‘ ಜಯಲಕ್ಷ್ಮಿ ವಿಲಾಸ್ ಬಂಗಲೆ ‘ ಗೆ ಶಾಶ್ವತ ಕಾಯಕಲ್ಪ ನೀಡಲು ಮುಂದಾದ ಮೈಸೂರು ವಿವಿ

 

ಮೈಸೂರು, ಡಿ.30, 2019 : ( www.justkannada.in news ) ನಗರದ ಅತ್ಯಂತ ಸುಂದರ ಪಾರಂಪರಿಕಾ ಕಟ್ಟಡಗಳಲ್ಲಿ ಒಂದೆನಿಸಿದ ಜಯಲಕ್ಷ್ಮಿ ವಿಲಾಸ್ ಬಂಗಲೆಗೆ ಶಾಶ್ವತ ಕಾಯಕಲ್ಪ ನೀಡಲು ಮೈಸೂರು ವಿಶ್ವವಿದ್ಯಾನಿಲಯ ಮುಂದಾಗಿದ್ದು, ಇದಕ್ಕಾಗಿ 10 ಕೋಟಿ ರೂ.ಗಳ ಪ್ರಸ್ತಾವನೆಯನ್ನು ಸರಕಾರಕ್ಕೆ ಕಳುಹಿಸಲಿದೆ.

ಈ ಹಿಂದೆಯೂ ಹಲವಾರು ಸಲ ದುರಸ್ತಿ ಕಾರ್ಯ ನಡೆಸಲಾಗಿತ್ತು. ಆದರೂ ಶಾಶ್ವತ ಕಾಯಕಲ್ಪ ನೀಡಲಾಗಿರಲಿಲ್ಲ. ಇದನ್ನು ಮನಗಂಡ ಮೈಸೂರು ವಿವಿ ಕುಲಪತಿ ಪ್ರೊ.ಹೇಮಂತ್ ಕುಮಾರ್, ಈ ಪಾರಂಪರಿಕ ಕಟ್ಟಡ ಸಂರಕ್ಷಣೆಗೆ ಮುಂದಾಗಿದ್ದು, ಸರಕಾರದ ನೆರವಿಗೆ ಮೊರೆ ಹೋಗಿದ್ದಾರೆ.

ಈ ಸಂಬಂಧ ಜಸ್ಟ್ ಕನ್ನಡ ಡಾಟ್ ಇನ್ ಜತೆ ಮಾತನಾಡಿದ ಕುಲಪತಿ ಪ್ರೊ.ಹೇಮಂತ್ ಕುಮಾರ್ ಅವರು ಹೇಳಿದಿಷ್ಟು…

