ಮೈಸೂರು, ಆ.27 : ನಿರ್ಭಯಾ ಪ್ರಕರಣವನ್ನು ನಾವ್ಯಾರೂ ಮರೆತಿಲ್ಲ, ಮರೆಯುವ ಪ್ರಕರಣವೂ ಅಲ್ಲ. ದಶಕಗಳ ಹಿಂದೆ ಭಾರತದ ರಾಜಧಾನಿ ದೆಹಲಿಯಲ್ಲಿ ವೈದ್ಯ ವಿದ್ಯಾರ್ಥಿನಿಯ ಮೇಲೆ ಚಲಿಸುವ ಬಸ್‌ನಲ್ಲಿ ೬ ಮಂದಿ ಕಾಮುಕರು ಆಕೆಯ ಸ್ನೇಹಿತನ ಎದುರೇ ಸಾಮೂಹಿಕ ಅತ್ಯಾಚಾರ ನಡೆಸಿ ಕಬ್ಬಿಣದ ಸರಳಿಂದ ಹಲ್ಲೆ ಮಾಡಿ ಪರಾರಿಯಾಗಿದ್ದರು. ಸಾವು ಬದುಕಿನ ಮಧ್ಯೆ ಹೋರಾಡಿದ ನಿರ್ಭಯಾ ಕೊನೆಗೂ ಬದುಕಲೇ ಇಲ್ಲ.
ಆಂಧ್ರಪ್ರದೇಶದ ಪಶುವೈದ್ಯೆ ಪ್ರಿಯಾಂಕ ರೆಡ್ಡಿ ಪ್ರಕರಣದಲ್ಲಿ ಕಾಮುಕರು ಅತ್ಯಾಚಾರ ನಡೆಸಿ ಜೀವಂತವಾಗಿ ಆಕೆಯನ್ನು ಸುಟ್ಟು ಹಾಕಿದ್ದರು. ಇಡೀ ದೇಶವನ್ನೇ ಬೆಚ್ಚಿ ಬೇಳಿಸಿದ್ದ ಇಂಥದ್ದೇ ಪ್ರಕರಣ ಶಾಂತಿ ಪ್ರಿಯರ ನಾಡಾದ ಮೈಸೂರಿನಲ್ಲಿ ನಡೆದಿದ್ದು ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವಂತಾಗಿದೆ.
ಆಗಸ್ಟ್ ೨೪ರ ಸಂಜೆ ೭.೩೦ರ ವೇಳೆಗೆ ನಗರದ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಉತ್ತರ ಭಾರತ ಮೂಲದ ಯುವತಿ ಹಾಗೂ ಆಕೆಯ ಸ್ನೇಹಿತ ಲಲಿತಾದ್ರಿಪುರ ಹೊರವಲಯದ ನಿರ್ಜನ ಪ್ರದೇಶದಲ್ಲಿ ತೆರಳುತ್ತಿದ್ದ ವೇಳೆ ಏಕಾಏಕಿ ೬ ಮಂದಿ ಯುವಕರ ಗುಂಪು ಮಾರಣಾಂತಿಕ ಹಲ್ಲೆ ನಡೆಸಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದೆ. ಅಷ್ಟೇ ಅಲ್ಲದೆ ಸಂತ್ರಸ್ತೆಯ ಸ್ನೇಹಿತ ನೀಡಿರುವ ಮಾಹಿತಿಯ ಪ್ರಕಾರ ತಮ್ಮ ಬಳಿ ಇದ್ದ ನಗ ನಾಣ್ಯಗಳನ್ನು ದೋಚಿದ್ದಲ್ಲದೆ, ೩ ಲಕ್ಷ ರೂ. ಹಣ ನಿಡುವಂತೆ ಧಮ್ಕಿ ಹಾಕಿದ್ದಾರೆ. ಈ ವೇಳೆ ಸಂತ್ರಸ್ತೆಯ ಸ್ನೇಹಿತನ ಮೇಲೂ ಹಲ್ಲೆ ನಡೆಸಲಾಗಿದೆ. ಇಷ್ಟೆಲ್ಲಾ ನಡೆದಿದ್ರೂ ಘಟನೆ ಬೆಳಕಿಗೆ ಬಂದಿದ್ದು ಮಾತ್ರ ಮರುದಿನ ಮಧ್ಯಾಹ್ನದ ವೇಳೆಗೆ ಅದೂ ಕೂಡಾ ಪೊಲೀಸರು ಕಂಡು ಹಿಡಿದದ್ದಲ್ಲ, ಸಂತ್ರಸ್ತೆಯ ಸ್ನೇಹಿತ ದೂರು ಕೊಟ್ಟ ನಂತರ!
ಮೈಸೂರಿನಲ್ಲಿ ಇಂಥಹ ಸಾಕಷ್ಟು ನಿರ್ಜನ ಪ್ರದೇಶಗಳಿವೆ. ಆದ್ರೆ ಅಲ್ಲೆಲ್ಲೂ ಪೊಲೀಸರು ಗಸ್ತು ತಿರುಗುವ ಗೋಜಿಗೆ ಹೋಗುವುದಿಲ್ಲ. ಚಾಮುಂಡಿ ಬೆಟ್ಟ, ಸುತ್ತಲಿನ ತಪ್ಪಲು, ನಿರ್ಜನ ಪ್ರದೇಶಗಳಲ್ಲಿ ಪುಂಡ ಪೋಕರಿಗಳು, ದುಷ್ಕರ್ಮಿಗಳು, ಕುಡುಕರ ಹಾವಳಿ ದಿನೇ ದಿನೆ ಹೆಚ್ಚಾಗುತ್ತಿದೆ. ಈ ಪುಂಡರಿಂದ ದೌರ್ಜನ್ಯಕ್ಕೊಳಗಾಗುವ ಎಷ್ಟೋ ಮಂದಿ ದೂರು ದಾಖಲಿಸುವ ಪ್ರಯತ್ನವನ್ನೇ ಮಾಡುವುದಿಲ್ಲ. ಇಂಥಹ ಪುಂಡರಿಗೂ ಪೊಲೀಸರ ಭಯವೇ ಇಲ್ಲದಂತಾಗಿದೆ ಅನ್ನೋದು ಈಗ ನಡೆದಿರುವ ಸಾಮೂಹಿಕ ಅತ್ಯಾಚಾರದಿಂದ ಮತ್ತೊಮ್ಮೆ ಸಾಬೀತಾಗಿದೆ.
ನಗರದ ಮಧ್ಯ ಭಾಗದಲ್ಲಿರುವ ಬಡಾವಣೆಗಳಲ್ಲೇ ಸರಿಯಾದ ಬೀದಿ ದೀಪದ ವ್ಯವಸ್ಥೆಯಿಲ್ಲ. ಇನ್ನು ನಿರ್ಜನ ಪ್ರದೇಶಗಳಲ್ಲಿ ಗಸ್ತು ಹೆಚ್ಚಿಸುವ ಅಥವಾ ಬೀದಿ ದೀಪಗಳ ನಿರ್ವಹಣೆ ಬಗ್ಗೆ ತಲೆ ಕೆಡಿಸಿಕೊಳ್ಳುವವರು ಯಾರು? ಮೈಸೂರಿನ ರಿಂಗ್ ರಸ್ತೆಗಳನ್ನೇ ನೋಡಿ, ಕೇವಲ ದಸರಾ ವೇಳೆ ಮಾತ್ರ ನಗರವನ್ನು ಚಂದಗಾಣಿಸುವ ಜಿಲ್ಲಾಡಳಿತ, ನಂತರ ನಿರ್ಲಕ್ಷ್ಯ ತೋರಿ ಸುಮ್ಮನಾಗುತ್ತದೆ. ನಗರದ ಹೊರವಲಯದ ಪ್ರದೇಶಗಳು ಪಂಚಾಯಿತಿ ವ್ಯಾಪ್ತಿಗೆ ಬರುವುದರಿಂದ ಅದರ ನಿರ್ವಹಣೆ ಪಂಚಾಯಿತಿಗಳಿಗೆ ಸೇರುತ್ತದೆ ಎಂದು ಸಮಜಾಯಿಷಿ ನೀಡುತ್ತದೆ. ಇತ್ತ ಪಂಚಾಯಿತಿಗಳು ಅನುದಾನದ ಕೊರತೆ ಎಂದು ನೆಪ ಹೇಳಿ ಸುಮ್ಮನಾಗುತ್ತವೆ. ಇನ್ನು