ಮೈಸೂರು,ಮೇ,21,2021(www.justkannada.in): ಸ್ವಚ್ಛ ಭಾರತ್ ಅಡಿ ಕಾಯಕಲ್ಪ ಯೋಜನೆ ಅಡಿಯಲ್ಲಿ(2019-20) ನಮ್ಮ ಜಯನಗರ ಸಮುದಾಯ ಆರೋಗ್ಯ ಕೇಂದ್ರವು ರಾಜ್ಯಕ್ಕೆ ಮೊದಲನೇ ಪ್ರಶಸ್ತಿಯ ರೂಪದಲ್ಲಿ 15 ಲಕ್ಷ ರೂ.ಗಳ ಬಹುಮಾನ ಪಡೆಯುವ ಮೂಲಕ ರಾಜ್ಯಕ್ಕೆ ಹಾಗೂ ದೇಶಕ್ಕೆ ಮಾದರಿಯಾಗಿದೆ ಎಂದು ಶಾಸಕ ಎಸ್.ಎ ರಾಮದಾಸ್ ಶ್ಲಾಘನೆ ವ್ಯಕ್ತಪಡಿಸಿದರು.
ಶಾಸಕ ಹಾಗೂ ಜಯನಗರ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ರಕ್ಷಾ ಸಮಿತಿಯ ಅಧ್ಯಕ್ಷರಾದ ಎಸ್. ಎ ರಾಮದಾಸ್ , ಸಮಿತಿಯ ಸದಸ್ಯರು ಮತ್ತು ಜಯನಗರ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಯೊಡನೆ ಜಯನಗರ ಆಸ್ಪತ್ರೆಯಲ್ಲಿ ಆರೋಗ್ಯ ರಕ್ಷಾ ಸಮಿತಿ ಸಭೆಯನ್ನು ನಡೆಸಿದರು.
ಸಬೆಯಲ್ಲಿ ಮಾತನಾಡಿದ ಶಾಸಕ ಎಸ್.ಎ. ರಾಮದಾಸ್ ಅವರು, ಸರ್ಕಾರಿ ಆಸ್ಪತ್ರೆ ಎಂದರೆ ಸಾರ್ವಜನಿಕರಿಗೆ ತಾತ್ಸಾರದ ಮನೋಭಾವನೆ ಇರುತ್ತದೆ. ಆಗಾಗ ಸಮಿತಿ ಸದಸ್ಯರು ಆಸ್ಪತ್ರೆಗೆ ಭೇಟಿ ನೀಡಿ ಎಲ್ಲಾದರೂ ಸಮಸ್ಯೆ ಕಂಡುಬಂದಾಗ ಸಮಿತಿಯ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲು ತಿಳಿಸಿದ್ದೇನೆ. ಹೀಗಾಗಿ ಪ್ರತಿಯೋರ್ವರ ಸಹಕಾರದಿಂದ ಇಂದು ಸ್ವಚ್ಛ ಭಾರತ್ ಅಡಿ ಕಾಯಕಲ್ಪ ಯೋಜನೆ ಅಡಿಯಲ್ಲಿ(2019-20) ನಮ್ಮ ಜಯನಗರ ಸಮುದಾಯ ಆರೋಗ್ಯ ಕೇಂದ್ರವು ರಾಜ್ಯಕ್ಕೆ ಮೊದಲನೇ ಪ್ರಶಸ್ತಿಯ ರೂಪದಲ್ಲಿ 15 ಲಕ್ಷರೂ ಗಳ ಬಹುಮಾನ ಪಡೆಯುವ ಮೂಲಕ ರಾಜ್ಯಕ್ಕೆ ಹಾಗೂ ದೇಶಕ್ಕೆ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಒಂದು ಆಸ್ಪತ್ರೆ ಚೆನ್ನಾಗಿದೆ ಅಂದರೆ ಅಲ್ಲಿರುವ ಅಟೆಂಡರ್ ನಿಂದ ಹಿಡಿದು, ಡಿ ಗ್ರೂಪ್ ನೌಕರರು, ಸ್ವಚ್ಛತಾ ಸಿಬ್ಬಂದಿಗಳು, ವೈದ್ಯಾಧಿಕಾರಿಗಳೂ ಕೂಡಾ ಕಾರಣಕರ್ತರು. ಎಲ್ಲರೂ ಒಟ್ಟಾಗಿ ಕೆಲಸ ಮಾಡಿದಾಗ ಮಾತ್ರ ಈ ರೀತಿಯ ಸಾಧನೆ ಸಾಧ್ಯ. ಇಂದು ಕೇವಲ ಸಾಂಕೇತಿಕವಾಗಿ ವೈದ್ಯರಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದು ಕೋವಿಡ್ ಪ್ರಕರಣಗಳು ಇಲ್ಲವಾದಾಗ ರಾಜ್ಯದ ಆರೋಗ್ಯ ಸಚಿವರನ್ನು ಕರೆಯಿಸಿ ಒಂದು ದೊಡ್ಡ ಕಾರ್ಯಕ್ರಮವನ್ನು ಮಾಡುತ್ತೇವೆ. ಇಲ್ಲಿ ಕೆಲಸ ನಿರ್ವಹಿಸುತ್ತಿರುವವರಿಗೆ 15 ಲಕ್ಷದಲ್ಲಿ 25% ನಷ್ಟು ಸಿಬ್ಬಂದಿಗೆ ಇನ್ಸೆನ್ ಟೀವ್ ಆಗಿ ನೀಡಿದರೆ 75% ನಷ್ಟು ಆಸ್ಪತ್ರೆಯ ಮೂಲಭೂತ ಸೌಕರ್ಯಕ್ಕೆ ನೀಡಲಾಗುವುದು. ಜಯನಗರ ಆಸ್ಪತ್ರೆಯ ಸಿಬ್ಬಂದಿಯ ಕಾರ್ಯ ಬೇರೆ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಗೂ ಮಾದರಿಯಾಗಬೇಕಾಗಿದೆ ಎಂದು ಶಾಸಕ ರಾಮದಾಸ್ ನುಡಿದರು.
