ಮೈಸೂರು, ಜ.01,2020 : (www.justkannada.in news) : ಮುಕ್ತ ಹಾಗೂ ದೂರ ಶಿಕ್ಷಣ ಕಾರ್ಯಕ್ರಮ ನಡೆಸುವ ರಾಜ್ಯದ ಏಕಮಾತ್ರ ವಿಶ್ವವಿದ್ಯಾಲಯ ಕೆಎಸ್ಓಯು. ಇದಕ್ಕೆ ಕಾರಣಕರ್ತರಾದ ಸರಕಾರದ ಎಲ್ಲಾ ಮುಖ್ಯಸ್ಥರಿಗೂ ಧನ್ಯವಾದಗಳು ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವಿದ್ಯಾಶಂಕರ್ ಕೃತಜ್ಞತೆ ಸಲ್ಲಿಸಿದರು.
ಹೊಸವರ್ಷದ ಮೊದಲ ದಿನ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕುಲಪತಿ ಪ್ರೊ.ವಿದ್ಯಾಶಂಕರ್, ನೂತನ ವರ್ಷದ ಸಿಹಿ ಸುದ್ದಿ ಇದು. ಇನ್ನು ಮುಂದೆ ಕರ್ನಾಟಕ ರಾಜ್ಯ ಮುಕ್ತ ವಿವಿ ಮಾತ್ರ ದೂರ ಶಿಕ್ಷಣ ನಡೆಸುವ ರಾಜ್ಯದ ಏಕಮಾತ್ರ ವಿಶ್ವವಿದ್ಯಾನಿಲಯ ಎಂದು ರಾಜ್ಯ ಸರಕಾರ ಘೋಷಿಸಿದೆ. ಕಳೆದ ವಾರ ವಿಧಾನ ಮಂಡಲದ ಅಧಿವೇಶನದಲ್ಲಿ ಈ ಸಂಬಂಧದ ಕಾಯ್ದೆ ಅಂಗೀಕರಾವಾಗಿದ್ದು, ಇದೀಗ ರಾಜ್ಯಪಾಲರು ಇದಕ್ಕೆ ಅಂಕಿತ ಹಾಕಿದ್ದಾರೆ ಎಂದು ವಿವರಿಸಿದರು.
ಸರ್ಕಾರದಿಂದ ಅಧಿಕೃತ ಘೋಷಣೆ.
ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯ 2000 ಕಾಯ್ದೆಗೆ ತಿದ್ದುಪಡಿ ತಂದು, ಕೆಎಸ್ಒಯು ಮಾತ್ರ ಮುಕ್ತ ಹಾಗೂ ದೂರ ಶಿಕ್ಷಣ ನಡೆಸುವ ರಾಜ್ಯದ ಏಕಮಾತ್ರ ವಿಶ್ವವಿದ್ಯಾಲಯವನ್ನಾಗಿ ಘೋಷಣೆ ಮಾಡಿದೆ. ಇದರಿಂದ ‘ಎಲ್ಲರಿಗೂ ಎಲ್ಲೆಡೆ ಶಿಕ್ಷಣ’ ಎಂಬ ಕೆಎಸ್ಓಯುನ ಉದ್ದೇಶ ಸಫಲವಾದಂತಾಗಿದೆ. ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವ ಕೆಎಸ್ಒಯು ಕನಸು ಈಗ ನನಸಾಗಿದೆ. ಇದಕ್ಕೆ ಕಾರಣವಾದ ರಾಜ್ಯಪಾಲರಾದ ವಜುಭಾಯಿ ವಾಲಾ, ಸಿಎಂ ಯಡಿಯೂರಪ್ಪ ಹಾಗೂ ಡಿಸಿಎಂ ಡಾ. ಅಶ್ವಥ್ ನಾರಾಯಣ ಅವರಿಗೆ ವಿಶೇಷ ಧನ್ಯವಾದಗಳು ಎಂದು ಕುಲಪತಿ ಪ್ರೊ.ವಿದ್ಯಾಶಂಕರ್ ತಿಳಿಸಿದರು.
