KSOU ಕುಲಪತಿ ವಿರೋಧದ ನಡುವೆಯೂ ಅಧ್ಯಾಪಕರ ಸಂಘಕ್ಕೆ ನೂತನ ಕಾರ್ಯಕಾರಿ ಸಮಿತಿ ‘ಮುಕ್ತ’ ಆಯ್ಕೆ.

 

ಮೈಸೂರು, ಡಿ.10, 2021 : (www.justkannada.in news) : ಕರ್ನಾಟಕ ರಾಜ್ಯ ಮುಕ್ತ ವಿವಿಯ ಅಧ್ಯಾಪಕರ ಸಂಘದ ಸಭೆಗೆ ಕುಲಪತಿಗಳು ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ, ಬಯಲಿನಲ್ಲೇ ಸಭೆ ನಡೆಸಿದ ಪ್ರಾಧ್ಯಾಪಕರು ನೂತನ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಿತು.

ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಅಧ್ಯಾಪಕರ ಸಂಘ…

ಗುರುವಾರ ನಡೆದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಅಧ್ಯಾಪಕರ ಸಂಘ(ರಿ)ದ ಸರ್ವ ಸದಸ್ಯರ ಸಭೆಯಲ್ಲಿ ಕಾರ್ಯಕಾರಿ ಸಮಿತಿಯನ್ನು ಹೊಸದಾಗಿ ಮುಂದಿನ ಅವಧಿಗೆ ಆಯ್ಕೆ ಮಾಡಲಾಯಿತು. ಮುಕ್ತ ವಿವಿಯ ಕ್ಯಾಂಪಸ್ ಆವರಣದಲ್ಲಿನ ಕಾವೇರಿ ಭವನದಲ್ಲಿ ಸರ್ವ ಸಮಿತಿ ಸಭೆ ನಡೆಸಲು ವಿಶ್ವವಿದ್ಯಾನಿಲಯಕ್ಕೆ ಡಿ. 6 ರಂದೇ ಲಿಖಿತ ಮನವಿ ಸಲ್ಲಿಸಲಾಗಿತ್ತು,

ಆದರೆ ಕುಲಪತಿಗಳು ಸಭೆಗೆ ಸ್ಥಳಾವಕಾಶ ನಿರಾಕರಿಸಿದ್ದಾರೆ ಎಂದು ಮುಕ್ತ ವಿವಿ ಕುಲಸಚಿವರು ಡಿ. 9 ರಂದು ಪತ್ರ ಮುಖೇನ ಅಧ್ಯಾಪಕರ ಸಂಘಕ್ಕೆ ಸ್ಪಷ್ಟಪಡಿಸಿದ ಕಾರಣ ಕಾವೇರಿ ಭವನದ ಹೊರಭಾಗ ರಸ್ತೆಯ ಪಕ್ಕ ಮರದ ಕೆಳಗೆ ಬಯಲಿನಲ್ಲೇ ಮುಕ್ತವಾಗಿ  ಸರ್ವಸದಸ್ಯರ ಸಾಮಾನ್ಯ ಸಭೆ ನಡೆಯಿತು.

ಅಧ್ಯಕ್ಷರಾಗಿ ಡಾ. ಎನ್.ಜಿ.ರಾಜು, ಉಪಾಧ್ಯಕ್ಷರಾಗಿ ಡಾ.ಸಿ. ಮಹದೇವಮೂರ್ತಿ, ಪ್ರಧಾನ ಕಾರ್ಯದರ್ಶಿಯಾಗಿ ಡಾ. ಜಗದೀಶ್‌ ಬಾಬು ಹೆಚ್.ಕೆ., ಖಜಾಂಚಿಯಾಗಿ ಡಾ. ಎಸ್. ನಿರಂಜನ್ ರಾಜ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಡಾ. ಎನ್. ಕೃಷ್ಣಪ್ಪ, ಡಾ. ಎಂ.ಎಸ್. ಹೇಮಲತಾ, ಡಾ. ಜೆ.ಎಸ್. ಚಂದ್ರಶೇಖರ್, ಶ್ರೀ ಎಸ್.ವಿ. ನಿರಂಜನ್, ಪ್ರೊ. ಎ. ರಂಗಸ್ವಾಮಿ, ಡಾ. ಗೋಪಾಲಸ್ವಾಮಿ, ಡಾ. ಛಾಯ .ಆರ್ ರವರು ಆಯ್ಕೆಯಾಗಿರುತ್ತಾರೆ.

ಈಗ ಏಕೆ ಸಂಘ..? :

ಕರ್ನಾಟಕ ರಾಜ್ಯ ಮುಕ್ತ ವಿವಿ ಅಧ್ಯಾಪಕರ ಸಂಘ ನೊಂದಣಿಗೊಂಡು ಹತ್ತಾರು ವರ್ಷಗಳೇ ಕಳೆದಿತ್ತು. ಆದರೆ ಕೆಲ ವರ್ಷಗಳಿಂದ ಅದು ನಿಷ್ಕ್ರೀಯವಾಗಿತ್ತು. ಇದೀಗ ಮುಕ್ತ ವಿವಿಯಲ್ಲಿನ ಬೆಳವಣಿಗೆಗಳಿಂದ ಅಸಮಧಾನಗೊಂಡು, ಹಳಿ ತಪ್ಪಿರುವ ವಿವಿಯನ್ನು ಉಳಿಸಿಕೊಳ್ಳುವ ಸಲುವಾಗಿ ಸಂಘಕ್ಕೆ ಮರುಜೀವ ನೀಡಲಾಗಿದೆ ಎಂದು ಹೆಸರೇಳಲು ಇಚ್ಚಿಸದ ಕೆಲ ಪ್ರಾಧ್ಯಾಪಕರು ತಿಳಿಸಿದ್ದಾರೆ.

 

key words : Mysore-Karnataka-open-university-KSOU-teachers-association-formed