ನಾನು ಮೊದಲ ಬಾರಿ ಶಾಸಕನಾದಾಗ ಮೂಡಾ ಕಚೇರಿಯಲ್ಲಿ ನಡೆಯುತ್ತಿದ್ದ ಸಭೆಯಲ್ಲಿ ಒಂದು ವಿಚಾರ ಪ್ರಸ್ತಾಪವಾಗುತ್ತದೆ, ಅಮೆರಿಕಾದಲ್ಲಿರುವ ವೈದ್ಯರಿಗೆ ಖಾಸಗಿ ನರ್ಸಿಂಗ್ ಹೋಮ್ ಕಟ್ಟಲು ಈಗಿನ ಜಯನಗರ ಸಮುದಾಯ ಆಸ್ಪತ್ರೆಯ ಜಾಗವನ್ನು ಕೇಳಿದ್ದರು, ನಾನು ಯೋಚಸಿ ಖಾಸಗಿ ಆಸ್ಪತ್ರೆಗೆ ಕೊಡುವ ಬದಲು ಸರ್ಕಾರಿ ಆಸ್ಪತ್ರೆ ತೆರೆಯಲು ಚಿಂತಿಸಿ ಅಂದಿನ ಆರೋಗ್ಯ ಸಚಿವರ ಬಳಿಯಲ್ಲಿ ಚರ್ಚಿಸಿ ಆ ಜಾಗವನ್ನು ಸರ್ಕಾರಿ ಆಸ್ಪತ್ರೆಯನ್ನಾಗಿಸಲು ಭೂ ಪರಿವರ್ತನೆ ಮಾಡಬೇಕೆಂದು ಮನವಿ ಮಾಡಿದ್ದೆ. ಅಂದಿನ ಮುಖ್ಯಮಂತ್ರಿಗಳು ಸಹ ಖಾಸಗಿ ಆಸ್ಪತ್ರೆ ನೀಡಲು ಶಿಫಾರಸ್ಸು ನೀಡಿದ್ದರು.