ಮೈಸೂರು ವಿಶ್ವವಿದ್ಯಾನಿಲಯದ ಮಾನಸ ಗಂಗೋತ್ರಿ ಆವರಣದ ಹಚ್ಚ ಹಸಿರಿನ, ಕುಕ್ಕರ ಹಳ್ಳಿ ಕೆರೆಯ ಪಶ್ಚಿಮದ ಭಾಗದಲ್ಲಿ ನಿರ್ಮಾಣಗೊಂಡಿರುವ ‘ ಜಯಲಕ್ಷ್ಮಿ ವಿಲಾಸ್ ಬಂಗಲೆ ‘ ನಾಲ್ವಡಿ ಕೃಷ್ಣ ರಾಜ ಒಡೆಯರ್ ರವರ ಅವಧಿಯಲ್ಲಿ ಮಹಾರಾಜ ಚಾಮರಾಜ ಒಡೆಯರವರ ದೊಡ್ಡ ಮಗಳಾದ ಯುವರಾಣಿ ಜಯಲಕ್ಷ್ಮಿ ಅಮ್ಮಣ್ಣಿ ಅವರಿಗೆಂದು ನಿರ್ಮಿಸಲಾಗಿತ್ತು.
ಈ ಬಂಗಲೆಯೂ ನಿರ್ಮಾಣಗೊಂಡ ಸಮಯದಲ್ಲಿ ಇದರ ಅಂದಾಜು ಬೆಲೆ 7 ಲಕ್ಷ ರೂ.ಗಳು. ಕಾಲನ ಹೊಡೆತಕ್ಕೆ ಸಿಲುಕಿ ಶಿಥಿಲಗೊಂಡಿದ್ದ ಈ ಕಟ್ಟಡವನ್ನು ಮತ್ತೆ 2002 ರಲ್ಲಿ ದುರಸ್ತಿಗೊಳಿಸಲಾಗಿತ್ತು. ಆಗ ಇದಕ್ಕೆ ತಗುಲಿದ ವೆಚ್ಚ
1.17 ಕೋಟಿ ರೂ. ಈ ಬಂಗಲೆಯನ್ನು 2006ರಲ್ಲಿ ಮತ್ತೊಮ್ಮೆ ಕರ್ನಾಟಕದ ರಾಜ್ಯಪಾಲರು ಉದ್ಘಾಟಿಸಿದರು.
ದುರಸ್ತಿಗೊಳಿಸಿದ ಬಂಗಲೆ 6 ಎಕ್ಕರೆಗಳ ವಿಸ್ತೀರ್ಣದಲ್ಲಿದ್ದು ಎರಡೂ ಕಡೆಗಳಲ್ಲಿ ಪ್ರವೇಶ ಹೊಂದಿದೆ. ಈ ಬಂಗಲೆಯನ್ನು ಮರ ಮತ್ತು ಕಬ್ಬಿಣದ ಜತೆಗೆ ಇಟ್ಟಿಗೆ ಹಾಗೂ ಗಾರೆ ಬಳಸಿ ನಿರ್ಮಿಸಲಾಗಿದೆ. ಜತೆಗೆ ಈ ಕಟ್ಟಡದಲ್ಲಿ 300 ಕಿಟಕಿಗಳು, 125 ಕೊಠಡಿಗಳು ಹಾಗೂ 287 ವೈಭವದಿಂದ ಕೊರೆಯಲಾದ ದ್ವಾರಗಳ ಜೊತೆಗೆ ಬೆಲೆಕಟ್ಟಲಾಗದ ಹಲವು ಕರಕುಶಲ ಪದಾರ್ಥಗಳಿವೆ.
ಇಷ್ಟೆಲ್ಲಾ ಪಾರಂಪರಿಕ ಮೌಲ್ಯಗಳನ್ನು ಒಂಗೊಂಡಿರುವ ಜಯಲಕ್ಷ್ಮಿ ವಿಲಾಸ ಬಂಗಲೆಯನ್ನು ಮುಂದಿನ ಪೀಳಿಗೆಗೂ ಸಂರಕ್ಷಿಸಬೇಕಾಗಿರುವುದು ನಮ್ಮ ಜವಾಬ್ದಾರಿ. ಪ್ರಸ್ತುತ ಮಳೆಯಿಂದಾಗಿ ಕಟ್ಟಡದ ಮೊದಲ ಹಂತದಲ್ಲಿನ ಕೆಲ ಭಾಗಗಳು ಶಿಥಿಲಗೊಂಡಿವೆ. ಇದು ಇತರೆಡೆಗೂ ವ್ಯಾಪಿಸದಂತೆ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು. ಪರಿಣಾಮ ಕಟ್ಟಡದ ನೆಲಹಾಸಿಗೆ ಯಾವುದೇ ತೊಂದರೆ ಉಂಟಾಗಿಲ್ಲ. ಈಗ ಹಾನಿಗೊಳಗಾಗಿರುವ ಕಟ್ಟಡದ ಭಾಗಗಳನ್ನು ದುರಸ್ತಿ ಮಾಡುವುದರ ಜತೆಗೆ ಶಾಶ್ವತ ಕಾಯಕಲ್ಪ ನೀಡುವುದು ಉದ್ದೇಶ. ಆದ್ದರಿಂದ ಸರಕಾರದ ನೆರವಿನ ನಿರೀಕ್ಷೆಯಲ್ಲಿದ್ದೇವೆ ಎಂದರು.

mysore/heritage/buildings/jayalakshmi-vilas-mansion/university-of-mysore/uom

ತಜ್ಞರ ಸಲಹೆ ಪಡೆದು ಕ್ರಮ :

ಜಯಲಕ್ಷ್ಮಿ ವಿಲಾಸ ಬಂಗಲೆಯನ್ನು ನವೀಕರಿಸುವ ಮುನ್ನ ಪಾರಂಪರಿಕ ತಜ್ಞರನ್ನು ಸಂಪರ್ಕಿಸಿ ಅವರ ಸಲಹೆ ಪಡೆದು ಮುಂದಡಿ ಇಡಲಾಗುತ್ತದೆ. ಈ ಹಿಂದೆಯೇ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಕಟ್ಟಡ ನವೀಕರಣಕ್ಕೆ 10 ಕೋಟಿ ರೂ.ಗಳ ವೆಚ್ಚದಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈಗ ಮತ್ತೆ ಅದನ್ನು ಮರುಸಲ್ಲಿಕೆ ಮಾಡಲಾಗುವುದು ಎಂದು ಕುಲಪತಿ ಪ್ರೊ.ಹೇಮಂತ್ ಕುಮಾರ್ ಸ್ಪಷ್ಟಪಡಿಸಿದರು.

key words : mysore/heritage/buildings/jayalakshmi-vilas-mansion/university-of-mysore/uom

ENGLISH SUMMARY :

The University of Mysore has come forward to make a permanent restoration to the Jayalakshmi Vilas Bungalow, one of the heritage buildings, for which a proposal of Rs 10 crore will be sent to the government.
Prior to renovating the Jayalakshmi vilas mansion, consult a heritage consultant and get advice. Earlier, the Department of Tourism had proposed a Rs 10 crore project for renovation of the building. The Chancellor, Prof. Hemant Kumar, made it clear.