‘ ಬಡವ ರಾಸ್ಕಲ್ ‘ ಡಾಲಿ ಧನಂಜಯರ ಈ ಗುಣ ನಿಮಗೆ ಯಾರನ್ನು ನೆನಪಿಸುತ್ತದೆ…?

Mysore-Kannada-film-badava-raskal-dolly-dhananjaya-friends

 

ಮೈಸೂರು, ಡಿ.26, 2021 : (www.justkannada.in news): ಸ್ಯಾಂಡಲ್ ವುಡ್ ನ ‘ಡಾಲಿ’ ಧನಂಜಯ್ ‘ಬಡವ ರಾಸ್ಕಲ್ ‘ ಸಿನಿಮಾವನ್ನು ತನ್ನ ಸ್ನೇಹಿತರಿಗಾಗಿಯೇ ನಿರ್ಮಿಸಿ ಅಭಿನಯಿಸಿದ್ದು. ಡಾಲಿಯ ಈ ಸಹಕಾರ ಗುಣವನ್ನು ಆತನ ಗೆಳೆಯರು ಬಹುವಾಗಿ ಮೆಚ್ಚುಕೊಳ್ಳುತ್ತಾರೆ.

ಈ ಬಗ್ಗೆ ಮತ್ತೊಂದು ಖ್ಯಾತ ಕಲಾವಿದ, ಮೈಸೂರಿನ ಬಾದಲ್ ನಂಜುಂಡಸ್ವಾಮಿ ಹೀಗೆ ಬರೆಯುತ್ತಾರೆ….

ಸುಮಾರು ಹತ್ತು ಹನ್ನೊಂದು ವರ್ಷದ ಹಿಂದೆ. ಮೈಸೂರಿನಲ್ಲಿ ಸಿನೆಮಾದ ಅವಕಾಶ ನಾವೇ ಮಾಡಿಕೊಳ್ಳಬೇಕೆಂದು ನಾವೆಲ್ಲರೂ ಬಡವರು ಸೇರಿ ಒಂದು ಸಿನೆಮಾ ಮಾಡಿದ್ದೆವು. ಇಸ್ಲಾ ಅದನ್ನು ಡೈರೆಕ್ಟ್ ಮಾಡಿದ್ದ. ಸಿನೆಮಾದ ಹೆಸರು “ಸ್ಪೇಸಸ್ ಫಾರ್ ರೆಂಟ್” ಅಂತ. (ಮಾಕ್ಸಿಮ್ ಗಾರ್ಕಿಯವರ “ ಲೋಅರ್ ಡೆಪ್ತ್ಸ್” ಕೃತಿ ಆಧಾರಿತ) ಅದರಲ್ಲಿ ಧನ, ಪೂರ್ಣ ಆಕ್ಟ್ ಮಾಡಿದ್ದರು. ನಾಗ ಡೈರೆಕ್ಷನ್ ಡಿಪಾರ್ಟ್ಮೆಂಟ್ ಅಲ್ಲಿ ಕೆಲಸ ಮಾಡಿದ್ದ. ನಾನು ಆರ್ಟ್ ಡೈರೆಕ್ಷನ್ ಮಾಡಿದ್ದೆ.

ಒಂದೊಂದೇ ರೂಪಾಯಿ ಅಲ್ಲಲ್ಲಿ ಸಂಗ್ರಹಿಸಿ ಸಿನೆಮಾ ಮಾಡಿದ್ದೆವು. ಸಿನೆಮಾವನ್ನು ದೊಡ್ಡದಾಗಿ ಪ್ರಚಾರವೂ ಮಾಡಿದೆವು. ಒಂದು ಆಡಿಟೋರಿಯಂ ಬುಕ್ ಮಾಡಿ ಸಿನೆಮಾದ ಪ್ರದರ್ಶನವನ್ನೂ ಮಾಡಿದೆವು. ಚಿತ್ರದ ಉದ್ಘಾಟನೆಗೆ ಹಿರಿಯರಾದ ಎಂ ಎಸ್ ಸತ್ಯು ಅವರನ್ನು ಆಹ್ವಾನಿಸಿದ್ದೆವು. ಆಡಿಟೋರಿಯಂ ಕಿಕ್ಕಿರಿದು ತುಂಬಿತ್ತು. ಆದರೆ ಶೋ ದಿನ ಟೆಕ್ನಿಕಲ್ ಸಮಸ್ಯೆ ಇಂದಾಗಿ ಆಡಿಯೋ ಬಾರದೆ ಶೋ ಒಂಥರಾ ಫ್ಲಾಪ್ ಆಗಿತ್ತು! ಗೆಳೆಯರೆಲ್ಲರೂ ಅವತ್ತು ಅತ್ತೂ ಕರೆದು ಮಾಡಿದ್ದೆವು.

