ವೈದ್ಯರ ಕೊರತೆ ನೀಗಿಸಲು ಕ್ರಮ: ಆಸ್ಪತ್ರೆ ಎಂದರೆ ದೇವಸ್ಥಾನದ ರೀತಿ, ಎಲ್ಲಾ ಆಸ್ಪತ್ರೆಗಳಲ್ಲಿ ದೇವರ ಪೂಜೆ ಮಾಡಿ-ಆರೋಗ್ಯ ಸಚಿವ ಶ್ರೀರಾಮುಲು…

ಮೈಸೂರು,ಜ,23,2020(www.justkannada.in): ಆಸ್ಪತ್ರೆ ಎಂದರೆ ದೇವಸ್ಥಾನದ ರೀತಿ, ಹೀಗಾಗಿ ಎಲ್ಲ ಆಸ್ಪತ್ರೆಗಳಲ್ಲಿ ದೇವರ ಪೂಜೆ ಮಾಡಿ ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದರು.

ತಾಯಿ ಮತ್ತು ಮಕ್ಕಳ ಆಸ್ಪತ್ರೆ ಹಾಗೂ ಇತರ ವಿವಿಧ ಕಾಮಗಾರಿಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು. 2009 ರಲ್ಲಿ ಆರೋಗ್ಯ ಸಚಿವನಾಗಿದ್ದೆ. ನಾನು‌ ಎಂ.ಬಿಬಿಎಸ್ ವೈದ್ಯನಲ್ಲ. ಆದ್ರೆ ಭಗವಂತನ ಆಶೀರ್ವಾದದಿಂದ ಈ ಬಾರಿ‌ ಕೂಡ ಮುಖ್ಯಮಂತ್ರಿ ಯಡಿಯೂರಪ್ಪನವರು ಆರೋಗ್ಯ ಖಾತೆ ನೀಡಿದ್ದಾರೆ. ಸಾಕಷ್ಟು‌ ಸುಧಾರಣೆಯನ್ನ ನಾನು ಮಾಡಿದ್ದೇವೆ. ಆದರೂ ಖಾಸಗಿ ಆಸ್ಪತ್ರೆಗೆ ಹೋದ್ರೆ ಸೌಲಭ್ಯಗಳು ಸರ್ಕಾರಿ‌ ಆಸ್ಪತ್ರೆಯಲ್ಲಿ ಸಿಗೊಲ್ಲ ಎಂಬ ಆರೋಪ ಮಾಡ್ತಾರೆ. ಆದ್ರೆ ಅದನ್ನ ಸರಿ‌ಮಾಡುವ‌ ಕೆಲಸವನ್ನು ನಾನು ಮಾಡ್ತೀನಿ. ಅದಕ್ಕಾಗಿ ಪ್ರಯತ್ನ ಮಾಡ್ತಲೇ ಇದ್ದೀನಿ ಎಂದು ಭರವಸೆ ನೀಡಿದರು.

ಶಾಸಕ ಅನಿಲ್ ಚಿಕ್ಕಮಾದು ತಂದೆ ಚಿಕ್ಕಮಾದು ನಮ್ಮ ಜೊತೆಗೆ ಅಭಿವೃದ್ಧಿಗೆ ಕೈ ಜೋಡಿಸಿದ್ರು. ಈ ಹಿಂದೆ 108 ಆರೋಗ್ಯ ಕವಚ ಜಾರಿಗೆ ತಂದಿದ್ದೆ. ಈಗ ಕೂಡ ಜನರಿಗೆ ಸುಲಭವಾಗಿ ಆರೋಗ್ಯ ಸೇವೆ ಸಿಗಬೇಕು. ಅದಕ್ಕೆ ಪ್ರಯತ್ನ ಮಾಡ್ತಿದ್ದಾರೆ. ನಾನು ಹೋದ ಕಡೆಯಲ್ಲೆಲ್ಲಾ ಆಸ್ಪತ್ರೆಯಲ್ಲಿ ವಾಸ್ತವ್ಯ ಮಾಡ್ತಾ ಇದ್ದೀನಿ. ಇದು ಬೇರೆ ಮುಂದೆ ಬರುವವರಿಗೂ ಮಾದರಿಯಾಗಬೇಕು. ನಾನು ಹೋದಾಗ ಕನಿಷ್ಟ ಆಸ್ಪತ್ರೆಯಲ್ಲಿ ಸ್ವಚ್ಛತೆ ಕಾಪಾಡ್ತಾರೆ. ಆಗ ಮುಂದೆ ಕೂಡ ನಾವು ಆಸ್ಪತ್ರೆ ಸ್ವಚ್ಛವಾಗಿ ಇಡುವ ಮನೋಸ್ಥಿತಿ ಬೆಳೆಯಬೇಕು. ಆ ಮನೋಸ್ಥಿತಿ ಹುಟ್ಟು ಹಾಕುವ ಕೆಲಸವನ್ನ ಮಾಡುತ್ತಿದ್ದೇನೆ. ವೈದ್ಯರ ಜೊತೆಗೆ ನಾವು ಹೊಂದಾಣಿಕೆ ಮಾಡಿಕೊಳ್ಳುವ ಅಗತ್ಯ ಇಲ್ಲ ಎಂದು ಶ್ರೀರಾಮುಲು ತಿಳಿಸಿದರು.

