್ ನ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ನ ಸಿದ್ದರಾಮಯ್ಯ ಅವರನ್ನು ಮನವಿ ಮಾಡುತ್ತೇನೆ. ಇವರಿಬ್ಬರೂ ಮುಖ್ಯಮಂತ್ರಿ ಆಗಿದ್ದವರು, ಜವಾಬ್ದಾರಿಯುತ ಸ್ಥಾನದಲ್ಲಿದ್ದವರು. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸಲು ಈ ಇಬ್ಬರೂ ನಾಯಕರು ಕಾರಣೀಭೂತರಾಗಬೇಕು. ಅಧಿಕಾರ ಬರೋದು ಹೋಗೋದು ಸಹಜ. ಅಧಿಕಾರ ಕಳೆದುಕೊಂಡವರು ಸಹಿಷ್ಣುಗಳಾಗಬೇಕು ಎಂದು ಹೆಚ್.ವಿಶ್ವನಾಥ್ ಸಲಹೆ ನೀಡಿದರು.
ಕೇಂದ್ರ ಸರ್ಕಾರ ಸರ್ವಪಕ್ಷ ಸಭೆ ಕರೆದು ಚರ್ಚಿಸಲಿ…
ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರ ಕೇಂದ್ರ ಸರ್ಕಾರ ಕೂಡ ಆದಷ್ಟು ಬೇಗ ಸರ್ವ ಪಕ್ಷಗಳ ಸಭೆ ಕರೆಯಬೇಕು. ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಬೇಕು. ಪೌರತ್ವ ಕಾಯ್ದೆ ಬಹಳ ಮಹತ್ವದ ಕಾಯ್ದೆಯಾಗಿದೆ. ಇದರಲ್ಲಿ ಹೊಸದೇನೂ ಇಲ್ಲ. ನೆಹರೂ, ಇಂದಿರಾಗಾಂಧಿಯವರ ಕಾಲದಿಂದಲೂ ಮುಂದುವರಿದುಕೊಂಡು ಬಂದಿದೆ. ಈಗ ಮೋದಿ ಕಾಲದಲ್ಲೂ ಮುಂದುವರಿದಿದೆ ಎಂದು ಹೆಚ್.ವಿಶ್ವನಾಥ್ ತಿಳಿಸಿದರು.
ಪೌರತ್ವ ಕಾಯ್ದೆಯ ಬಗ್ಗೆ ದೇಶಾದ್ಯಂತ ಪ್ರಚಾರಕ್ಕಿಂತ ಅಪಪ್ರಚಾರವೇ ಹೆಚ್ಚಾಗುತ್ತಿದೆ. ಜಿ.ಎಸ್.ಟಿ ಅನುಷ್ಠಾನಕ್ಕೂ ಮುನ್ನಾ ಇದೇ ರೀತಿ ಪ್ರತಿರೋಧ ವ್ಯಕ್ತವಾಗಿತ್ತು. ಆನಂತರ ಎಲ್ಲಾ ರಾಜ್ಯಗಳಲ್ಲೂ ಜಿ.ಎಸ್.ಟಿ ಅನುಷ್ಠಾನಕ್ಕೆ ತರಲಾಯಿತು. ಪೌರತ್ವ ಕಾಯ್ದೆಯ ವಿಚಾರದಲ್ಲೂ ಅದೇ ರೀತಿ ಆಗಲಿದೆ ಎಂದು ಹೆಚ್. ವಿಶ್ವನಾಥ್ ವಿಶ್ಲೇಷಿಸಿದರು.
Key words: mysore- H. Vishwanath- reaction-about-Citizenship Amendment Act.