ಮೈಸೂರು,ಸೆಪ್ಟಂಬರ್,27,2020(www.justkannada.in): ಮುಡಾ ಕಚೇರಿ ದುರುಪಯೋಗವಾಗುತ್ತಿದೆ. ಕೆಲವು ಮುಡಾ ಸಭೆಗಳಲ್ಲಿ ಪತ್ರಕರ್ತರಿಗೆ ಪ್ರವೇಶ ನೀಡದೇ ಸಭೆ ನಡೆಸುತ್ತಾರೆ. ಹೀಗಾಗಿ ಮೊದಲು ಸಭೆಗಳಿಗೆ ಪತ್ರಕರ್ತರಿಗೆ ಪ್ರವೇಶ ಕಲ್ಪಿಸಿ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಆಗ್ರಹಿಸಿದರು.
ಮೈಸೂರಿನ ಇಂದಿರಾಗಾಂಧಿ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ವಕ್ತಾರ ಲಕ್ಷ್ಮಣ್, ಮುಡಾ ಕಛೇರಿ ದುರುಪಯೋಗವಾಗುತ್ತಿದೆ. ಸಂಜೆ 5 ಗಂಟೆಯ ನಂತರ ಅಲ್ಲಿ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಸರ್ಕಾರಿ ಅಧಿಕಾರಿಗಳು ಯಾರದ್ದೋ ನಿರ್ದೇಶನ ಮೇರೆಗೆ ಕೆಲಸ ಮಾಡುತ್ತಿರುವಂತೆ ಕಾಣುತ್ತಿದೆ. ಕೆಲವು ಮುಡಾ ಸಭೆಗಳಲ್ಲಿ ಪತ್ರಕರ್ತರಿಗೆ ಪ್ರವೇಶವೇ ನೀಡದೇ ಸಭೆ ನಡೆಸುತ್ತಾರೆ. ಮುಡಾ ಸಭೆಗಳಿಗೆ ಮೊದಲು ಪತ್ರಕರ್ತರಿಗೆ ಪ್ರವೇಶ ಕಲ್ಪಿಸಿ ಎಂದು ಒತ್ತಾಯಿಸಿದರು.
ಹಾಗೆಯೇ ಮುಡಾ ಅಧ್ಯಕ್ಷ ರಾಜೀವ್ ಅವರಿಗೆ ಕೆಲ ಪ್ರಶ್ನೆಗಳನ್ನ ಹಾಕಿದ ಎಂ. ಲಕ್ಷ್ಮಣ್, ಅಧ್ಯಕ್ಷರಾದ ಬಳಿಕ ನಿಮ್ಮ ಎಷ್ಟು ಎಕರೆ ಜಮೀನು ಮುಡಾ ವ್ಯಾಪ್ತಿಯಲ್ಲಿದೆ..? ಎಷ್ಟು ಎಕರೆ ಭೂಮಿ ಮುಡಾ ವ್ಯಾಪ್ತಿಯ ಹೊರಗಡೆ ಇದೆ..? ಎಂಬುದನ್ನು ಮೊದಲು ಸ್ಪಷ್ಟಪಡಿಸಿ. ಕಳೆದ ಹತ್ತು ವರ್ಷಗಳಲ್ಲಿ ಹತ್ತು ಸಾವಿರ ಎಕರೆ ಡಿನೋಟಿಫೈ ಮಾಡಿದ್ದಾರೆ. ಎಷ್ಟೋ ವರ್ಷಗಳಿಂದ ಜನ ಸಾಮಾನ್ಯರು ನಿವೇಶನಕ್ಕೆ ಅರ್ಜಿ ಸಲ್ಲಿಸಿ ಜಾತಕ ಪಕ್ಷಿಗಳ ರೀತಿ ಕಾಯುತ್ತಿದ್ದಾರೆ. ಅಂತಹವರಿಗೆ ಯಾವಾಗ ನಿವೇಶನ ನೀಡುವಿರಿ ಎಂಬುದನ್ನು ಮೊದಲು ಸ್ಪಷ್ಟಪಡಿಸಿ ಎಂದು ಆಗ್ರಹಿಸಿದರು.
ಸರಳ ದಸರಾ ಆಚರಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಎಂ.ಲಕ್ಷ್ಮಣ್, ಸರಳ ದಸರಾ ಆಚರಣೆ ಎಂದು ಹೇಳಿದ ಸರ್ಕಾರ ಅರಮನೆ ಆವರಣದಲ್ಲಿ ಎರಡು ಸಾವಿರ ಜನರಿಗೆ ಅವಕಾಶ ನೀಡುವುದಾಗಿ ಹೇಳುತ್ತಿದೆ. ಎರಡು ಸಾವಿರ ಜನರ ಜೊತೆಗೆ, ಪೊಲೀಸರು ಸಾವಿರ, ರಾಜಕಾರಣಿಗಳ ಕಡೆಯವರು ಒಂದು ಸಾವಿರ ಮಂದಿಯ ಜೊತೆಗೆ ನೂರಾರು ಪತ್ರಕರ್ತರು ಇರುತ್ತಾರೆ. ದಸರಾ ಆಚರಣೆ ವಿಚಾರದಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿ ಏನಾಯಿತು. ಹತ್ತು ಸಾವಿರ ಜನ ಸೇರಿಕೊಂಡು ದಸರಾ ಆಚರಿಸಿದರೆ ಕೊರೊನಾ ಮತ್ತಷ್ಟು ಹೆಚ್ಚಾಗಲಿದೆ. ಇಡೀ ರಾಜ್ಯಾದ್ಯಂತ ಕೊರೋನಾ ಸೋಂಕು ಹರಡಲಿದೆ ಎಂದು ಕಿಡಿಕಾರಿದರು.
ಹಾಗೆಯೇ ದಸರಾ ಆಚರಣೆಯಿಂದ ಅನಾನುಕೂಲಗಳೇ ಹೆಚ್ಚು. ಇಷ್ಟೊಂದು ಜನರನ್ನು ಸೇರಿಸಿಕೊಂಡು ದಸರಾ ಮಾಡಲು ಕೇಂದ್ರದಿಂದ ಅನುಮತಿ ಪಡೆದಿದ್ದೀರಾ? ರಾಜ್ಯ ಸರ್ಕಾರ ಜನರನ್ನು ಮುಟ್ಟಾಳರನ್ನಾಗಿಸುತ್ತಿದೆ. ಇದು ದೇಶದ ಹಾಗೂ ಜನರ ದೌರ್ಭಾಗ್ಯವಾಗಿದೆ ಎಂದು ಎಂ. ಲಕ್ಷ್ಮಣ್ ಅಸಮಾಧಾನ ಹೊರ ಹಾಕಿದರು.
Key words: mysore-kpcc- spokeperson- M.Lakshman-muda-office- Abuse