ಮೊದಲೆಲ್ಲಾ ಗಸ್ತು ತಿರುಗುತ್ತಿದ್ದ ಗರುಡಾ ವಾಹನದ ಸಂಖ್ಯೆಯೂ ಕಡಿಮೆಯಾಗಿದೆ ಎಂದು ಸಾರ್ವಜನಿಕರೇ ಆರೋಪಿಸುತ್ತಿದ್ದಾರೆ. ರಾತ್ರಿ ವೇಳೆ ಪೊಲೀಸರು ಮೊದಲಿಂತೆ ಗಸ್ತು ತಿರುಗುತ್ತಿಲ್ಲ. ಇವೆಲ್ಲಾ ವೈಫಲ್ಯಗಳು ದುಷ್ಕೃತ್ಯಗಳಿಗೆ ದಾರಿ ಮಾಡಿಕೊಟ್ಟಿವೆ.
ಘಟನೆ ನಡೆದು ಮೂರು ದಿನಗಳಾದರೂ ಇಲ್ಲಿಯವರೆಗೂ ಆರೋಪಿಗಳ ಬಂಧನವಾಗಿಲ್ಲ. ೩೪ ಸಾಕ್ಷಿಗಳು ಸಿಕ್ಕಿವೆ ಎನ್ನುವ ಪೊಲೀಸರು ಆದಷ್ಟು ಬೇಗ ಆರೋಪಿಗಳ ಹೆಡೆಮುರಿ ಕಟ್ಟಿ ಸಂತ್ರಸ್ತೆಗೆ ನ್ಯಾಯ ಒದಗಿಸಬೇಕಿದೆ, ಜನರ ವಿಶ್ವಾಸಗಳಿಸಬೇಕಿದೆ.
ಪ್ರಕರಣದ ಕುರಿತು ಕಳೆದ ಎರಡು ಮೂರು ದಿನಗಳಿಂದ ನಡೆಯುತ್ತಿರುವ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ರೆ ಸರ್ಕಾರದ ಮತ್ತು ಇಲಾಖೆಯ ವೈಫಲ್ಯಗಳನ್ನ ಮುಚ್ಚಿಡುವ ಸರ್ವ ಪ್ರಯತ್ನಗಳು ನಡೆಯುತ್ತಿರುವುದು ಮೇಲ್ನೋಟಕ್ಕೆ ಸಾಬೀತಾಗುತ್ತಿದೆ. ಸಂಜೆ ವೇಳೆ ಯುವತಿ ನಿರ್ಜನ ಪ್ರದೇಶಕ್ಕೆ ತೆರಳಿದ್ದೇ ತಪ್ಪು ಎಂಬಂತೆ ಬಿಂಬಿಸುವ ಕೆಲಸ ಯಶಸ್ವಿಯಾಗಿ ನಡೆಯುತ್ತಿದೆ. ಇಂಥಹ ಘಟನೆಗಳು ನಡೆದಾಗ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಾದವರೆ ಇಂಥಹ ಅಸಂಬದ್ಧ ಮಾತುಗಳನ್ನಾಡುವುದರಿಂದಲೇ ದೌರ್ಜನ್ಯಗಳಾದಾಗ ಹೆಣ್ಣುಮಕ್ಕಳು ಮುಂದೆ ಬಂದು ದೂರು ನೀಡುವ ಧೈರ್ಯ ಮಾಡುವುದಿಲ್ಲ.