ಅಲ್ಲಿಂದ ನಮ್ಮ ಸಿನೆಮಾ ಪ್ರಯಾಣ ಒಂಥರಾ ಏರಿಳಿತವೇ! ವಿಶೇಷ ಏನಂದ್ರೆ ಈಗ ನಾವು ಗೆಲ್ಲುವುದಕ್ಕೆ ನಾವೇ ಮತ್ತೊಮ್ಮೆ ಸಿನಿಮಾ ಮಾಡಿಕೊಳ್ಳಬೇಕಿತ್ತು. ಬೆಳಕಿಗೆ ಬಂದಿದ್ದ ಧನನ ಜೊತೆ ಅದೇ ಹಳೆಯ ಗೆಳೆಯರಿದ್ದರು. ಬಹುತೇಕ ಗೆಳೆಯರನ್ನು ತನ್ನ ಮಡಿಲಲ್ಲಿಟ್ಟು ತಾಯಿ ತರಹ ಪೋಷಿಸಿಕೊಂಡು ಬರುವ ಅವನ ಆ ಪರಿಯೇ ಆಶ್ಚರ್ಯ ತರಿಸುವಂಥದ್ದು…ಇಲ್ಲಿಯವರೆಗೂ…! ಅದೇ ಅವನ ಸ್ಟ್ರೆಂಥ್ ಕೂಡ. ಎಲ್ಲರನ್ನೂ ಗುಡ್ಡೆ ಹಾಕಿಕೊಂಡು ತನ್ನ ಹಣದಲ್ಲೇ ಸಿನೆಮಾ ಮಾಡಿದ. ತಾನೊಬ್ಬನೇ ಅಲ್ಲ ತನ್ನವರೆಲ್ಲರೂ ಗೆಲ್ಲಬೇಕು ಎಂದು ಪ್ರತಿದಿನ ಹೇಳುತ್ತಿದ್ದ. ಪ್ರೂವ್ ಮಾಡಿದ.

ಆದ್ದರಿಂದ ‘ಬಡವ ರಾಸ್ಕಲ್’ ಸಿನಿಮಾ ನೋಡುವಾಗ ಸ್ನೇಹದ ಬಗೆಗಿನ ಅವನ ಮಾತುಗಳು ಕೇಳುವಾಗ ನಾನು ಕಣ್ ಒದ್ದೆಮಾಡಿಕೊಂಡು ನೋಡುತ್ತಿದ್ದೆ. ಯಾಕೆಂದರೆ ಅದು ಸಿನಿಮಾ ಪಾತ್ರ ಅಲ್ಲ, ಧನ ಇರುವುದೇ ಹಾಗೆ! ಅದು ಬರಿಯ ಕ್ಯಾರೆಕ್ಟರ್ ಅಲ್ಲ, ರಕ್ತಗತವಾಗಿ ಬಂದ ಒಳ್ಳೆತನ! ಹೀಗಾಗಿ ಅವನು ನಮ್ಮೆಲ್ಲರ ಬಾಸ್! ಹಳೆಯದನ್ನು ಹಳಬರನ್ನು ಮರೆಯಬಾರದು ಎಂಬ ಅವನ ಹೃದಯ ಶ್ರೀಮಂತಿಕೆಗೆ ಎರಡು ಸಣ್ಣ ಉದಾಹರಣೆ.

ಒಂದು: ತಾನು ತನ್ನ ಕನಸಿನ ಹೊಸ ರೇಂಜ್ ರೋವರ್ ಕಾರ್ ತಂದಾಗ ಹಳೆಯ ಟಿವಿಎಸ್ ಸ್ಕೂಟರನ್ನೂ ಪಕ್ಕಕ್ಕಿಟ್ಟು ಪೂಜೆ ಮಾಡಿ ನೆನಪು ಮಾಡಿಕೊಂಡದ್ದು! ಆ ಸ್ಕೂಟರಿನಲ್ಲಿ ನಾವು ನಾಲ್ಕು ನಾಲ್ಕು ಜನ ಒಟ್ಟೊಟ್ಟಿಗೆ ಓಡಾಡಿದ್ದಿದೆ.

