ಮೈಸೂರು, ಅಕ್ಟೋಬರ್ 15, 2023 (www.justkannada.in ): ಮೈಸೂರು ಮಹಾರಾಜರ ಕಾಲದಿಂದಲೂ ಕೂಡ ಕನ್ನಡ ನಾಡಿನಲ್ಲಿ ಕಲೆ. ಸಂಸ್ಕೃತಿ ಸಾಹಿತ್ಯಕ್ಕೆ ಹೆಚ್ಚಿನ ರೀತಿಯ ಪ್ರೋತ್ಸಾಹವನ್ನು ನೀಡುತ್ತಾ ಬಂದಿದೆ. ಸಾಹಿತ್ಯ ಸಂಸ್ಕೃತಿ ಹೆಸರಾದ ಜಿಲ್ಲೆ ಮೈಸೂರು. ಮೈಸೂರು ಸಾಹಿತ್ಯ ನೆಲೆಯ ತವರೂರು ಎಂದರೆ ತಪ್ಪಾಗಲಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ನಾಡಹಬ್ಬ ಮೈಸೂರು ದಸರಾ ಪ್ರಯುಕ್ತ ಅರಮನೆ ವೇದಿಕೆಯಲ್ಲಿ ಆಯೋಜಿಸಿದ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕರ್ನಾಟಕ ಸರ್ಕಾರವು ಇದುವರೆಗೂ ಕೂಡ 30 ಪ್ರಶಸ್ತಿಗಳನ್ನು ಸಂಗೀತ ಕ್ಷೇತ್ರದಲ್ಲಿ ಸಾಧನೆಗೈದ ಪ್ರಮುಖರಿಗೆ ನೀಡುತ್ತಾ ಬಂದಿದೆ. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಸಂಗೀತ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಗೈದ ಸಾಧಕರಿಗೆ ನೀಡುವ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿಯನ್ನು ಮೈಸೂರಿನವರೇ ಆದ ಡಾ. ಪದ್ಮ ಮೂರ್ತಿಯವರಿಗೆ ನೀಡುತ್ತಿರುವುದು ನಮಗೆ ಹೆಮ್ಮೆಯ ವಿಷಯ ಸಂಗತಿ ಎಂದರು.
ಕರ್ನಾಟಕ ಸರ್ಕಾರವು ದಸರಾ ಸಂಗೀತ ಕ್ಷೇತ್ರದಲ್ಲಿ ಸಾಧನೆ ಗೈದ ಮಹಾನಿಯರಿಗೆ ನೀಡುತ್ತಿರುವ ಈ ಪ್ರಶಸ್ತಿಯನ್ನು ಮೊದಲಬಾರಿಗೆ ಗಾನ ಗಂಧರ್ವ ಪುಟ್ಟರಾಜು ಗವಾಯಿ ಅವರಿಗೆ ನೀಡಿತ್ತು, ಕಲಾವಿದರನ್ನು ಪ್ರೋತ್ಸಹಿಸಲು ವಿವಿಧ ಕಾರ್ಯಕ್ರಮಗಳನ್ನು ನೀಡಿ ಅವರಿಗೆ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ.
ಮೈಸೂರಿನ ಮಹಾರಾಜರ ಕಾಲದಲ್ಲಿ ಕಲೆ ಸಾಹಿತ್ಯ ಸಂಗೀತಗಳಿಗೆ ಯಾವ ರೀತಿ ಪ್ರೋತ್ಸಾಹವನ್ನು ನೀಡುತ್ತಿತೋ ಅದೇ ರೀತಿ ನಮ್ಮ ಸರ್ಕಾರಗಳು ಕೂಡ ವಿವಿಧ ಕ್ಷೇತ್ರಗಳಿಗೆ ಪ್ರೋತ್ಸಾಹವನ್ನು ನೀಡುತ್ತಿದೆ ಎಂದರು.
