ಮೈಸೂರು, ಅ.17, 2019 : (www.justkannada.in news ) : ವಿವಿಧ ಕ್ಷೇತ್ರಗಳ ಪರಿಣತರು ಸಂಘಟಿತವಾಗಿ ಸಂಶೋಧನಾ ಕಾರ್ಯ ನಡೆಸಿದರೆ ಹೆಚ್ಚು ಗುಣಮಟ್ಟದಿಂದ ಕೂಡಿರುತ್ತದೆ ಜತೆಗೆ ಅದು ಉಪಯುಕ್ತವಾಗು ಇರುತ್ತದೆ ಎಂದು ಇಂಡಿಯನ್ ಸೈನ್ಸ್ ಕಾಂಗ್ರೆಸ್ ಅಸೋಸಿಯೇಷನ್ ಅಧ್ಯಕ್ಷ, ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಪುನರುಚ್ಚರಿಸಿದರು.
ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ‘ ಇನ್ಸ್‌ಟಿಟ್ಯೂಟ್ ಎಕ್ಸಲೆನ್ಸ್ ಆ್ಯಂಡ್ ಸೆಂಟರ್ ಫಾರ್ ಮೆಟಿರಿಯಲ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ, ಮೈಸೂರು ವಿಶ್ವವಿದ್ಯಾಲಯ, ಭಾರತೀಯ ವಿಜ್ಞಾನ ಕಾಂಗ್ರೆಸ್ ವತಿಯಿಂದ ಗುರುವಾರ ಆಯೋಜಿಸಿದ್ದ ‘ವಿಜ್ಞಾನ ಮತ್ತು ತಂತ್ರಜ್ಞಾನ : ಗ್ರಾಮೀಣ ಅಭಿವೃದ್ಧಿ’ ಎಂಬ ವಿಷಯದ ಕುರಿತು ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಪ್ರೊ.ಕೆ.ಎಸ್.ಆರ್ ಹೇಳಿದಿಷ್ಟು….
ಈ ಹಿಂದೆ ಒಂದು ಕ್ಷೇತ್ರದ ಒಬ್ಬ ವ್ಯಕ್ತಿ ಸಂಶೋಧನೆ ನಡೆಸುತ್ತಿದ್ದರು. ಅದು ಯಶಸ್ಸು ಸಹ ಆಗುತ್ತಿತ್ತು. ಆದರೆ ಪ್ರಸ್ತುತ ಪರಿಸ್ಥಿತಿಗೆ ಒಬ್ಬರು ಸಂಶೋಧನೆ ಮಾಡುವುದಕ್ಕಿಂತ, ಭಿನ್ನ-ಭಿನ್ನ ಕ್ಷೇತ್ರದ ಪರಿಣತರು, ತಜ್ಞರು ಸಂಘಟಿತರಾಗಿ ಸಂಶೋಧನೆ ನಡೆಸುವುದು ಸೂಕ್ತ. ಈಗಾಗಲೇ ವಿದೇಶಗಳಲ್ಲಿ ಇಂಥ ಪದ್ಧತಿ ಜಾರಿಯಲ್ಲಿದೆ. ಪರಿಣಾಮ ಅಲ್ಲಿ ಸಂಶೋಧನೆಯ ಫಲಿತಾಂಶವು ಉತ್ತಮವಾಗಿ ಹೊರ ಹೊಮ್ಮುತ್ತಿದೆ. ಇದು ಒಂದು ರೀತಿಯಲ್ಲಿ ಒಳ್ಳೆಯ ಬೆಳವಣಿಗೆ ಮತ್ತು ಇದರಿಂದ ಉತ್ತಮ ಗುಣಮಟ್ಟ ನಿರೀಕ್ಷಿಸಬಹುದು. ಭಾರತದಲ್ಲೂ ಇಂಥ ಪ್ರಯತ್ನ, ಪ್ರಯೋಗ ಹೆಚ್ಚು ಹೆಚ್ಚು ನಡೆಯಬೇಕು.
