ಮೈಸೂರು,ಸೆಪ್ಟಂಬರ್,13,2023(www.justkannada.in): ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಿಂದ ನಾನು ಕೂಡ ಟಿಕೆಟ್ ಆಕಾಂಕ್ಷಿ. ಶುಶೃತ್ ಗೌಡ ಯಾರು ಅಂತಾ ಗೊತ್ತಿಲ್ಲ ಬ್ಯಾನರ್ ಫ್ಲೆಕ್ಸ್ ಹಾಕಿಕೊಂಡವರಿಗೆಲ್ಲಾ ಟಿಕೆಟ್ ಕೊಡೋಕೆ ಆಗುತ್ತಾ..? ಎಂದು ಪ್ರಶ್ನಿಸಿದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಯತೀಂದ್ರ ಸಿದ್ಧರಾಮಯ್ಯ ಸ್ಪರ್ಧಿಸಿದರೇ ನಾನು ಬೆಂಬಲಿಸುತ್ತೇನೆ ಎಂದು ತಿಳಿಸಿದರು.
ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಲೋಕಸಭಾ ಚುನಾವಣೆಗೆ ಮೈಸೂರಿನಿಂದ ಯತೀಂದ್ರ ಸಿದ್ಧರಾಮಯ್ಯ ನಿಂತರೆ ನಮ್ಮ ಸಂಪೂರ್ಣ ಬೆಂಬಲ ಅವರಿಗಿರುತ್ತದೆ. ಮುಕ್ತ ಮನಸ್ಸಿನಿಂದ ಬೆಂಬಲಿಸುತ್ತೇವೆ. ಈ ಬಾರಿ ಮೈಸೂರು ಲೋಕಸಭಾ ಕ್ಷೇತ್ರ ಗೆದ್ದೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡು ಪಲ್ಟಿ ಹೊಡೆಯಲಿವೆ.
ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಎಂ.ಲಕ್ಷ್ಮಣ್, ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡು ಪಲ್ಟಿ ಹೊಡೆಯಲಿವೆ. ಎರಡು ಪಕ್ಷಗಳ ಮೈತ್ರಿಯಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಬಿಜೆಪಿಯಿಂದ ಜೆಡಿಎಸ್ ಗೆ ಅದೇ ರೀತಿ ಜೆಡಿಎಸ್ ನಿಂದ ಬಿಜೆಪಿಗೂ ಅನುಕೂಲವಾಗುವುದಿಲ್ಲ. ಎರಡು ಪಕ್ಷಗಳ ಮೈತ್ರಿಯಿಂದ ಕಾಂಗ್ರೆಸ್ ಗೆ ಹೆಚ್ಚು ಅನುಕೂಲವಾಗಲಿದೆ. ವಿಧಾನಸಭೆ ಚುನಾವಣೆಗಿಂತ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಮತಗಳು ಕಾಂಗ್ರೆಸ್ ಗೆ ಬೀಳಲಿವೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ 22 ರಿಂದ 25 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಭವಿಷ್ಯ ನುಡಿದರು.
ಸಂಸದ ಪ್ರತಾಪ್ ಸಿಂಹ ನೂರಕ್ಕೆ ನೂರರಷ್ಟು ಸೋಲುತ್ತಾರೆ: ಗೆದ್ದರೆ ನಾನು ಊರು ಬಿಟ್ಟು ಬಿಡುತ್ತೇನೆ.