ಸಾಧಕರಾದ ಪದ್ಮಾ ಮೂರ್ತಿಯವರ ತಂದೆಯು ನಮ್ಮ ಹಿರಿಯ ವಕೀಲರಾಗಿದ್ದರು, ಪದ್ಮ ಮೂರ್ತಿಯವರ ದೀರ್ಘಕಾಲ ಸಂಗೀತ ಸೇವೆಯನ್ನು ಗುರುತಿಸಿ ಸರ್ಕಾರವು ಅವರಿಗೆ ಪ್ರಶಸ್ತಿಯನ್ನು ನೀಡುವುದು ಶ್ಲಾಘನೀಯ ವಿಷಯವಾಗಿದೆ.
ನಮ್ಮ ನಾಡ ಹಬ್ಬ ಮೈಸೂರು ದಸರಾಕ್ಕೆ ಯಾವುದೇ ಕೊರತೆಯಾಗದಂತೆ ಮೈಸೂರು ಜಿಲ್ಲಾಡಳಿತ ಮತ್ತು ಜಿಲ್ಲೆಯ ಸಚಿವರು ಶ್ರಮಿಸಿ ಸಾಂಸ್ಕೃತಿಕ ಮೆರುಗು ನೀಡುವ ಕಾರ್ಯಕ್ರಮಗಳನ್ನು ರಚಿಸಿದ್ದಾರೆ.
ನಾಡ ಹಬ್ಬ ಮೈಸೂರು ದಸರಾ 9 ದಿನಗಳ ಕಾಲ ನಡೆಯಲಿದ್ದು, ಪ್ರತಿಯೊಬ್ಬರು ಕೂಡ ಮೈಸೂರು ದಸರಾವನ್ನು ಅನುಭವಿಸಿ ಎಂದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ತಂಗಡಗಿ ಶಿವರಾಜ್ ಸಂಗಪ್ಪ ನವರು ಮಾತನಾಡಿ ದಸರಾ ಎಂದರೆ ತಾಯಿ ಚಾಮುಂಡೇಶ್ವರಿ ದುಷ್ಟ ಶಕ್ತಿಯನ್ನು ಸಂಹರಿಸಿದ ಇತಿಹಾಸವನ್ನು ಸಾರುವ ಐತಿಹಾಸಿಕ ಇತಿಹಾಸ ದಸರಾ. ಇದುವರೆಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ನಡೆಯಿತ್ತಿರುವ ಪ್ರತಿಯೊಂದು ಕಾರ್ಯಕ್ರಮಕ್ಕೂ ಕೂಡ ಉತ್ಸವದಿಂದ ಪ್ರೋತ್ಸಾಹವನ್ನು ನಮ್ಮ ಮುಖ್ಯ ಮಂತ್ರಿಗಳು ನೀಡುತ್ತಾ ಬಂದಿದ್ದಾರೆ ಎಂದರು.
ಹಿಂದೆ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದ ಪ್ರಮುಖ ವ್ಯಕ್ತಿ ನಮ್ಮ ಮೈಸೂರಿನವರೇ ಆದ ದೇವರಾಜ ಅರಸುರವರು. ಅದರಂತೆ ಕರ್ನಾಟಕ ರಾಜ್ಯ ಎಂದು 50 ವರ್ಷ ತುಂಬಿದ ಸಂದರ್ಭದಲ್ಲಿ ನಮ್ಮ ಜೊತೆಯಲ್ಲಿರುವವರು ನಾಡಿನ ಮುಖ್ಯಮಂತ್ರಿ, ಸಿದ್ದರಾಮಯ್ಯನವರು. ಕರ್ನಾಟಕಕ್ಕೆ 50 ವರ್ಷ ಸಂಭ್ರಮವನ್ನು ಒಂದು ವರ್ಷಗಳ ಕಾಲ ಆಚರಿಸುವಂತೆ ಸಲಹೆಯನ್ನು ನೀಡಿದ್ದಾರೆ. ಕನ್ನಡ ನೆಲ ಜಲ ಭಾಷೆಯ ಕುರಿತು ಸಂಪೂರ್ಣ ವರ್ಷವಿಡಿ ತಿಳಿಸುವ ಕಾರ್ಯಕ್ರಮಗಳನ್ನು ಇಲಾಖೆಯಿಂದ ಹಮ್ಮಿಕೊಳ್ಳಲಾಗುವುದು. ನಮ್ಮ ಸರ್ಕಾರದಿಂದ ಈ ಭಾರಿ ನವೆಂಬರ್ 1 ರಿಂದ ಪ್ರಾರಂಭವಾಗುವ ಈ ಹಬ್ಬವು ವರ್ಷವಿಡೀ ಆಚರಿಸಲಾಗುವುದು ಎಂದು ತಿಳಿಸಿದರು.
