ಮೈಸೂರು,ಅ,22,2019(www.justkannada.in): ಕರ್ತವ್ಯ ನಿರ್ವಹಣೆ ವೇಳೆ ಜನಪ್ರತಿನಿಧಿಗಳೊಂದಿಗೆ ಅಗೌರವ ತೋರಿದ ಆರೋಪ ಮತ್ತು ನಿಯಮ ಬಾಹಿರ ಚಟುವಟಿಕೆಗಳು ನಡೆಯಲು ಆಸ್ಪದ ನೀಡಿದ ಆರೋಪ ಸಾಭೀತಾದ ಹಿನ್ನೆಲೆ ಮೈಸೂರು ತಾಲ್ಲೂಕು ಹೊಸಹುಂಡಿ ಗ್ರಾಮಪಂಚಾಯತ್ ನ ಪಿಡಿಒ ಅಮ್ಜದ್ ಪಾಷಾ ಅವರನ್ನ ಅಮಾನತು ಮಾಡಲಾಗಿದೆ.
ಹೊಸಹುಂಡಿ ಗ್ರಾಮಪಂಚಾಯತ್ ಸದಸ್ಯ ಶಿವಬೀರ ಎಂಬುವವರು ಪಿಡಿಓ ಕಚೇರಿಯೊಳಗೆ ಸ್ನೇಹಿತರ ಜತೆ ಸೇರಿ ನಿಯಮಬಾಹಿರ ಚಟುವಟಿಕೆಗಳನ್ನ ನಡೆಸಿದ್ದರು, ಇದರ ಜತೆಗೆ ಜತೆಗೆ ಗ್ರಾಮಪಂಚಾಯತ್ ಅಧ್ಯಕ್ಷೆ ನಳಿನಿ, ಸದಸ್ಯರಾದ ಬಸವರಾಜು, ಸೋಮಣ್ಣ ನಡುವೆ ಜಗಳವಾಗಿತ್ತು. ಈ ಎರಡು ಘಟನೆಗಳು ಕಚೇರಿಯ ಸಿ.ಟಿ ಟಿವಿ ಫೂಟೇಜ್ ನಲ್ಲಿ ರೆಕಾರ್ಡ್ ಆಗಿತ್ತು. ಈ ಬಗ್ಗೆ ಆರ್ ಟಿಐ ಕಾರ್ಯಕರ್ತ ಎಂ. ರವೀಂದ್ರ ಮತ್ತು ಗ್ರಾಮಪಂಚಾಯತ್ ಅಧ್ಯಕ್ಷರು ದೂರು ನೀಡಿದ್ದರು. ಈ ಕುರಿತು ಸೆಪ್ಟಂಬರ್ 23 ರಂದು ಜಸ್ಟ್ ಕನ್ನಡ ಡಾಟ್ ಇನ್ ಸುದ್ದಿ ಪ್ರಸಾರ ಮಾಡಿತ್ತು.
ಆರ್ ಟಿ ಐ ಕಾರ್ಯಕರ್ತ ರವೀಂದ್ರ ಅವರು ದೂರು ನೀಡಿದ ಹಿನ್ನೆಲೆಯಲ್ಲಿ ಈ ಕುರಿತು ಮಧ್ಯಂತರ ತನಿಖೆಗೆ ಆದೇಶಿಸಲಾಗಿತ್ತು. ಇದೀಗ ತನಿಖೆಯ ವೇಳೆ ಆರೋಪ ಸಾಬೀತಾಗಿದ್ದು, ಕರ್ತವ್ಯಲೋಪವೆಸಗಿದ ಹೊಸಹುಂಡಿ ಗ್ರಾಮಪಂಚಾಯತ್ ಪಿಡಿಓ ಅಮ್ಹದ್ ಪಾಷಾ ಅವರನ್ನ ಅಮಾನತು ಮಾಡಿ ಮೈಸೂರು ಜಿ.ಪಂ ಕಾರ್ಯನಿರ್ವಾಹಕ ಅಧಿಕಾರಿ ಜ್ಯೋತಿ ಅವರು ಆದೇಶ ಹೊರಡಿಸಿದ್ದಾರೆ.
ಜನಪ್ರತಿನಿಧಿಗಳ ವಿರುದ್ದವೂ ಕ್ರಮಕ್ಕೆ ಆರ್,ಟಿ ಐ ಕಾರ್ಯಕರ್ತ ರವೀಂದ್ರ ಒತ್ತಾಯ…..
ಈ ಬಗ್ಗೆ ಜಸ್ಟ್ ಕನ್ನಡ ಡಾಟ್ ಇನ್ ಜತೆ ಮಾತನಾಡಿದ ಆರ್.ಟಿಐ ಕಾರ್ಯಕರ್ತ ಆರ್. ರವೀಂದ್ರ, ಹೊಸಹುಂಡಿ ಗ್ರಾ.ಪಂ ಸದಸ್ಯರೊಬ್ಬರು ನಿಯಮ ಬಾಹಿರ ಚಟುವಟಿಕೆ ನಡೆಸಲು ಪಿಡಿಓ ಕಚೇರಿ ಬಿಟ್ಟುಕೊಟ್ಟಿದ್ದರು. ಈ ಸಂಬಂಧ ನಾನು ಮತ್ತು ಅಧ್ಯಕ್ಷರು ದೂರು ನೀಡಿದ್ದವು. ದೂರಿನನ್ವಯ ಪಿಡಿಒ ಅವರನ್ನ ಮಾತ್ರ ಅಮಾನತು ಮಾಡಲಾಗಿದೆ.
ಕಚೇರಿಯಲ್ಲಿ ಅಕ್ರಮ ಚಟುವಟಿಕೆ ನಡೆಸುತ್ತಿದ್ದ ಗ್ರಾಮಪಂಚಾಯತ್ ಸದಸ್ಯರ ವಿರುದ್ದವೂ ಪಂಚಾಯತ್ ರಾಜ್ ಕಾಯ್ದೆ ಸೆಕ್ಷನ್.43(ಎ) ಅಡಿ ಕ್ರಮವಹಿಸಿ ಸದಸ್ಯತ್ವ ರದ್ಧು ಮಾಡಬೇಕು. ಹಾಗೆಯೇ ಗ್ರಾಪಂ ಸದಸ್ಯರ ಜತೆ ಅವರೊಂದಿಗಿದ್ದ ಇನ್ನಿಬ್ಬರು ಸ್ನೇಹಿತರು ಕಚೇರಿಯಲ್ಲಿ ಸರ್ಕಾರಿ ದಾಖಲೆಗಳನ್ನ ಅನಧಿಕೃತವಾಗಿ ಪರಿಶೀಲನೆ ಮಾಡಿರುವುದು ಸಿಸಿ ಟಿವಿಯಲ್ಲಿ ಕಂಡು ಬಂದಿದೆ. ಹೀಗಾಗಿ ಅವರ ಉದ್ದೇಶವೇನು ಎಂಬುದನ್ನ ತನಿಖೆಗೊಳಪಡಿಸಲು ಅವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಎಂದು ಸಿಇಓ ಜ್ಯೋತಿ ಅವರಿಗೆ ದೂರು ನೀಡಿರುವುದಾಗಿ ಆರ್.ಟಿಐ ಕಾರ್ಯಕರ್ತ ಆರ್. ರವೀಂದ್ರ ಜಸ್ಟ್ ಕನ್ನಡ ಡಾಟ್ ಇನ್ ಗೆ ತಿಳಿಸಿದ್ದಾರೆ.
Key words: mysore- hosahundi-gramapanchayath-PDO-suspend