ಸಂಸದ ಪ್ರತಾಪ್ ಸಿಂಹ ಸೋಲಿನ ಭೀತಿಯಲ್ಲಿದ್ದಾರೆ. ಇದೇ ಕಾರಣದಿಂದ ಕಂಡ ಕಂಡವರ ಕಾಲು ಹಿಡಿಯುತ್ತಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸಂಸದ ಪ್ರತಾಪ್ ಸಿಂಹ 3 ಲಕ್ಷ ಮತಗಳ ಅಂತರದಿಂದ ಸೋಲುತ್ತಾರೆ. ಯಾವುದೇ ಕಾರಣಕ್ಕೂ ಪ್ರತಾಪ್ ಸಿಂಹ ಗೆಲ್ಲುವುದಿಲ್ಲ. ಈ ಬಗ್ಗೆ ಸಮೀಕ್ಷೆ ವರದಿಗಳು ಹೇಳಿವೆ. ಪ್ರತಾಪ್ ಸಿಂಹ 100 ಕ್ಕೆ 100ರಷ್ಟು ಸೋಲುತ್ತಾರೆ. ಪ್ರತಾಪ್ ಸಿಂಹ ಗೆದ್ದರೆ ನಾನು ಊರು ಬಿಟ್ಟು ಬಿಡುತ್ತೇನೆ ಎಂದು ಎಂ ಲಕ್ಷ್ಮಣ್ ಸವಾಲು ಹಾಕಿದರು.
ಹೆಚ್.ಡಿಕೆ ಬಗ್ಗೆ ಮಾತನಾಡಿದರೇ ನನಗೆ ಮೊಬೈಲ್ ಕಾಲ್ ಮಾಡಿ ಧಮ್ಕಿ ಹಾಕ್ತಿದಾರೆ.
ಕುಮಾರಸ್ವಾಮಿ ಬಗ್ಗೆ ಮಾತನಾಡಿದರೆ ನನಗೆ ಮೊಬೈಲ್ ಕಾಲ್ ಮಾಡಿ ಧಮ್ಕಿ ಹಾಕ್ತಿದಾರೆ. ಚಿಕ್ಕಬಳ್ಳಾಪುರದಿಂದ ಅದ್ಯಾರೋ ರೆಡ್ಡಿ ಎಂಬಾತ ಕಾಲ್ ಮಾಡಿ ಧಮ್ಕಿ ಹಾಕ್ತಿದ್ದಾನೆ. ಕುಮಾರಸ್ವಾಮಿ ಬಗ್ಗೆ ಮಾತನಾಡಬೇಡಿ ಎಂದು ನಾಲ್ಕೈದು ಮಂದಿ ಕಾಲ್ ಮಾಡಿ ಧಮ್ಕಿ ಹಾಕುತ್ತಿದ್ದಾರೆ ಎಂದು ಎಂ ಲಕ್ಷ್ಮಣ್ ಆರೋಪಿಸಿದರು.
ಯಾವ ಹಂತಕ್ಕಾದರೂ ಹೋಗಲಿ ನೀರು ಹರಿಸಲೇಬಾರದು.
ಕಾವೇರಿ ನೀರು ಹಂಚಿಕೆ ವಿಚಾರವಾಗಿ ಬಿಜೆಪಿ ಜೆಡಿಎಸ್ ನವರು ಅರ್ಥ ಮಾಡಿಕೊಳ್ಳಬೇಕು. ಇದು ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವುದಿಲ್ಲ. ಇದನ್ನು ಮುಂದಿಟ್ಟು ರಾಜ್ಯ ಸರ್ಕಾರದ ವಿರುದ್ಧ ಟೀಕೆ ಮಾಡುವುದು ಅದನ್ನೇ ಬಂಡವಾಳ ಮಾಡಿಕೊಳ್ಳುವುದು ಸರಿಯಲ್ಲ. ನಾಲ್ಕೂ ಜಲಾಶಯಗಳ ವ್ಯಾಪ್ತಿ ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವುದಿಲ್ಲ. 2018 ರಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ರಚನೆ ಆದ ಬಳಿಕ ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವುದಿಲ್ಲ. ಸೆಂಟ್ರಲ್ ವಾಟರ್ ಕಮಿಷನ್ ಅಡಿಯಲ್ಲಿ ಅದು ಬರುತ್ತದೆ. ಅದು ನೇರವಾಗಿ ಕೇಂದ್ರದ ಜಲಶಕ್ತಿ ಸಚಿವಾಲಯದ ಅಡಿಯಲ್ಲಿ ಬರುತ್ತದೆ. ಆಯೋಗದ ನಿರ್ದೇಶನವನ್ನು ಅದು ಪಾಲಿಸುತ್ತದೆ. ಹೀಗಾಗಿ ನಮ್ಮ ಬಳಿ ಏನೂ ಇಲ್ಲ. ಅಥಾರಿಟಿಯು ಸುಪ್ರೀಂ ಕೋರ್ಟ್ ಆದೇಶದ ರೀತಿ ಹೇಳಿದ್ದು ಪಾಲಿಸದೇ ಇದ್ದರೆ ಉಲ್ಲಂಘನೆಯಾಗುತ್ತದೆ. ಯಾವ ಹಂತಕ್ಕಾದರೂ ಹೋಗಲಿ ನೀರು ಹರಿಸಲೇಬಾರದು. 4 ಜಲಾಶಯಗಳಲ್ಲಿ ಒಟ್ಟು ನೀರಿನ ಪ್ರಮಾಣ 46 ಟಿಎಂಸಿ ಮಾತ್ರವೇ ಇದೆ. ಬೆಂಗಳೂರಿಗೆ 24 ಟಿಎಂಸಿ ಕುಡಿಯುವ ನೀರಿಗೆ ಬೇಕು. 8 ಜಿಲ್ಲೆಗಳಿಗೆ 25 ಟಿಎಂಸಿ ಬೇಕು. ಕೃಷಿಗೆ 80 ಟಿಎಂಸಿ ಬೇಕು. ಹೀಗಿರುವಾಗ ನೀರು ಹರಿಸುವುದು ಹೇಗೆ? ಎಂದು ಎಂ.ಲಕ್ಷ್ಮಣ್ ಪ್ರಶ್ನಿಸಿದರು.
ಮುಂಗಾರು ಬಹಳ ವಿಫಲವಾಗಿದೆ. ಅಫಿಡವಿಟ್ ಸಲ್ಲಿಸಲಾಗಿದೆ. ತಂಡವನ್ನು ಕಳುಹಿಸಿಕೊಟ್ಟು ವಾಸ್ತವ ಪರಿಶೀಲನೆ ನಡೆಸುವಂತೆ ಮಾಡಬೇಕು. ಕೇಂದ್ರವು ನಮ್ಮ ರೈತರಿಗೂ ಪರಿಹಾರ ಕೊಡಬೇಕು. ನಿಜವಾಗಿಯೂ ರೈತರ ಬಗ್ಗೆ ಕಾಳಜಿ ಇದ್ದರೆ ವಾಸ್ತವ ಮಾತನಾಡಲಿ, ಗೊಂದಲ ಸೃಷ್ಟಿಸುವುದನ್ನು ಬಿಡಲಿ. ಪ್ರತಿಭಟನೆಗೆ ನಮ್ಮ ಬೆಂಬಲವಿದೆ. ಅದನ್ನು ಮಾಡಬೇಕಿರುವುದು ಕೇಂದ್ರ ಸರ್ಕಾರದ ವಿರುದ್ಧ. ಬಿಜೆಪಿಯ 25 ಸಂಸದರು ಈ ಬಗ್ಗೆ ದನಿ ಎತ್ತುತ್ತಿಲ್ಲವೇಕೆ? ಸುಮಲತಾ ಮಂಡ್ಯದ ಜನರ ಬಗ್ಗೆ ಕಾಳಜಿ ವಹಿಸುತ್ತಿಲ್ಲವೇಕೆ ಎಂದು ಎಂ ಲಕ್ಷ್ಮಣ್ ಪ್ರಶ್ನಿಸಿದರು.
Key words: mysore-KPCC spokesperson- M. Laxman- MP Ticket-Yathindra siddaramaiah