ಮೈಸೂರು,ಮಾರ್ಚ್,12,2024(www.justkannada.in): ಹಾಲಿ ಸಂಸದ ಪ್ರತಾಪ್ಸಿಂಹಗೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೈ ತಪ್ಪುವುದು ಬಹುತೇಕ ಖಚಿತವಾಗಿದ್ದು ಈ ಕುರಿತು ಸ್ವತಃ ಪ್ರತಾಪ್ ಸಿಂಹ ಅವರೇ ಸುಳಿವು ನೀಡಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಈಗಲೂ ನನಗೆ ಟಿಕೆಟ್ ಸಿಗುವ ವಿಶ್ವಾಸವಿದೆ. ಒಂದು ವೇಳೆ ಟಿಕೆಟ್ ಕೈ ತಪ್ಪಿದರೂ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ನಾನು ಕೂಡ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತೇನೆ. ಪಕ್ಷದ ಅಭ್ಯರ್ಥಿ ಪರ ಬಂಟಿಂಗ್ಸ್ ಬ್ಯಾನರ್ ಕಟ್ಟಿ ಮನೆ ಮನೆಗೆ ತೆರಳಿ ಪ್ರಚಾರ ನಡೆಸುತ್ತೇನೆಂದು ಹೇಳುವ ಮೂಲಕ ಟಿಕೆಟ್ ಕೈ ತಪ್ಪಿರುವ ಕುರಿತು ಸುಳಿವು ನೀಡಿದರು.
ಅರಮನೆಯ ಎಸಿ ರೂಂ ನಲ್ಲಿ ರಾಜನಾಗಿ ಇರುವ ಬದಲು ಪ್ರಜೆಗಳ ರೀತಿ ಬದುಕುಲು ಯದುವೀರ್ ಬಂದರೇ ಸ್ವಾಗತ.
ಮಾಧ್ಯಮಗಳಿಗೆ ಹೇಳಿಕೆ ನೀಡುವ ಭರದಲ್ಲಿ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಕಾಲೆಳೆದ ಸಂಸದ ಪ್ರತಾಪ್ ಸಿಂಹ, ಹವಾನಿಯಂತ್ರಿತ ಕೊಠಡಿಯಲ್ಲಿರುವ ಮಹಾರಾಜರು ಚುನಾವಣೆಗೆ ಸ್ಪರ್ಧಿಸಲು ಮುಂದಾಗಿರುವುದನ್ನು ಸ್ವಾಗತಿಸುತ್ತೇನೆ. ಅರಮನೆಯ ಎಸಿ ರೂಂ ನಲ್ಲಿ ರಾಜನಾಗಿ ಇರುವ ಬದಲು ಪ್ರಜೆಗಳ ರೀತಿ ಬದುಕುಲು ಯದುವೀರ್ ಬಂದರೇ ಸ್ವಾಗತ. ಮಹಾರಾಜರು ರಾಜಕಾರಣಕ್ಕೆ ಬಂದು ಜನ ಸಾಮಾನ್ಯರ ಬಳಿಗೆ ಬರಲಿದ್ದಾರೆ. ಅವರು ರಾಜಕಾರಣಕ್ಕೆ ಬಂದರೆ ಜನರಿಗೆ ಹಲವಾರು ರೀತಿಯ ಅನುಕೂಲ ಆಗಲಿದೆ. ಮಹಾರಾಜರು ಜನ ಸಾಮಾನ್ಯರಿಗೆ, ಪಕ್ಷದ ನಾಯಕರಿಗೆ ಕೈ ಮುಗಿಯಬೇಕು. ಪಕ್ಷದ ಸಿದ್ದಾಂತದಂತೆ ನಾಯಕರು ವೇದಿಕೆಯ ಮೇಲೆ ಆಸೀನರಾದರೆ ಜನಸಾಮಾನ್ಯರ ಸಾಲಿನಲ್ಲಿ ಕೂರಬೇಕು ಎಂದು ಹೇಳಿದರು.
ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರವಾಲ್ ನನ್ನ ಭೇಟಿ ಮಾಡಲು ಕರೆದಿದ್ದಾರೆ. ಇಂದು ಮಧ್ಯಾಹ್ನ ಬೆಂಗಳೂರಿಗೆ ತೆರಳುತ್ತೇನೆ. ನನಗೆ ಈ ಕ್ಷಣಕ್ಕೂ ವಿಶ್ವಾಸವಿದೆ. ಸಂಘಟನೆ, ಸಿದ್ದಾಂತಕ್ಕೆ ಗಟ್ಟಿಯಾಗಿ ನಿಂತಿರುವ ನನಗೆ ಟಿಕೆಟ್ ಸಿಗುತ್ತದೆ. 25 ಸಂಸದರಲ್ಲಿ ನನ್ನಷ್ಟು ಹಿಂದೂತ್ವದ ಕಮಿಟ್ ಮೆಂಟ್ ಇರುವ ಮತ್ಯಾರು ಇದ್ದಾರೆ? ಹಿಂದೂತ್ವದ ವಿಚಾರದಲ್ಲಿ ನನ್ನನ್ನು ಯಾರಿಗೂ ಮ್ಯಾಚ್ ಮಾಡಲು ಯಾರು ಆಗಲ್ಲ. ಮೋದಿ ಅವರ ಬಗ್ಗೆ ಸಿದ್ದರಾಮಯ್ಯ ಬಾಯಿಗೆ ಬಂದ ರೀತಿ ಟೀಕಿಸಿದ್ದಾಗ ಸಿದ್ದರಾಮಯ್ಯ ಮಾತನ್ನು ದೊಡ್ಡ ಮಟ್ಟದಲ್ಲಿ ಖಂಡಿಸುವ ವ್ಯಕ್ತಿ ಈ ಪ್ರತಾಪ್ ಸಿಂಹ. ಇದು ನನ್ನ ದೌರ್ಬಲ್ಯವಾ? ಮೈಸೂರು – ಕೊಡಗು ಅಭಿವೃದ್ಧಿ ಗೆ ಅತಿ ಹೆಚ್ಚಿನ ಅಭಿವೃದ್ಧಿ ಕೆಲಸ ಮಾಡಿದ್ದು ನನ್ನ ದೌರ್ಬಲ್ಯ ವಾ? ನನಗೆ ಪಕ್ಷ ನಿಷ್ಠೆ ನನಗೆ ಇದೆ. ಬ್ಯಾನರ್, ಬಂಟಿಂಗ್ ಕಟ್ಟಲು ನಾನು ಸಿದ್ದ. ನನಗಾಗಿ ಪಕ್ಷ, ಕಾರ್ಯಕರ್ತರು ದುಡಿದಿದ್ದಾರೆ. ನಾನು ಮುಂದೆ ಅವರಂತೆಯೆ ದುಡಿಯುತ್ತೇನೆ ಎಂದು ಪ್ರತಾಪ್ ಸಿಂಹ ತಿಳಿಸಿದರು.
ಯದುವೀರ್ ಟಿಕೆಟ್ ಕೊಡುವುದು ನಿಜವಾದದರೆ ಅದನ್ನು ಸ್ವಾಗತಿಸುತ್ತೇನೆ. ಕಾರ್ಯಕರ್ತನಾಗಿ ಅವರ ಪರ ಕೆಲಸ ಮಾಡುತ್ತೇನೆ. ಅರಮನೆಯ ಎಸಿ ರೂಂ ನಲ್ಲಿ ರಾಜನಾಗಿ ಇರುವ ಬದಲು ಪ್ರಜೆಗಳ ರೀತಿ ಬದುಕುಲು ಯದುವೀರ್ ಬಂದರೆ ಸ್ವಾಗತಿಸದೆ ಇರುವುದಕ್ಕೆ ಆಗುತ್ತಾ. ರಾಜ – ಪ್ರಜೆ ನಡುವೆ ವ್ಯತ್ಯಾಸ ತೆಗೆದು ರಾಜರೇ ಪ್ರಜೆ ಜೊತೆ ಇರಲು ಬಂದರೆ ನನ್ನ ಸ್ವಾಗತ. ಅರಮನೆ ಆಸ್ತಿ ವಿಚಾರದಲ್ಲಿ ಸರಕಾರದ ನಡುವೆ ವ್ಯಾಜ್ಯಗಳಿವೆ . ಅದರಲ್ಲಿ ಬಹುತೇಕ ಆಸ್ತಿಗಳು ಸಾರ್ವಜನಿಕರ ಬಳಕೆಯಲ್ಲಿವೆ. ಯದುವೀರ್ ಜನಪ್ರತಿನಿಧಿ ಆಗಿ ಅದನ್ನೆಲ್ಲಾ ಜನರಿಗೆ ಬಿಟ್ಟು ಕೊಡಿಸುತ್ತಾರೆ. ಚಾಮುಂಡಿ ಬೆಟ್ಟದ ಮೇಲಿನ ಅರಮನೆ ಆವರಣದ ಒಳಗೆ ಪೈಪ್ ಲೈನ್ ಹಾಕಲು ಅರಮನೆ ವಿರೋಧಿಸಿದೆ. ಯದುವೀರ್ ಜನಪ್ರತಿನಿಧಿ ಆದರೆ ಆ ಸಮಸ್ಯೆ ಬಗೆಹರಿಯುತ್ತೆ ಎಂದು ಟಾಂಗ್ ಕೊಟ್ಟರು.