ಹಾಗಾಗಿ ಆಗಿನ ಆರೋಗ್ಯ ಸಚಿವರಾಗಿದ್ದ ಡಾ.ಎ. ಬಿ ಮಲಕಾರೆಡ್ಡಿ ಬಳಿಯಲ್ಲಿ ಮಂಜೂರಾತಿ ಪತ್ರ ನೀಡಿ ಎಂದು ಕೇಳಿದ್ದೆ. 1996 ರಲ್ಲಿ ಈ ಭೂಮಿಗೆ 2 ಕೋಟಿ ಬೆಲೆ ಇತ್ತು. ಅಂದು ಭೂಮಿಯನ್ನ ಖರೀದಿಸಲು ಆರೋಗ್ಯ ಇಲಾಖೆಯಲ್ಲಿ ಹಣದ ಕೊರತೆ ಇತ್ತು, ಆದರೆ 2 ಕೋಟಿ ಹಣ ಪಾವತಿ ಮಾಡಲು ಅಮೆರಿಕಾದ ಡಾಕ್ಟರ್ ಒಬ್ಬರು ಸಿದ್ಧರಿದ್ದರು. ತಕ್ಷಣ ನಾವು ಸರ್ಕಾರದ ಮುಂದೆ ಹೋಗಿ ಆರೋಗ್ಯ ಇಲಾಖೆಗೆ ಉಚಿತವಾಗಿ ನೀಡಲು ಅವಕಾಶ ಇಲ್ಲದೇ ಇರುವುದರಿಂದ ಟೋಕನ್ ಅಡ್ವಾನ್ಸ್ ಆಗಿ ಕೇವಲ 1 ರೂಪಾಯಿಯನ್ನು ಮೂಡಾಗೆ ಪಾವತಿಸಿ ಆರೋಗ್ಯ ಇಲಾಖೆಗೆ ದಾಖಲೆ ನಿರ್ಮಾಣ ಮಾಡಿಸಲಾಯಿತು. ಕೇವಲ 1 ರೂಪಾಯಿ ಟೋಕನ್ ಅಡ್ವಾನ್ಸ್ ಮೂಲಕ ಭೂಮಿ ಖರೀದಿಸಿದ್ದು ಅಂದಿನ ದಿನಕ್ಕೆ ಈ ಸಂಗತಿ ರಾಜ್ಯದಲ್ಲೇ ಪ್ರಥಮವಾಗಿತ್ತು. ಹೀಗೆ ಜಯನಗರ ಸಮುದಾಯ ಆಸ್ಪತ್ರೆ ಪ್ರಾರಂಭವಾದ ಇತಿಹಾಸವನ್ನು ಶಾಸಕ ರಾಮದಾಸ್ ತಿಳಿಸಿಕೊಟ್ಟರು.
ಕಳೆದ 5 ವರ್ಷಗಳಿಂದ ಆರೋಗ್ಯ ಅಧಿಕಾರಿಯಾಗಿರುವ ಡಾ. ರಘು ಕುಮಾರ್ ಅವರು ಆಸ್ಪತ್ರೆಯ ಏಳಿಗೆಯ ಯಶಸ್ಸಿಗೆ ಮೂಲ ಕಾರಣೀಕೃತರಾಗಿದ್ದರೆ. ಈ ಸಾಧನೆಗೆ ಇವರೊಂದಿಗೆ ವೈದ್ಯಕೀಯ ಹಾಗೂ ವೈದ್ಯಕಿಯೇತರ ಸಿಬ್ಬಂದಿ ವರ್ಗದವರು ಶ್ರಮ ವಹಿಸಿದ್ದಾರೆ. ಇವರೆಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಮುಂದಿನ ದಿನಗಳಲ್ಲಿ ಜಯನಗರ ಸಮುದಾಯ ಆರೋಗ್ಯ ಕೇಂದ್ರವನ್ನು ಮಾದರಿ ಸಮುದಾಯ ಆರೋಗ್ಯ ಕೇಂದ್ರವನ್ನಾಗಿಸಲು ಹಾಗೂ ಇನ್ನೂ ಹೆಚ್ಚು ಜನಕ್ಕೆ ಇದರ ಸೇವೆ ಕಲ್ಪಿಸಲು ಚಿಂತನೆ ಮಾಡಬೇಕಿದ್ದು ಹಣ ಕಾಸು ಹಾಗೂ ವ್ಯವಸ್ಥೆಯ ದೃಷ್ಠಿಯಿಂದ ನಾನು ಸರ್ಕಾರದ ಯಾವುದಾದರೂ ಯೋಜನೆಯಿಂದ ಹಣ ತರುವ ಜವಾಬ್ದಾರಿ ನನ್ನದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವೈದ್ಯ ಡಾ.ರಘುಕುಮಾರ್, ಡಾ.ವೀಣಾ ಬಿ ಎಸ್, ಡಾ. ಜಯಮಾಲ, ಡಾ. ಶಿವಪ್ರಸಾದ್ ಎಂ ಜಿ, ಡಾ.ತೇಜಸ್ ಕುಮಾರ್ ಅವರಿಗೆ ಸನ್ಮಾನಿಸಲಾಯಿತು. ಆರೋಗ್ಯ ರಕ್ಷಾ ಸಮಿತಿಯ ಸದಸ್ಯೆ ಹಾಗೂ ನಗರಪಾಲಿಕಾ ಸದಸ್ಯರಾದ ಶೋಭಾ, ಸುಜಾತ ರಾಮಪ್ರಸಾದ್, ಬಿ.ಕೆ ಮಂಜುನಾಥ್, ಶಾಂತವೀರಪ್ಪ, ನಾಗರಾಜ್ ,ಲೋಕೇಶ್, ಪ್ರದೀಪ್, ಕೃಷ್ಣ, ಸ್ಥಳೀಯ ಬಿಜೆಪಿ ಮುಖಂಡರು ಹಾಜರಿದ್ದರು.
Key words: Mysore-Jayanagar -Government Hospita- Model – country-MLA-SA Ramadas