ಮೈಸೂರು,ಜೂನ್,3,2021(www.justkannada.in): ಮೈಸೂರು ಭೂ ಕಬಳಿಕೆಗೆ ಮೇಜರ್ ಟ್ವಿಸ್ಟ್ ಸಿಕ್ಕಿದ್ದು ಮುಡಾ ಆಯುಕ್ತ ನಟೇಶ್ ಮಾಧ್ಯಮಗಳ ಮುಂದೆ ಅಕ್ರಮದ ಬಗ್ಗೆ ಒಪ್ಪಿಕೊಂಡಿದ್ದಾರೆ.
ಜಿಲ್ಲಾಧಿಕಾರಿಗೆ ಕಡತಗಳನ್ನು ಮುಡಾ ಆಯುಕ್ತ ನಟೇಶ್ ಮಂಡಿಸಿದರು. ಈ ಸಂಬಂಧ ಮಾಧ್ಯಮಗಳ ಜತೆ ಮಾತನಾಡಿರುವ ಮುಡಾ ಆಯುಕ್ತ ನಟೇಶ್, ಕೇರಗಳ್ಳಿ ಸರ್ವೇ ನಂ. 155ರಲ್ಲಿ ಒಂದಷ್ಟು ಲೋಪದೋಷಗಳಾಗಿವೆ. ಆಕಾರ್ ಬಂದ್ ವಿಸ್ತೀರ್ಣಕ್ಕಿಂತ ಆರ್ಟಿಸಿಯಲ್ಲಿ ಹೆಚ್ಚುವರಿ ಭೂಮಿ ಇದೆ. ಭೂಮಿ ಅನುಭವದಲ್ಲಿ ಇಲ್ಲದವರೂ ಈಗಾಗಲೇ ಪರಿಹಾರ ಪಡೆದುಕೊಂಡಿದ್ದಾರೆ. ಆರ್.ಟಿ. ಲೇಔಟ್ನ ಲೋಪದೋಷಗಳು ಮುಡಾ ಗಮನಕ್ಕೆ ಬಂದಿವೆ. ಇದುವರೆಗೆ 80 ಎಕರೆಗೆ ಮಾತ್ರ ಪರಿಹಾರ ಕೊಟ್ಟಿದ್ದೇವೆ. ಪರಿಹಾರ ಕೋರಿರುವ ಅರ್ಜಿಗಳನ್ನೂ ಪುನರ್ ಪರಿಶೀಲನೆ ಮಾಡುತ್ತಿದ್ದೇವೆ. ಭೂ ಅಕ್ರಮದ ಬಗ್ಗೆ ಮುಡಾದಿಂದ ತನಿಖೆ ಮಾಡಲಾಗುವುದು ಎಂದು ತಿಳಿಸಿದರು.
ಯಡಹಳ್ಳಿ ಸರ್ವೇ ನಂ. 69ರ ಸರ್ಕಾರಿ ಜಾಗದಲ್ಲಿ ಲೇಔಟ್ ನಿರ್ಮಾಣ ವಿಚಾರ ಸಂಬಂಧ ಮೈಸೂರು ಭೂ ಅಕ್ರಮಕ್ಕೆ ಮತ್ತೊಂದು ತಿರುವು ಸಿಕ್ಕಿದ್ದು, ಅಕ್ರಮ ಬಯಲಾಗುತ್ತಿದಂತೆ ಮುಡಾ ಹಾಗೂ ಕಂದಾಯ ಇಲಾಖೆ ನಡುವೆ ಜಟಾಪಟಿ ಶುರುವಾಗಿದ್ದು ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಡಾ ಆಯುಕ್ತ ನಟೇಶ್, ಸರ್ಕಾರಿ ಭೂಮಿ ಪರಿಶೀಲಿಸಬೇಕಾಗಿದ್ದು ಕಂದಾಯ ಇಲಾಖೆ ಜವಾಬ್ದಾರಿ. ಭೂ ಪರಿವರ್ತನೆ ಮಾಡುವಾಗಲೇ ಕಂದಾಯ ಇಲಾಖೆ ಅಧಿಕಾರಿಗಳು ಇದೆಲ್ಲವನ್ನೂ ಗಮನಿಸಬೇಕಿತ್ತು.ಕಂದಾಯ ಇಲಾಖೆ ಭೂ ಪರಿವರ್ತನೆ ಮಾಡಿದ ಮೇಲೆಯೇ ಭೂಸ್ವಾಧೀನ ಪ್ರಕ್ರಿಯೆ ನಡೆಯೋದು. ಭೂಮಿಗೆ ಸಂಬಂಧಪಟ್ಟಂತೆ ಯಾವುದೇ ವಿವಾದ ಇಲ್ಲ ಅಂತ ಖಚಿತ ಪಡಿಸಿಕೊಂಡ ಮೇಲಷ್ಟೇ ಮುಡಾ ಬಡಾವಣೆಗೆ ಪ್ಲ್ಯಾನ್ ಅನುಮೋದನೆ ಮಾಡುತ್ತೆ. ಆದ್ದರಿಂದ ಈ ವಿಚಾರದಲ್ಲಿ ಮುಡಾ ವತಿಯಿಂದ ಯಾವುದೇ ದೋಷ ಆಗಿಲ್ಲ ಎಂದು ಹೇಳಿದರು.
Key words: Mysore – Illegal-Land -Muda Commissioner -Natesh