ಮೈಸೂರು,ಜುಲೈ,13,2021(www.justkannada.in): ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಪೊಲೀಸ್ ಬಡಾವಣೆ ಪ್ರಕೃತಿಯ ಕೊಡುಗೆಯಂತಿದ್ದು, ಇದರ ಸಮಗ್ರ ಅಭಿವೃದ್ಧಿಗೆ ಬದ್ದವಾಗಿರುವುದಾಗಿ ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಡಿ ಅಂದಾಜು 50 ಲಕ್ಷ ರೂಪಾಯಿ ವೆಚ್ಚದಲ್ಲಿ ಪೊಲೀಸ್ ಬಡಾವಣೆಯ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ 80 ಅಡಿ ರಸ್ತೆಯಲ್ಲಿ ಮಂಗಳವಾರ ಗುದ್ದಲಿ ಪೂಜೆ ನೆರವೇರಿಸಿ ಶಾಸಕ ಜಿ.ಟಿ ದೇವೇಗೌಡ ಮಾತನಾಡಿದರು.
ಇದೇ ವೇಳೆ ಬಡಾವಣೆಯ ರಸ್ತೆಗಳು, ತಿಪ್ಪಯ್ಯನಕೆರೆ, ಉದ್ಯಾನವನಗಳ ಅಭಿವೃದ್ಧಿಯಾಗಬೇಕು ಎಂಬ ನಿವಾಸಿಗಳ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ಖಂಡಿತವಾಗಿ ಈ ಬಡಾವಣೆಯನ್ನು ಮಾದರಿ ಬಡಾವಣೆಯನ್ನಾಗಿ ಮಾಡುವ ಚಿಂತನೆ ಇದೆ ಎಂದರು.
ಬಡಾವಣೆಗೆ ಮೂಲಸೌಕರ್ಯ ಸೇರಿದಂತೆ ಎಲ್ಲಾ ಬಗೆಯ ಅಭಿವೃದ್ಧಿ ಕಾರ್ಯ ಕೈಗೊಳ್ಳುವ ನಿಟ್ಟಿನಲ್ಲಿ ಸದ್ಯದಲ್ಲೇ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳೊಂದಿಗೆ ಖುದ್ದಾಗಿ ಭೇಟಿ ನೀಡಿ ಯೋಜನೆಗಳ ಅನುಷ್ಠಾನ ಮಾಡಲಾಗುವುದು ಎಂದರು.
ಈ ವೇಳೆ ಸಮಾನ ಮನಸ್ಕರ ವೇದಿಕೆ ಅಧ್ಯಕ್ಷ ಸಿ.ಎಂ.ಥಾಮಸ್, ಪದಾಧಿಕಾರಿಗಳಾದ ಮನುಕುಮಾರ್, ಮೋಹನರಾವ್, ಅಶೋಕ್, ರೇವಣ್ಣ, ಜಯಪಾಲನ್, ಸಿದ್ದರಾಜೇಗೌಡ, ಮೋಹನ್ ಕುಮಾರ್, ಲೀಲಾ ಶಿವಕುಮಾರ್, ವೀಣಾ ಕಾಮತ್ ಮತ್ತಿತರರು ಇದ್ದರು.
Key words: mysore- holistic -development – police –wards-mysore- MLA- GT Deve Gowda.