ಹೊಸ ಕೋರ್ಸ್ ಗಳ ಆರಂಭಕ್ಕೆ ಹಸಿರು ನಿಶಾನೆ :
ಕೆಎಸ್ಒಯು ಈಗ ಮುಕ್ತ ಮತ್ತು ದೂರಶಿಕ್ಷಣ ಮುಖಾಂತರ ಹೊಸದಾಗಿ 10 ಕೋರ್ಸ್ ಗಳನ್ನು ಆರಂಭಿಸಲು ಯುಜಿಸಿ ಅನುಮತಿ ನೀಡಿದೆ.
ಬಿ.ಎಸ್ಸಿ, ಬಿಬಿಎ, ಬಿಸಿಎ, ಬಿ.ಎಸ್ಸಿ.ಐಟಿ, ಎಂ.ಎಸ್ಸಿ ಐಟಿ, ಎಂಎಸ್ಸಿ ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಎಂ.ಎಸ್ಸಿ ಫುಡ್ ಸೈನ್ಸ್ ಮತ್ತು ನ್ಯೂಟ್ರಿಷನ್ ಸೇರಿದಂತೆ 10 ಹೊಸ ಕೋರ್ಸ್ ಗಳು ಇದೇ ಜನವರಿಯಲ್ಲಿ ಆರಂಭವಾಗಲಿದೆ. ಜತೆಗೆ ಆನ್ ಲೈನ್ ಮುಖಾಂತರ ಹೊಸದಾಗಿ ಎಂಕಾಂ, ಎಂಬಿಎ, ಎಂಎ, ಎಂಎಸ್ಸಿ ಐಟಿ, ಎಂಎಸ್ಸಿ ಕಂಪ್ಯೂಟರ್ ಸೈನ್ಸ್ ಸೇರಿದಂತೆ 8 ಕೋರ್ಸ್ ಆರಂಭಕ್ಕೆ ಕೆಎಸ್ಒಯು ಮುಂದಾಗಿದೆ ಎಂದು ಕುಲಪತಿ ಪ್ರೊ.ವಿದ್ಯಾಶಂಕರ್ ವಿವರಿಸಿದರು.
ಕೆಸ್ಒಯು ಆಲುಮ್ನಿಗೆ ವೇದಿಕೆ :
ಕೆಎಸ್ಓಯು ಸಂಸ್ಥೆ ಯಶಸ್ವಿಯಾಗಿ 25 ವರ್ಷಗಳನ್ನು ಪೂರೈಸಿದೆ. ಈ ಹಿನ್ನೆಲೆಯಲ್ಲಿ, ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಇದರ ಮೊದಲ ಹಂತವಾಗಿ ಅಲುಮ್ನಿ ರಚನೆಗೆ ಚಾಲನೆ ನೀಡಲಾಗಿದೆ. ಫೇಸ್ ಬುಕ್ ಪೇಜ್, ವೆಬ್ ಸೈಟ್ ಮೂಲಕ ಹಳೇ ವಿದ್ಯಾರ್ಥಿಗಳನ್ನು ಒಂದೇ ವೇದಿಕೆಯಡಿ ತರಲು ರೂಪುರೇಷೆ ಸಿದ್ಧವಾಗುತ್ತಿದೆ.
ಕೆಎಸ್ಒಯುವಿನಲ್ಲಿ ಓದಿದ ಹಲವಾರು ಮಂದಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅದೇ ರೀತಿ ಪ್ರಭಾವಿ ರಾಜಕಾರಣಿಗಳು ಸಹ ಕೆಎಸ್ಒಯುವಿನ ವಿದ್ಯಾರ್ಥಿಗಳು. ಅವರೆಲ್ಲರ ಸಹಕಾರದಿಂದ ಮುಕ್ತ ವಿವಿಗೆ ಕಾಯಕಲ್ಪ ಮಾಡಲಾಗುತ್ತದೆ. ವಿಧೇಶಗಳಲ್ಲಿರುವಂತೆ ಹಳೇ ವಿದ್ಯಾರ್ಥಿಗಳೇ ವಿಶ್ವವಿದ್ಯಾನಿಲಯ ಮುನ್ನಡೆಸುವ ವ್ಯವಸ್ಥೆ ನಮ್ಮಲ್ಲೂ ಜಾರಿಯಾಗಬೇಕು ಎಂಬುದು ಉದ್ದೇಶ ಎಂದು ಕುಲಪತಿ ಹೇಳಿದರು.