ಮತ್ತೊಂದು, ತನಗೆ ಸಿನಿಮಾ ಮೈದಾನಕ್ಕೆ ಎಂಟ್ರಿ ಕೊಟ್ಟ ‘ತ್ರಿವೇಣಿ’ ಯನ್ನೇ ತಾನು ಮೇನ್ ಥಿಯೇಟರ್ ಆಗಿ ಆಯ್ಕೆ ಮಾಡಿಕೊಂಡದ್ದು! ಮೊದಲ ಚಿತ್ರ ‘ಡೈರೆಕ್ಟರ್ ಸ್ಪೆಷಲ್’ ಇಲ್ಲಿಯೇ ಪ್ರದರ್ಶನ ಕಂಡು, ಇಲ್ಲಿಯೇ ಈಗ ಗೆಲವು ದಾಖಲಾಯಿತು! ಬೇರೆ ಯಾರಾದರೂ ಸಿನೆಮಾದವರಾಗಿದ್ದರೆ ‘ಸೋಲಿನ ರುಚಿ ತೋರಿಸಿದ ಥಿಯೇಟರ್’ ಎಂದು ಇದನ್ನು ಮೇನ್ ಥೇಟರ್ ಆಗಿ ಒಪ್ಪಲು ಸಿದ್ಧರಿರುತ್ತಿರಲಿಲ್ಲವೇನೋ!

ಸಿನಿಮಾದಲ್ಲಿ ಅಭಿನಯಿಸಿರುವ ಗಣಪ ಪಾತ್ರದ ಪೂರ್ಣ, ನಾಗ, ಸೇಠು ಪಾತ್ರದ ಶಮಂತ, ಸಣ್ಣಪ್ಪ ಪಾತ್ರದ ಹರ್ಷ, ಕನ್ನಡ ಅನ್ವರ್ ಮಹದೇವಸ್ವಾಮಿ, ಕಬಾಬ್ ಸೆಲ್ಲರ್ ವಿವೇಕ, ಪ್ರೇಮಕುಮಾರಿ ಪಿ ಏ. ಬಹುತೇಕರು ಧನನ ಜೊತೆ ಸುಮಾರು ಹದಿನೇಳು ವರ್ಷದಿಂದ ಜತೆಗಿದ್ದವರೇ!

‘ಸ್ಪೇಸಸ್ ಫಾರ್ ರೆಂಟ್’ ಚಿತ್ರದ ನಿರ್ದೇಶಕ ಇಸ್ಲಾ , ಅದೇ ಚಿತ್ರದಲ್ಲಿ ನಟಿಸಿದ್ದ ಮತ್ತೊಬ್ಬ ಗೆಳಯ , ನಟ ರಿಷಿ ಜತೆ ‘ನೋಡಿಸ್ವಾಮಿ ಇವ್ನು ಇರೋದೇ ಹೀಗೆ” ಎಂಬ ಚಿತ್ರ ರೆಡಿ ಮಾಡಿಕೊಂಡು ಕೂತಿದ್ದಾನೆ. ಹಾಗು ” ಸ್ಪೇಸಸ್ ಫಾರ್ ರೆಂಟ್” ಸಹಾಯಕ ನಿರ್ದೇಶಕ ಆಗಿದ್ದ ಸುನಿಲ್ ಮೈಸೂರು ಈಗ ಪೂರ್ಣನನ್ನ ಹಾಕಿಕೊಂಡು ” ಆರ್ಕೆಸ್ಟ್ರಾ” ಚಿತ್ರ ಮಾಡಿಕೊಂಡು ರೆಡಿಮಾಡಿಕೊಂಡಿದ್ದಾನೆ.

“ಆರ್ಕೆಸ್ಟ್ರಾ”ಗೆಳೆಯರಿಗಾಗಿ ಆ ಚಿತ್ರದ ಎಲ್ಲ ಹಾಡುಗಳನ್ನು ಧನ ಬರೆದುಕೊಟ್ಟಿದ್ದಾನೆ. ಇದು ನನ್ನ ಫೇವರಿಟ್!! ಹಾಗು ಇದು ಧನಂಜಯ ಗೆಳೆಯರ ಬಳಗ! ಗೆಳೆಯರು ಮಾಡಿದ ಎಲ್ಲ ಪ್ರಯೋಗಗಳು ಯಶ ಕಾಣಲಿ. “ಬಡವ ರಾಸ್ಕಲ್” ಚಿತ್ರವು ಶತದಿನೋತ್ಸವ ಆಚರಿಸಲಿ..

key words : Mysore-Kannada-film-badava-raskal-dolly-dhananjaya-friends