ಮೈಸೂರಿನಲ್ಲಿ ಕೆಂಪೇಗೌಡರ ನೂತನ ಪ್ರತಿಮೆ ಸ್ಥಾಪನೆಗೆ ಪೊಲೀಸರಿಂದ ತಡೆ

ಮೈಸೂರು,ಜೂನ್,27,2024 (www.justkannada.in): ಇಂದು ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ 515ನೇ ಜಯಂತಿಯನ್ನ ಆಚರಣೆ ಮಾಡಲಾಗುತ್ತಿದ್ದು  ಈ ನಡುವೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೆಂಪೇಗೌಡರ ನೂತನ ಪ್ರತಿಮೆ ಸ್ಥಾಪನೆಗೆ ಪೊಲೀಸರು ತಡೆಯೊಡ್ಡಿದ ಘಟನೆ ನಡೆದಿದೆ.

ನಗರದ ಲಲಿತ್ ಮಹಲ್ ಟಿ ಜಂಕ್ಷನ್ ವೃತ್ತದಲ್ಲಿ ಕೆಂಪೇಗೌಡರ ನೂತನ ಪ್ರತಿಮೆ ಸ್ಥಾಪಿಸಲು ಉದ್ದೇಶಿಸಲಾಗಿತ್ತು. ಆದರೆ ಪೊಲೀಸರು ಇದಕ್ಕೆ ತಡೆಯೊಡ್ಡಿದ್ದಾರೆ.  ಪ್ರತಿಮೆ ಸ್ಥಾಪನೆ ವಿಚಾರ ಬಿರುಸುಗೊಂಡ ಹಿನ್ನೆಲೆ, ಸ್ಥಳದಲ್ಲಿ ಮೂರು ಕೆಎಸ್‌ ಆರ್‌ಪಿ ವಾಹನಗಳನ್ನ ಭದ್ರತೆಗೆ ನಿಯೋಜಿಸಲಾಗಿದೆ.

ಸ್ಥಳಕ್ಕೆ ನಗರ ಪೊಲೀಸ್ ಕಮಿಷನರ್ ರಮೇಶ್ ಬಾನೋತ್, ಡಿಸಿಪಿ ಜಾಹ್ನವಿ ಭೇಟಿ ನೀಡಿ, ಪರಿಸ್ಥಿತಿ ಅವಲೋಕನ ಮಾಡಿದ್ದಾರೆ. ಅನುಮತಿ ಪಡೆಯದೆ ಪ್ರತಿಮೆ ಹಾಕಲು ಮುಂದಾಗಿದ್ದ ಹಿನ್ನೆಲೆಯಲ್ಲಿ ಕೆಂಪೇಗೌಡರ ಪ್ರತಿಮೆ ಸ್ಥಾಪಿಸುವುದನ್ನ ಪೊಲೀಸರು ತಡೆ ಹಿಡಿದಿದ್ದಾರೆ. ಪೊಲೀಸರಿಂದ ಅನುಮತಿ ದೊರಕದ ಹಿನ್ನೆಲೆ,  ಕೆಂಪೇಗೌಡರ ಫ್ಲೆಕ್ಸ್ ಇಟ್ಟು ಒಕ್ಕಲಿಗ ಮುಖಂಡರು ಪೂಜೆ ಸಲ್ಲಿಸಿದ್ದಾರೆ. ಶಾಸಕ ಹರೀಶ್‌ ಗೌಡ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಮಾದೇಗೌಡ ಸೇರಿ ಒಕ್ಕಲಿಗ ಮುಖಂಡರು ಭಾಗಿಯಾಗಿದ್ದರು.

ಈ ಕುರಿತು ಮಾತನಾಡಿದ ಶಾಸಕ ಕೆ.ಹರೀಶ್ ಗೌಡ, ಕೆಂಪೇಗೌಡ ಪ್ರತಿಮೆಗೆ ಅವಕಾಶ ಸಿಕ್ಕಿಲ್ಲ.  ಸಂಗೀತ ಕಾರ್ನಾರ್ ಜಂಕ್ಷನ್ ಗೆ ಕೆಂಪೇಗೌಡ ವೃತ್ತ ಎಂದು ನಾಮಕಾರಣ ಮಾಡಲಾಗಿತ್ತು. ಹೀಗಾಗಿ ಪ್ರತಿಮೆ ನಿರ್ಮಾಣ ಕಷ್ಟ ಆಗಲ್ಲ ಅಂದುಕೊಂಡಿದ್ದವು. ಆದರೆ ಅಧಿಕಾರಿಗಳು ಪ್ರತಿಮೆ ಸ್ಥಾಪನೆ ಮಾಡಲು ಅವಕಾಶ ಕೊಡಲಿಲ್ಲ. ಈ ವೃತ್ತದಲ್ಲಿ ಕೆಂಪೇಗೌಡ ಪ್ರತಿಮೆ ಸ್ಥಾಪನೆಗೆ ಯಾವುದೇ ಅಡ್ಡಿಗಳಿಲ್ಲ. ಹೀಗಾಗಿ ಸರ್ಕಾರದ ಅನುಮತಿ ಪಡೆದು ಪ್ರತಿಮೆ ಸ್ಥಾಪಿಸಿ ಎಂದು ಹೇಳಿದ್ದಾರೆ. ಈಗಾಗಲೇ ಸಿಎಂ ಹಾಗೂ ಉಸ್ತುವಾರಿ ಸಚಿವರ ಜೊತೆ ಮಾತನಾಡಿದ್ದೇನೆ. ಅವರು ಕೂಡ ಇದೇ ಸಲಹೆ ಕೊಟ್ಟಿದ್ದಾರೆ. 15 ದಿನಗಳಲ್ಲಿ ಪ್ರತಿಮೆ ಸ್ಥಾಪನೆ ಮಾಡುತ್ತೇವೆ ಎಂದು ಹೇಳಿದರು.

Key words: mysore, Kempegowda, new statue, police