ಜತೆಗೆ ಉನ್ನತ ಮಟ್ಟದ ಸಮಿತಿ ರಚನೆ ಮಾಡಿ ಹೊಸ ಕಾರ್ಯಕ್ರಮಗಳನ್ನ ಪರಿಚಯ ಮಾಡಿಕೊಡುವ ಬಗೆಗೂ ಚಿಂತಿಸಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗುವ ಸಲುವಾಗಿ ತರಬೇತಿಗೆ ಆಗಮಿಸುವ ವಿದ್ಯಾರ್ಥಿಗಳಿಗೆ ಪೂರಕವಾಗುವಂತೆ 24x 7 ಗ್ರಂಥಾಲಯ ತೆರೆಯಲು ಉದ್ದೇಶಿಸಲಾಗಿದೆ. ಜತೆಗೆ ವಸತಿ ಸೌಲಭ್ಯವುಳ್ಳ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಜೈನಹಳ್ಳಿ ಸತ್ಯನಾರಾಯಣ ಗೌಡ ಅವರ ನೇತೃತ್ವದಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿ. ಈ ಮೊದಲು ಕೇವಲ 200 ರಷ್ಟಿದ್ದ ವಿದ್ಯಾರ್ಥಿಗಳ ಸಂಖ್ಯೆ ಇದೀಗ 1100 ರ ಗಡಿದಾಟಿದೆ ಎಂದು ಪ್ರೊ.ವಿದ್ಯಾಶಂಕರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಪರಿಪೂರ್ಣ ಮೂಲಸೌಕರ್ಯ :
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಸಂಪೂರ್ಣ ಮೂಲ ಸವಲತ್ತುಗಳನ್ನು ಹೊಂದಿದೆ. ಹೊಸ ಹೊಸ ಕೋರ್ಸ್ ಆರಂಭಕ್ಕೆ ಅಗತ್ಯವಿರುವ ಎಲ್ಲಾ ಸವಲತ್ತುಗಳು ನಮ್ಮಲಿವೆ. ಈ ಕಾರಣಕ್ಕೆ ಯುಜಿಸಿ, ಕೋರ್ಸ್ ಆರಂಭಕ್ಕೆ ಅನುಮತಿ ನೀಡಿದೆ ಎಂದು ಕುಲಸಚಿವ ಪ್ರೊ.ಲಿಂಗರಾಜ ಗಾಂಧಿ ಹೇಳಿದರು.
ಭೌತಿಕ ಸವಲತ್ತುಗಳ ಜತೆಗೆ ಕಳೆದ ಒಂದುವರೆ ವರ್ಷದಲ್ಲಿ ಕೆಎಸ್ಓಯು ಸಾಕಷ್ಟು ಡಿಜಿಟಲ್ ಆಗಿರುವುದು, ಪ್ರವೇಶಾತಿ ಪ್ರಕ್ರಿಯೆ ಗಣಕೀಕರಣಗೊಂಡಿರುವುದು, ಆನ್ಲೈನ್ ತರಗತಿಗಳು, ಕೆಎಸ್ಓಯು ಸ್ಟೂಡೆಂಟ್ ಆ್ಯಪ್ ತಂದಿರುವುದು ಯುಜಿಸಿಯ ಮೆಚ್ಚುಗೆಗೆ ಕಾರಣವಾಗಿದೆ. ಜತೆಗೆ ಸಾಂಪ್ರದಾಯಿಕ ವಿಶ್ವವಿದ್ಯಾನಿಲಯಗಳಲ್ಲಿ ಇರುವಂತೆ ಆಧ್ಯಾಪಕರ ಪದೋನ್ನತಿಗೂ ಕ್ರಮವಹಿಸಲಾಗಿದೆ ಎಂದು ವಿವರಿಸಿದರು.
key words : mysore-karnataka-open-university-distance-education-vc-vidyashankar-KSOU