ಈಗ ರಾಜ್ಯದಲ್ಲಿ ವೈದ್ಯರ ಕೊರತೆ ಇದೆ. ಹಿಂದೆ ಕೆಪಿಎಸ್ ಸಿ‌ ಮೂಲಕ ವೈದ್ಯರ ನೇಮಕ ಆಗುತ್ತಿತ್ತು. ಇನ್ನು ಮುಂದೆ ನೇರ ನೇಮಕಾತಿಗೆ ಮುಂದಾಗಲು ಸಂಪುಟ ತೀರ್ಮಾನ ಮಾಡಿದೆ. ವೈದ್ಯರ ನೇರ ನೇಮಕಾತಿಯಿಂದ ವೈದ್ಯರ ಕೊರತೆ ನೀಗಿಸಲಾಗುವುದು. ಈ ವಿಚಾರದಲ್ಲಿ ಮೊದಲ ಆದ್ಯತೆ ಚಾಮರಾಜನಗರ ಕ್ಷೇತ್ರಕ್ಕೆ ನೀಡಲಾಗುವುದು ಎಂದು ಶ್ರೀರಾಮುಲು ಹೇಳಿದರು.

ಅಂಗನವಾಡಿ ಆಶಾ ಕಾರ್ಯಕರ್ತರು ಸರ್ಕಾರದ ಸೌಲಭ್ಯಗಳನ್ನು ಜನರಿಗೆ ತಲುಪಿಸು  ಕೆಲಸ ಮಾಡ್ತಿದ್ದಾರೆ. ಹಾಗಾಗಿ ಆರೋಗ್ಯ ಇಲಾಖೆಯಲ್ಲಿ ಉಳಿಕೆ ಹಣವನ್ನ ಆಶಾ ಕಾರ್ಯಕರ್ತರಿಗೆ ನೀಡಲಾಗುವುದು ಎಂದು  ಭರವಸೆ ನೀಡಿದ ಸಚಿವ ಶ್ರೀರಾಮುಲು,  24 ಗಂಟೆ ಸರ್ಕಾರಿ ಆಸ್ಪತ್ರೆಗಳಲ್ಲಿ ಕ್ಯಾಂಟೀನ್ ಹಾಗೂ ದಾನಿಗಳ ಸಹಾಯದಿಂದ ರೋಗಿಗಳ ಬಂಧುಗಳು ಉಳಿಯಲು ವಸತಿ ವ್ಯವಸ್ಥೆ ಮಾಡಲಾಗುವುದು. ಎಲ್ಲ ಆಸ್ಪತ್ರೆಗಳಲ್ಲಿ ಗರ್ಭಕೋಶ ಕ್ಯಾನ್ಸರ್ ಪರೀಕ್ಷೆಗಾಗಿ 15 ಕೋಟಿ ರೂ. ಮಂಜೂರು ಮಾಡಲಾಗಿದೆ. ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ರಕ್ತ ಶೇಖರಣೆ ಕೇಂದ್ರಗಳನ್ನು ಸ್ಥಾಪಿಸಲು 15 ಕೋಟಿ ರೂ. ನೀಡಲಾಗಿದೆ. ಮಕ್ಕಳ ಸಾವಿನ ಪ್ರಮಾಣ ತಡೆಯಲು, ದೇಹದಲ್ಲಿ ಕಬ್ವಿಣ ಪ್ರಮಾಣ ಹೆಚ್ಚಿಸಲು ಕ್ರಮ ಕೈಗೊಂಡು 15 ಕೋಟಿ ರೂ. ನೀಡಲಾಗಿದೆ. ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಕ್ರೀಡಾಪಟುಗಳಿಗೆ ಚಿಕಿತ್ಸೆ ನೀಡಲು 80 ಕೋಟಿ ರೂ.‌ಮಂಜೂರು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಆಸ್ಪತ್ರೆ ಎಂದರೆ ದೇವಸ್ಥಾನದ ರೀತಿ. ಅದಕ್ಕಾಗಿ ಎಲ್ಲ ಆಸ್ಪತ್ರೆಗಳಲ್ಲಿ ದೇವರ ಪೂಜೆ ಮಾಡಿ. ಕೆಲವರು ಸರ್ಕಾರಿ ಕೆಲಸ ಮಾಡ್ತಾ ಖಾಸಗಿ ಆಸ್ಪತ್ರೆಗಳಲ್ಲಿ‌ ಕೂಡ ಕೆಲಸ ಮಾಡ್ತಿದ್ದಾರೆ.  ಅಂತಹ ವೈದ್ಯರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ  ಶ್ರೀರಾಮುಲು  ಎಚ್ಚರಿಕೆ ನೀಡಿದರು.

Key words: mysore-  Hospital – temple- worship -Health Minister- Sriramulu.