ಸುಖದ ಸುಪತ್ತಿಗೆಯಲ್ಲಿದ್ದ ಮಹಾರಾಜರನ್ನು ಮನವೊಲಿಸಿ ರಾಜಕೀಯಕ್ಕೆ ತಂದ ಮುಖಂಡರಿಗೆ ಧನ್ಯವಾದ.
ಹಾಗೆಯೇ ಶ್ರೀ ರಾಜೇಂದ್ರ ಸ್ವಾಮೀಜಿ ಪ್ರತಿಮೆ ವಿಚಾರದಲ್ಲಿ ಅರಮನೆಯವರ ನ್ಯಾಯಾಲಯಕ್ಕೆ ಹೋಗಿದ್ದಾರೆ. ಯದುವೀರ್ ಈ ಸಮಸ್ಯೆ ಬಗೆಹರಿಸಿ ರಾಜೇಂದ್ರ ಶ್ರೀಗಳ ಪ್ರತಿಮೆ ಅನಾವರಣ ಮಾಡುತ್ತಾರೆ. ಅರಮನೆ ಒಳಗೆ ಅರಾಮಾಗಿ ಇದ್ದಂತ ವ್ಯಕ್ತಿ ಸಿದ್ದರಾಮಯ್ಯ ವಿರುದ್ದ ಹೋರಾಟ ಮಾಡಲು ಬೀದಿಗೆ ಬಂದರೆ ನಮಗೆ ಸಂತೋಷ. ಅರಮನೆ ವೈಭೋಗ ಬೇಕಾಗಿಲ್ಲ. ಜನರ ಜೊತೆ ಹೋರಾಟಕ್ಕೆ ಬರ್ತಿನಿ ಅಂತಾ ಹೊರಟಿದ್ದಾರೆ. ಅದಕ್ಕೆ ಸ್ವಾಗತ. ಪೊಲೀಸ್ ಠಾಣೆಗೆ ಬಂದು ನಮ್ಮ ಕಾರ್ಯಕರ್ತರ ಸಮಸ್ಯೆ ಬಗೆಹರಿಸಲು ರಾಜರು ಬಂದರೆ ಸಂತೋಷ ಅಲ್ವಾ? ಸುಖದ ಸುಪತ್ತಿಗೆಯಲ್ಲಿ ಇದ್ದ ನಮ್ಮ ಮಹಾರಾಜರನ್ನು ಮನವೊಲಿಸಿ ರಾಜಕೀಯಕ್ಕೆ ತಂದ ನಮ್ಮ ಮುಖಂಡರಿಗೆ ಧನ್ಯವಾದ ಎಂದು ಹೊಗಳಿದಂತೆ ವ್ಯಂಗದ ಮೂಲಕ ಪ್ರತಾಪ್ ಸಿಂಹ ಟಾಂಗ್ ಕೊಟ್ಟರು.
Key words: mysore-kodagu- lose -ticket: MP Pratap Simha, – royalist -Yaduveer