ಮೈಸೂರು, ಜೂನ್ 21, 2022 (www.justkannada.in): ಅಂತಾರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಮೈಸೂರಿಗೆ ಆಗಮಿಸಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಬೆಳಿಗ್ಗೆ 6 ಗಂಟೆಗೆ ಆರಮನೆ ಆವರಣದಲ್ಲಿ ಆಯೋಜಿಸಿದ್ಧ ಸಾಮೂಹಿಕ ಯೋಗ ಪ್ರದರ್ಶನದಲ್ಲಿ ಭಾಗವಹಿಸಿ ಯೋಗ ಪ್ರದರ್ಶಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ “ಈ ಹಿಂದೆ ಯೋಗದ ಚಿಹ್ನೆ ಕೇವಲ ಆಧ್ಯಾತ್ಮಿಕ ಅಥವಾ ಪಾರಂಪರಿಕ ಮನೆಗಳಲ್ಲಿ ಮಾತ್ರ ಕಾಣಲು ಸಿಗುತಿತ್ತು. ಆದರೆ ಇಂದು ವಿಶ್ವದ ಪ್ರತಿಯೊಂದು ಮೂಲೆಯಲ್ಲೂ ಇದನ್ನು ಕಾಣಬಹುದು,” ಎಂದು ಅಭಿಪ್ರಾಯಪಟ್ಟರು.
“ಇಂದು ಯೋಗ ವಿಶ್ವದ ವಿಶ್ವಕರ್ಮ ಕಾರ್ಯವಾಗಿದೆ. ಯೋಗವನ್ನು ಇಷ್ಟು ಜನಪ್ರಿಯಗೊಳಿಸಿದ್ದಕ್ಕಾಗಿ, ಇಷ್ಟು ಪ್ರೀತಿಸಲು ಆರಂಭಿಸಿರುವುದಕ್ಕಾಗಿ ಇಡೀ ವಿಶ್ವದ ಜನರಿಗೆ ನಾನು ನನ್ನ ಪ್ರಣಾಮಗಳನ್ನು ಸಲ್ಲಿಸುತ್ತೇನೆ. ಯೋಗ ನಮಗೆ, ನಮ್ಮ ದೇಶಕ್ಕೆ ಮತ್ತು ಇಡೀ ವಿಶ್ವಕ್ಕೆ ಶಾಂತಿ, ನೆಮ್ಮದಿ ಒದಗಿಸುತ್ತದೆ,” ಎಂದರು.
‘ಯೇತ್ ಪಿಂಡೆ ತತ್ ಬ್ರಹ್ಮಾಂಡೇ,’ ಎಂಬ ಸಂಸ್ಕೃತ ಶ್ಲೋಕವನ್ನು ಉಚ್ಛರಿಸಿದ ಪ್ರಧಾನಿ ಮೋದಿ ಅವರು, ಯೋಗ ವಿಶ್ವವನ್ನು ಬದಲಾಯಿಸಲು ನಮ್ಮನ್ನು ಸಜ್ಜುಗೊಳಿಸುತ್ತದೆ ಅಥವಾ ವಿಶ್ವವನ್ನೇ ನಮ್ಮನ್ನು ಅನುಸರಿಸುವಂತೆ ಮಾಡುತ್ತದೆ ಎಂದರು. ಯೋಗ ಜನರನ್ನು ಒಟ್ಟುಗೂಡಿಸುವಂತಹ ಪರಿಸರವನ್ನು ಸೃಷ್ಟಿಸುತ್ತದೆ, ರಾಷ್ಟ್ರಗಳನ್ನು ಜೊತೆಗೂಡಿಸುತ್ತದೆ. ಆ ಮೂಲಕ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವ ಒಂದು ಸೂತ್ರವಾಗುತ್ತದೆ, ಎಂದು ಅಭಿಪ್ರಾಯಪಟ್ಟರು.
“ಇಂದು 75 ನಗರಗಳು, ಚಾರಿತ್ರಿಕ ಸ್ಥಳಗಳು, ಪಾರಂಪರಿಕ ಕೇಂದ್ರಗಳಲ್ಲಿ ಯೋಗವನ್ನು ಆಚರಿಸಲಾಗುತ್ತಿದೆ. ಅದೇ ರೀತಿ ವೈಭವಕ್ಕೆ ಹೆಸರುವಾಸಿಯಾಗಿರುವ ಮೈಸೂರು, ವಿಶ್ವದಾದ್ಯಂತ ಯೋಗದ ಜನಪ್ರಿಯತೆಯನ್ನು ಹರಡಿದೆ. ಯೋಗ ಕೇವಲ ಒಂದು ಪ್ರದೇಶ ಅಥವಾ ಸಮಯಕ್ಕೆ ಸೀಮಿತವಾಗಿಲ್ಲ. ನಾವು ಯೋಗವನ್ನು ಅಭ್ಯಾಸಿಸಬೇಕು, ಮತ್ತು ಜೀವಿಸಬೇಕು. ಯೋಗ ಶಾಂತಿ ಮತ್ತು ನೆಮ್ಮದಿಯನ್ನು ಹೊಂದುವ ಒಂದು ವಿಧಾನವಾಗುತ್ತದೆ. ಇಂದು ಯೋಗ ಹೊಸ ಹೊಸ ಯೋಜನೆಗಳೊಂದಿಗೆ ಆಗಮಿಸುತ್ತಿದೆ. ಆಯುಷ್ ಮಂತ್ರಾಲಯ ಮೈಸೂರಿನ ದಸರಾ ವಸ್ತುಪ್ರದರ್ಶನ ಮೈದಾನದಲ್ಲಿ ನವೀನ ಡಿಜಿಟಲ್ ಪ್ರದರ್ಶನವೊಂದನ್ನು ಏರ್ಪಡಿಸಿದೆ,” ಎಂದರು.
Key words: mysore- International- Yoga Day-PM-Modi