ಮೈಸೂರು ಜಿಲ್ಲೆಯು ನಾಡು ನುಡಿ ಸಂಸ್ಕೃತಿಯನ್ನು ವಿವಿಧ ಭಾಗಗಳಿಗೆ ಸಾರುತ್ತಾ ಬಂದಿದೆ , ವಿಜಯನಗರ ಅರಸರ ಕಾಲದಲ್ಲಿನ ವೈಭವವನ್ನು ದಸರಾ ಸಂಧರ್ಭದಲ್ಲಿ ನಾವು ಕಾಣಬಹುದಾಗಿದೆ ಎಂದರು .
ರಾಜ್ಯ ಸಂಗೀತ ವಿದ್ವಾನ ಪ್ರಶಸ್ತಿ ವಿಜೇತೆಯಾದ ಡಾ. ಪದ್ಮ ಮೂರ್ತಿ ಅವರು ಮಾತನಾಡಿ,ನಾನು ಜನಿಸಿದ ಮೈಸೂರಿನಲ್ಲೆ ಪ್ರಶಸ್ತಿಯನ್ನು ಪಡೆದಿರುವುದು ನಮ್ಮ ಸೌಭಾಗ್ಯ. ಕರ್ನಾಟಕ ಸಂಗೀತಕ್ಕೆ ನಾನು ಸಲ್ಲಿಸಿರುವ ಅಳಿಲು ಸೇವೆಯನ್ನು ಗುರುತಿಸಿ ನನಗೆ ನೀಡಿರುವ ಗೌರವ ಅಪಾರವಾದದ್ದು. ನನ್ನ ತಂದೆ ತಾಯಿ ನನಗೆ ನೀಡಿದ ವಿದ್ಯಾದಾನ ಇದು ನಾನು ಈ ವೇದಿಕೆ ಮೇಲೆ ನಿಲ್ಲುವಂತೆ ಮಾಡಿದೆ. ಸಂಗೀತಕ್ಕೆ ಪ್ರೋತ್ಸಾಹವನ್ನು ನೀಡಿದ ಪ್ರತಿಯೊಬ್ಬರಿಗೂ ಕೂಡ ನನ್ನ ಧನ್ಯವಾದಗಳು ಎಂದರು.
ಕಾರ್ಯಕ್ರಮದಲ್ಲಿ ಸಂಗೀತದಲ್ಲಿ ಸಾಧನೆ ಗೈದ ಡಾ. ಪದ್ಮ ಮೂರ್ತಿ ಅವರಿಗೆ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಪಶು ಸಂಗೋಪನಾ ಹಾಗೂ ರೇಷ್ಮೆ ಇಲಾಖೆಯ ಸಚಿವರಾದ ಕೆ ವೆಂಕಟೇಶ್, ಇಂಧನ ಇಲಾಖೆಯ ಸಚಿವರಾದ ಕೆ ಜೆ ಜಾರ್ಜ್, ಮೈಸೂರು ಮಹಾನಗರ ಪಾಲಿಕೆಯ ಮಹಾ ಪೌರರಾದ ಶಿವಕುಮಾರ್, ಶಾಸಕರಾದ ತನ್ವೀರ್ ಸೇಠ್, ಶ್ರೀವತ್ಸ, ಡಿ ರವಿಶಂಕರ್, ವಿಧಾನ ಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ, ಡಿ ತಿಮ್ಮಯ್ಯ, ಜಿಲ್ಲಾಧಿಕಾರಿಗಳಾದ ಡಾ. ಕೆ ವಿ ರಾಜೇಂದ್ರ, ಉಪ ಮಹಾ ಪೌರರಾದ ಡಾ ರೂಪ, ಮತ್ತು ದಸರಾ ಸಮಿತಿಯ ವಿಶೇಷ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ವಿವಿಧ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.