ಮೈಸೂರು,ಜೂ,12,2020(www.justkannada.in): ಹೈಕೋರ್ಟ್ ಸೂಚನೆಯನ್ನು ದುರ್ಬಳಕೆ ಮಾಡಿಕೊಂಡು ಕರ್ನಾಟಕ ಭೂ ಸುಧಾರಣೆ ಕಾಯ್ದೆಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತರಲು ಹೊರಟಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆ ಎಂದು ಕಾಂಗ್ರೆಸ್ ವಕ್ತಾರ ಹೆಚ್.ಎ ವೆಂಕಟೇಶ್ ಕಿಡಿಕಾರಿದರು.
ಈ ಕುರಿತು ಮಾತನಾಡಿರುವ ಹೆಚ್.ಎ ವೆಂಕಟೇಶ್ , ಕೃಷಿಕರಲ್ಲದವರು ಯಾವುದೇ ಅಡೆತಡೆಗಳಿಲ್ಲದೆ ಕೃಷಿಭೂಮಿ ಖರೀದಿಸಬಹುದು ಎಂಬ ಸರ್ಕಾರದ ಯೋಚನೆಯಿಂದ ಭೂ ಸುಧಾರಣೆ ಕಾಯ್ದೆ ಉದ್ದೇಶವೇ ಸಂಪೂರ್ಣವಾಗಿ ನಾಶವಾದಂತೆ ಆಗಿದೆ. ಕರ್ನಾಟಕ ಭೂ ಸುಧಾರಣೆ ಕಾಯ್ದೆ 1974 ಇಡೀ ವಿಶ್ವಕ್ಕೆ ಮಾದರಿಯಾಗುವಂತೆ ಡಿ ದೇವರಾಜ ಅರಸು ಅವರ ಸರ್ಕಾರ ನಿರೂಪಿಸಿತು. “ಉಳುವವನೇ ಭೂಮಿಯ ಒಡೆಯ” ಎಂಬ ಸ್ಪಷ್ಟ ನಿಲುವಿತ್ತು. ಕೃಷಿಭೂಮಿ ಮಾರಾಟದ ವಸ್ತುವಲ್ಲ, ಸಮಸ್ತಜೀವರಾಶಿಯ ಜೀವನದ ಪ್ರಶ್ನೆ. ಕೃಷಿಕರಲ್ಲದವರು ಭೂಮಿ ಪಡೆದರೆ ಮನುಕುಲದ ಮೇಲೆ ಆಗುವ ಅನಾಹುತ ವಿವರಿಸಲು ಸಾಧ್ಯವಿಲ್ಲ.ಜೀವವೈವಿಧ್ಯಕ್ಕೆ ,ನೈಸರ್ಗಿಕ ಭೂ ದೃಶ್ಯಕ್ಕೆ ಹಾನಿ ಉಂಟಾಗುತ್ತದೆ ಎಂಬುದನ್ನು ಸರ್ಕಾರ ಮನಗಾಣಬೇಕಾಗಿದೆ. ಹಾಗಾಗಿ ಕೃಷಿ ಮಾಡುವವರಿಗೆ ಮಾತ್ರ ಕೃಷಿ ಭೂಮಿ.ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾಗಿ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತರಲು ಮುಂದಾಗಿರುವುದು ಸಂವಿಧಾನದ ವ್ಯವಸ್ಥೆಗೆ ಮಾಡಿದ ಅಪಚಾರ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸುಗ್ರೀವಾಜ್ಞೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ವಿಶೇಷ ಹಾಗೂ ಅವಶ್ಯಕ ಸಂದರ್ಭದಲ್ಲಿ ಮಾತ್ರ ಮೂಲಕ ಕಾನೂನುಗಳನ್ನು ಜಾರಿ ಮಾಡಲಾಗುತ್ತದೆ. ಆದರೆ ಯಾವುದೇ ವಿಶೇಷ ಸಂದರ್ಭಗಳನ್ನು ಇಲ್ಲದಿದ್ದರೂ ವಿಧಾನಸಭೆ ಮತ್ತು ವಿಧಾನ ಪರಿಷತ್ತನ್ನು ಕತ್ತಲೆಯಲ್ಲಿಟ್ಟು ಹೊಸ ಕಾನೂನು ಜಾರಿ ಮಾಡಲು ಹೊರಟಿರುವುದು ಬಿಜೆಪಿ ಸರ್ಕಾರಕ್ಕೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದರು.
Key words: mysore- HA Venkatesh-Land -Act