ರಾಜ್ಯದ ಗೃಹ ಸಚಿವರೇ ಇಂಥಹ ಹೇಳಿಕೆ ಕೊಟ್ರೆ ಪ್ರಕರಣದಲ್ಲಿ ನ್ಯಾಯ ನಿರೀಕ್ಷೆ ಮಾಡೋದಾದ್ರೂ ಹೇಗೆ? ಇದೊಂದೇ ಉದಾಹರಣೆ ಅಲ್ಲ ಹೆಣ್ಣುಮಕ್ಕಳ ಮೇಲಿನ ಬಹುತೇಕ ಅತ್ಯಾಚಾರ ಪ್ರಕರಣಗಳಲ್ಲಿ ನಿಂದನೆಗೊಳಗಾಗುವುದು ಸಂತ್ರಸ್ತೆಯೇ. ಆ ವೇಳೆ ಆಕೆ ಅಲ್ಲಿಗ್ಯಾಕೆ ಹೋಗಬೇಕಿತ್ತು? ಸ್ನೇಹಿತನ ಜೊತೆ ಯಾಕೆ ಹೋಗಬೇಕಿತ್ತು? ನಿರ್ಜನ ಪ್ರದೇಶದಲ್ಲಿ ಆಕೆಗೇನು ಕೆಲಸ? ಇಂಥವೇ ಪ್ರಶ್ನೆಗಳು ಹುಟ್ಟುತ್ತವೆ.
ಮೈಸೂರಿನ ಪ್ರಕರಣದಲ್ಲಿ ಈ ಪ್ರಶ್ನೆಗಳು ಈಗಾಗಲೇ ಎದ್ದಿವೆ. ಆದರೆ ಅವೆಲ್ಲಾ ಈಗ ಅಪ್ರಸ್ತುತ. ಸ್ವಾತಂತ್ರ್ಯದ ವಿಚಾರದಲ್ಲಿ ಗಂಡು ಹೆಣ್ಣು ಇಬ್ಬರೂ ಸಮಾನರು. ಆಕೆ ಇಂಥದ್ದೇ ಜಾಗಕ್ಕೆ ಇಂಥದ್ದೇ ಸಮಯದಲ್ಲಿ ಹೋಗಬೇಕು ಎಂಬ ಕಟ್ಟುನಿಟ್ಟಿನ ಆಜ್ಞೆ ಮಾಡುವ ಅಧಿಕಾರ ಯಾರಿಗೂ ಇಲ್ಲ. ಆಕೆ ತನ್ನಿಚ್ಛೆಗೆ ತಕ್ಕಂತೆ ಬದುಕಲು ಸ್ವತಂತ್ರಳು. ಹೆಣ್ಣು ಮಕ್ಕಳ ವಿಚಾರದಲ್ಲಿ ನ್ಯಾಯ ಕೊಡಿಸುವ ಯೋಗ್ಯತೆ ಇಲ್ಲದ ಸರ್ಕಾರಗಳು, ಜನಪ್ರತಿನಿಧಿಗಳು ‘ರೇಪ್’ ಎನ್ನುವ ಪದವನ್ನು ಬಹಳ ಸುಲಭವಾಗಿ ತೆಗೆದುಕೊಳ್ಳುವುದನ್ನು ಬಿಡಲಿ. ವಿರೋಧ ಪಕ್ಷದವರು ನನ್ನನ್ನು ರೇಪ್ ಮಾಡುತ್ತಿದ್ದಾರೆ ಎಂದು ವ್ಯಂಗ್ಯ ಮಾಡುವ ಮೂಲಕ ಅಜ್ಞಾನಿಗಳಂತೆ ಹೇಳಿಕೆ ಕೊಡುವುದನ್ನು ಬಿಟ್ಟು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಯಾವ ರೀತಿ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಹೆಣ್ಣುಮಕ್ಕಳ ರಕ್ಷಣೆಗೆ ಏನು ಮಾಡಬೇಕು ಎಂಬ ಬಗ್ಗೆ ಗೃಹ ಸಚಿವರು ಆಲೋಚನೆ ಮಾಡಲಿ.