ಪ್ರಸ್ತುತ ದಿನಗಳಲ್ಲಿ ಅತೀ ಕ್ಷಿಪ್ರಗತಿಯಲ್ಲಿ ತಂತ್ರಜ್ಞಾನ ಅಭಿವೃದ್ಧಿ ಹೊಂದುತ್ತಿದೆ. ಈ ತಂತ್ರಜ್ಞಾನ ದೇಶ ಪ್ರತಿ ಹಳ್ಳಿಹಳ್ಳಿಗೂ ತಲುಪಬೇಕು. ಜತೆಗೆ ಪ್ರಮುಖವಾಗಿ ದೇಶದ ಬೆನ್ನೆಲುಬಾಗಿರುವ ಅನ್ನದಾತನ ಆಶ್ರಯಕ್ಕೆ ತಂತ್ರಜ್ಞಾನ ಅಭಿವೃದ್ಧಿ ಪಡಿಸಬೇಕಾಗಿದೆ. ಇದು ಪ್ರತಿ ರೈತರ ಕೃಷಿ ಚಟುವಟಿಕೆಗೆ ಪೂರಕವಾದ ವಾತಾವರಣ ನಿರ್ಮಿಸಿದರೆ ಮಾತ್ರ ತಂತ್ರಜ್ಞಾನ ಅಭಿವೃದ್ಧಿ ಹೊಂದಿದ್ದಕ್ಕೂ ಸಾರ್ಥಕವಾಗುತ್ತದೆ.
ಭಾರತೀಯ ವಿಜ್ಞಾನ ಸಂಸ್ಥೆಯ ಸಂದರ್ಶಕ ಪ್ರಾಧ್ಯಾಪಕ, ಮೆಟಿರಿಯಲ್ ಸೈನ್ಸ್ ಎಕ್ಸ್ ಪರ್ಟ್ ಪ್ರೊ. ಕೆ.ಜೆ.ರಾವ್ ಮಾತನಾಡಿ, ಪ್ರಸ್ತುತ ಸಮಯದಲ್ಲಿ ತಂತ್ರಜ್ಞಾನದ ಬೆಳವಣಿಗೆ ಕೌತುಕವನ್ನುಂಟು ಮಾಡುತ್ತದೆ. ಇದೇ ವೇಳೆ ವಿದ್ಯಾರ್ಥಿಗಳು ಪುಸ್ತಕದ ಒಡನಾಟದಿಂದ ದೂರ ಸರಿಯುತ್ತಿದ್ದಾರೆ. ಇದನ್ನು ನೋಡಿದರೆ ಮುಂದಿನ ದಶಕದಲ್ಲಿ ಮನುಷ್ಯರ ಸ್ಥಳವನ್ನು ಯಂತ್ರಗಳೇ ಆವರಿಸಿಕೊಂಡು ಮಾನವನ ಎಲ್ಲಾ ಕೆಲಸವನ್ನು ಅವೇ ನಿರ್ವಹಣೆ ಮಾಡಬಹುದು ಎಂದು ಭವಿಷ್ಯ ನುಡಿದರು .
ಸಮಾರಂಭದಲ್ಲಿ ಭಾಗವಹಿಸಿದ್ದ ವಿಜ್ಞಾನ ಕಾಂಗ್ರೆಸ್ ನ ನಿಕಟ ಪೂರ್ವ ಅಧ್ಯಕ್ಷ ಪ್ರೊ.ಅಶೋಕ ಕುಮಾರ್ ಸಕ್ಸೇನಾ, ಪ್ರೊ.ವಿಜಯಾ ಲಕ್ಷ್ಮೀ ಸಕ್ಸೇನಾ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಮಹದೇವನ್, ಸಿಡಿಸಿ ನಿರ್ದೇಶಕರಾದ ಪ್ರೊ.ಶ್ರೀಕಂಠಸ್ವಾಮಿ ಸೇರಿದಂತೆ ಇತರರು ಹಾಜರಿದ್ದರು.
———
key words : mysore-indian-science-congress-mysore-rangappa-vc-hemanth.kumar