ಮೈಸೂರಿನಲ್ಲಿ ಈ ಹಿಂದೆ ಕೆಲಸ ಮಾಡಿರುವ ಹಿರಿಯ ದಕ್ಷ ಅಧಿಕಾರಿಗಳಿದ್ದಾರೆ. ಎಂಥೆಂಥಾ ಸನ್ನಿವೇಶಗಳನ್ನು ಬಹಳ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಮೈಸೂರಿನಲ್ಲಿ ಹೆಚ್ಚಾಗಿದ್ದ ರೌಡಿ ಚಟುವಟಿಕೆ, ಉಗ್ರ ಸಂಘಟನೆ ಜೊತೆ ನಂಟು ಹೊಂದಿದ್ದವರ ಬಂಧನ, ಕೋಮು ಗಲಭೆ ಮುಂತಾದ ಪ್ರಕರಣಗಳನ್ನು ನಿಭಾಯಿಸಿದ ಹಿರಿಯ ಅಧಿಕಾರಿಗಳನ್ನು ಮೈಸೂರು ಕಂಡಿದೆ.
ಆದರೆ ಈಗಿನ ಪೊಲೀಸ್ ವ್ಯವಸ್ಥೆ ಬಗ್ಗೆ ಮೈಸೂರಿಗರಿಗೆ ತೀವ್ರ ಅಸಮಾಧಾನವಿದೆ. ಪ್ರತಿನಿತ್ಯ ಕೊಲೆ, ಸುಲಿಗೆ, ಅತ್ಯಾಚಾರ ಪ್ರಕರಣಗಳನ್ನು ಕಂಡು ಜನ ರೋಸಿ ಹೋಗಿದ್ದಾರೆ. ಈಗಲಾದರೂ ಇಲಾಖೆ ಎಚ್ಚೆತ್ತುಕೊಳ್ಳಲಿ, ನಿವೃತ್ತರ ಸ್ವರ್ಗ ಎಂದೇ ಕರೆಸಿಕೊಳ್ಳುವ ಮೈಸೂರಿಗರು ಆತಂಕದಿಂದ ಹೊರಬಂದು ನೆಮ್ಮದಿಯ ದಿನಗಳನ್ನು ಕಾಣುವಂತಾಗಲಿ.
ಜನಪ್ರತಿನಿಧಿಗಳು ತಮ್ಮ ಕ್ಷೇತ್ರ ವ್ಯಾಪ್ತಿಯ ಠಾಣೆಗಳಿಗೆ ವರ್ಗಾವಣೆ ಬಯಸುವ ಪೊಲೀಸ್ ಅಧಿಕಾರಿಗಳಿಗೆ ಇಂತಿಷ್ಟು ಅಂತಾ ಫಿಕ್ಸ್ ಮಾಡುವುದನ್ನು ನಿಲ್ಲಿಸಲಿ. ಲಕ್ಷಾಂತರ ಹಣ ಕೊಟ್ಟು ಬರುವ ಅಧಿಕಾರಿಗಳು ಹಾಕಿದ ದುಡ್ಡು ಎತ್ತುವ ಬಗ್ಗೆ ಯೋಚಿಸಿ ಯಾವುದು ಲಾಭದಾಯಕವೋ ಆ ಕೆಲಸಗಳನ್ನು ಮಾಡುತ್ತಾರೆಯೇ ಹೊರತು ಜನಸಾಮಾನ್ಯರ ರಕ್ಷಣೆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಸದ್ಯಕ್ಕೆ ಮೈಸೂರಿನಲ್ಲಿ ನಡೆಯುತ್ತಿರುವುದೂ ಇದೆ.
– ಸಾಹಿತ್ಯ ಯಜಮಾನ್, ಹಿರಿಯ ಪತ್ರಕರ್ತರು, ಮೈಸೂರು.
key words: mysore-justkannada-news-article-police